ದೌರ್ಜನ್ಯಕ್ಕೊಳಗಾದ ಮಹಿಳೆಯರ ಆಸರೆ ‘ವಿಶೇಷ ಚಿಕಿತ್ಸಾ ಘಟಕ’

Spread the love

ದೌರ್ಜನ್ಯಕ್ಕೊಳಗಾದ ಮಹಿಳೆಯರ ಆಸರೆ ‘ವಿಶೇಷ ಚಿಕಿತ್ಸಾ ಘಟಕ’

ಮ0ಗಳೂರು : ದೈಹಿಕ ಮತ್ತು ಲೈಂಗಿಕವಾಗಿ ಸೇರಿದಂತೆ ವಿವಿಧ ರೀತಿ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಸರ್ವರೀತಿಯಲ್ಲೂ ನೆರವು ನೀಡಲು ಮಂಗಳೂರಿನ ಲೇಡಿಘೋಷನ್ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿರುವ ವಿಶೇಷ ಚಿಕಿತ್ಸಾ ಘಟಕವು ನೊಂದ ಮಹಿಳೆಯರ ಪಾಲಿಗೆ ಆಸರೆಯಾಗಿ ಪರಿಣಮಿಸಿದೆ.

ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಚಿಕಿತ್ಸೆಗಾಗಿ, ಪೊಲೀಸ್ ನೆರವಿಗಾಗಿ, ಕಾನೂನಿನ ನೆರವಿಗಾಗಿ, ಆಪ್ತ ಸಮಾಲೊಚನೆಗಾಗಿ, ಪುನರ್ವಸತಿ ಸೌಲಭ್ಯಕ್ಕಾಗಿ ಬೇರೆ ಬೇರೆ ಸ್ಥಳಗಳಿಗೆ ಹೋಗಲು ತೊಂದರೆ ಮತ್ತು ಮುಜುಗರ ಅನುಭವಿಸುವುದು ಸಾಮಾನ್ಯ. ಇದನ್ನು ತಪ್ಪಿಸುವ ಸಲುವಾಗಿ ಕರ್ನಾಟಕ ಸರಕಾರ ಎಲ್ಲಾ ಜಿಲ್ಲೆಗಳಲ್ಲಿಯೂ ಮಹಿಳಾ ಮತ್ತು ಮಕ್ಕಳ ವಿಶೇಷ ಚಿಕಿತ್ಸಾ ಘಟಕವನ್ನು ಸ್ಥಾಪಿಸಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ನೆರವಿನಲ್ಲಿ ಮಂಗಳೂರಿನ ಸರಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಹಿಳಾ ಮತ್ತು ಮಕ್ಕಳ ವಿಶೇಷ ಚಿಕಿತ್ಸಾ ಘಟಕವನ್ನು 2014ರ ನವೆಂಬರ್ 1ರಂದು ಸ್ಥಾಪಿಸಲಾಗಿತ್ತು.

ಮೊದಲೇ ದೌರ್ಜನ್ಯದಿಂದ ನೊಂದ ಮಹಿಳೆ ಆಸ್ಪತ್ರೆ, ಪೊಲೀಸ್ ಠಾಣೆ ಎಂದೆಲ್ಲಾ ಅತ್ತಿಂದಿತ್ತ ಓಡಾಡುವಾಗ ಇನ್ನಷ್ಟು ನೋವು ಅನುಭವಿಸಬೇಕಾಗುತ್ತದೆ. ಇದನ್ನು ತಪ್ಪಿಸಲು ಈ ಘಟಕದ ಮೂಲ ಉದ್ದೇಶವೇ ಒಂದೇ ಸೂರಿನಡಿ ಎಲ್ಲಾ ಸೌಲಭ್ಯಗಳನ್ನು ನೊಂದ ಮಹಿಳೆಗೆ ಒದಗಿಸುವುದರ ಮೂಲಕ ಅವರಿಗೆ ಸಹಾಯ ಹಸ್ತ ನೀಡುವುದು.

ಮಹಿಳಾ ಮತ್ತು ಮಕ್ಕಳ ವಿಶೇಷ ಚಿಕಿತ್ಸಾ ಘಟಕದಲ್ಲಿ ಪಂಚಸೇವೆಗಳು ಲಭ್ಯವಿದ್ದು, ಅವುಗಳೆಂದರೆ ವೈದ್ಯಕೀಯ ನೆರವು, ಪೊಲೀಸ್ ನೆರವು, ಆಪ್ತ ಸಮಾಲೋಚನೆ, ಕಾನೂನು ಸಮಾಲೋಚನೆ, ಪುರ್ನವಸತಿ ಇಲ್ಲಿ ಎಲ್ಲಾ ಸೇವೆಗಳು ಉಚಿತವಾಗಿ ನುರಿತ ತಜ್ಞರಿಂದ ದೊರೆಯುತ್ತದೆ. ಈ ಕೇಂದ್ರವು ಯಾವುದೇ ಬೇಧವಿಲ್ಲದೇ ಎಲ್ಲಾ ನೊಂದ ಮಹಿಳೆಯರಿಗೂ ಸೇವೆ ನೀಡುತ್ತದೆ. ಇಲ್ಲಿಗೆ ಬರುವಂತಹ ಪ್ರಕರಣಗಳಿಗೆ ಅಗತ್ಯವಾದ ವೈದ್ಯಕೀಯ ನೆರವನ್ನು ನೀಡಿ, ಆಸ್ಪತ್ರೆಯ ಸರಹದ್ದಿನ ಪೊಲೀಸ್ ಠಾಣೆಯವರಿಗೆ ಸೂಚನಾಪತ್ರದ ಮೂಲಕ ಮಾಹಿತಿಯನ್ನು ನೀಡಲಾಗುತ್ತದೆ. ಈ ಮೂಲಕ ಪೊಲೀಸ್ ಇಲಾಖೆಯವರು ನೊಂದ ಮಹಿಳೆಗೆ ನ್ಯಾಯ ಒದಗಿಸುವುದರಲ್ಲಿ ಕಾರ್ಯ ನಿರತರಾಗುತ್ತಾರೆ. ಆಪ್ತ ಸಮಾಲೊಚಕರು ಸಮಾಲೋಚನೆ ನೀಡುವ ಮೂಲಕ ಮಾನಸಿಕ ಧೈರ್ಯವನ್ನು ಹೆಚ್ಚಿಸುತ್ತಾರೆ. ನೊಂದ ಮಹಿಳೆಗೆ ಪುನರ್ವಸತಿ ಅಗತ್ಯವಿದ್ದಲ್ಲಿ ಆಕೆಗೆ ಉಚಿತವಾಗಿ ಪುನರ್ವಸತಿ ಸೌಲಭ್ಯವನ್ನು ನೀಡಲಾಗುವುದು. ಕಾನೂನು ಸಮಾಲೋಚಕರು ಕಾನೂನಿನ ಬಗ್ಗೆ ಅರಿವು ಮೂಡಿಸಿ ಕಾನೂನಿನ ನೆರವನ್ನು ಉಚಿತವಾಗಿ ನೀಡುತ್ತಾರೆ.

ಈ ಘಟಕದಲ್ಲಿ ಓರ್ವ ಆಪ್ತ ಸಮಾಲೋಚಕರು, ಓರ್ವ ಮಹಿಳಾ ಪೊಲೀಸ್ ಅಧಿಕಾರಿ, ಇಬ್ಬರು ಕಾನೂನು ಸಮಾಲೋಚಕರು, ಮತ್ತು ಮೂವರು ಸಮಾಜ ಸೇವಕರು ಕಾರ್ಯ ನಿರ್ವಹಿಸುತ್ತಾರೆ. ಈ ಘಟಕವು ವಾರದ 7 ದಿನಗಳಲ್ಲಿಯೂ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತದೆ. ಈ ಮಹಿಳಾ ಘಟಕದ ಉಚಿತ ದೂರವಾಣಿ ಸಹಾಯವಾಣಿ ಸಂಖ್ಯೆ ಇದ್ದು, 181ಕ್ಕೆ ಕರೆ ಮಾಡಿ ಯಾವುದೇ ನೊಂದ ಮಹಿಳೆಯರು ಮಾಹಿತಿ ನೀಡಬಹುದು. ಇಲ್ಲಿಯವರೆಗೂ 330 ಪ್ರಕರಣಗಳು ನಮ್ಮ ಈ ಘಟಕದಲ್ಲಿ ದಾಖಲಾಗಿದ್ದು ಲೈಂಗಿಕ ದೌರ್ಜನ್ಯದ ಪ್ರಕರಣಗಳು ಪ್ರಮುಖವಾಗಿದೆ.

ಕರ್ನಾಟಕ ಸರಕಾರದ, ಸ್ಥೆರ್ಯ ನಿಧಿ ಯೋಜನೆಯ ಅಡಿಯಲ್ಲಿ ಆಸಿಡ್ ಧಾಳಿಗೊಳಗಾದ ಮಹಿಳೆಯರಿಗೆ, ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ಇತರೇ ತೀವ್ರತರ ದೌರ್ಜನ್ಯಕ್ಕೊಳಪಟ್ಟ ಮಹಿಳೆಯರಿಗಾಗಿ ರೂಪಾಯಿ 25,000 ಮೊತ್ತವನ್ನು ತುರ್ತು ಆರ್ಥಿಕ ಪರಿಹಾರ ಮೊತ್ತವಾಗಿ ನೀಡುತ್ತದೆ. ಸ್ಥೆರ್ಯ ಎಂದರೆ ಧೈರ್ಯ ಎಂಬ ಅರ್ಥ. ನೊಂದ ಮಹಿಳೆ ಯಾವುದಕ್ಕೂ ಕುಗ್ಗದೇ ಜೀವನ ನಿರ್ವಹಿಸುವ ಸಲುವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ದಕ್ಷಿಣ ಕನ್ನಡ, ಸ್ಥೆರ್ಯ ನಿಧಿಗೆ ಬಂದ ಪೂರ್ಣ ಪ್ರಮಾಣದ ಅನುದಾನವನ್ನು ಫಲಾನುಭವಿಗಳಿಗೆ ನೀಡುವುದರ ಮೂಲಕ ನೊಂದ ಮಹಿಳೆಯ ಆರ್ಥಿಕ ಪರಿಸ್ಥಿತಿಯನ್ನು ಸುಧಾರಣೆ ತರುವಲ್ಲಿ ಯಶಸ್ವಿಯಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಕಾನೂನು ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಒಂದುಗೂಡಿ ಹಲವಾರು ಕಾರ್ಯಕ್ರಮಗಳನ್ನು ಜನರಿಗೋಸ್ಕರ ಮಾಡಿರುತ್ತಾರೆ. ಇಂಥಹ ಕಾರ್ಯಕ್ರಮಗಳು, ಮಾಹಿತಿ ಶಿಬಿರಗಳು ಸರಕಾರದ ಸೌಲಭ್ಯಗಳನ್ನು, ಸರಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಉಪಯುಕ್ತವಾಗಿದೆ.

ಮಮತೆಯ ತೊಟ್ಟಿಲು ಎಂಬ ಹೊಸ ಯೋಜನೆ ಅನುಷ್ಟಾನಗೊಂಡಿದ್ದು ಹೆತ್ತವರಿಗೆ ಬೇಡವಾದ ಮಗುವನ್ನು ಎಲ್ಲಾದರೂ ಬಿಸಾಡುವ ಬದಲು ಅಂತಹ ಮಗುವನ್ನು ಈ ಮಮತೆಯ ತೊಟ್ಟಿಲಲ್ಲಿ ಇಟ್ಟರೆ ಆ ಮಗುವಿಗೆ ಉಜ್ವಲವಾದ ಭವಿಷ್ಯವನ್ನು ಸರಕಾರದ ವತಿಯಿಂದ ನೀಡಲಾಗುವುದು. ಈ ಘಟಕವು ನೊಂದ ಮಹಿಳೆಯ ನೋವಿಗೆ ಕಾನೂನಾತ್ಮಕವಾದ ದ್ವನಿಯಾಗುತ್ತದೆ. ಇಲ್ಲಿ ದತ್ತು ಪ್ರಕ್ರಿಯೆ ಮಾಹಿತಿಯನ್ನು ನೀಡಿ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಅಂತಹ ದಂಪತಿಗಳನ್ನು ಕಳುಹಿಸಿಕೊಡುತ್ತೇವೆ. ಇದರ ಮೂಲಕ ಮಕ್ಕಳಿಲ್ಲದವರಿಗೆ ಮಕ್ಕಳು ಹಾಗೆಯೇ ಹೆತ್ತವರಿಲ್ಲದವರಿಗೆ ಹೆತ್ತವರನ್ನು ನೀಡುವ ಅತ್ಯತ್ತಮ ಕೆಲಸ ಕಾನೂನಿನ ಚೌಕಟ್ಟಿನಲ್ಲಿ ನಡೆಯುತ್ತದೆ.

ಮಹಿಳಾ ಮತ್ತು ಮಕ್ಕಳದ ವಿಶೇಷ ಚಿಕಿತ್ಸಾ ಘಟಕದ ಆಪ್ತ ಸಮಾಲೋಚಕರು , ಹಲವು ಕಡೆ ಮಾಹಿತಿ ಶಿಬಿರವನ್ನು ಉಚಿತವಾಗಿ ನೀಡುತ್ತಾರೆ. ಇದರ ಮೂಲಕ ಮಹಿಳೆ/ಮಕ್ಕಳಲ್ಲಿ ಜಾಗೃತಿ ಮೂಡಿಸುವ ಸಣ್ಣ ಪ್ರಯತ್ನ ಮಾಡುತ್ತಾರೆ. ಹೆತ್ತವರಲ್ಲಿ ಮಕ್ಕಳಲ್ಲಿ ಸೇಫ್ ಟಚ್ /ಅನ್ ಸೇಪ್ ಟಚ್ ಮುಂತಾದ ಸೂಕ್ಷ್ಮವಾದ ವಿಚಾರಗಳ ಕುರಿತು ಜಾಗೃತಿ ಮೂಡಿಸುವ ಪ್ರಯತ್ನವಾಗಿದೆ.

ಮಂಗಳೂರಿನ ಲೇಡಿಘೋಷನ್ ಆಸ್ಪತ್ರೆಯಲ್ಲಿರುವ ಈ ಮಹಿಳಾ ಮತ್ತು ಮಕ್ಕಳ ವಿಶೇಷ ಚಿಕಿತ್ಸಾ ಘಟಕವು ನೊಂದ ಮಹಿಳೆಯರ ಪಾಲಿಗೆ ವರವಾಗಿದ್ದು, ಇಲ್ಲಿ ಇನ್ನಷ್ಟು ಸೌಲಭ್ಯಗಳನ್ನು ಕಲ್ಪಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮುಂದಾಗಿದೆ.


Spread the love