ಧರ್ಮವೆಂಬ ಅಫೀಮು ಜನರನ್ನು ಕೊಲ್ಲಿಸುತ್ತದೆ – ಸಾತಿ ಸುಂದರೇಶ್

Spread the love

ಧರ್ಮವೆಂಬ ಅಫೀಮು ಜನರನ್ನು ಕೊಲ್ಲಿಸುತ್ತದೆ –ಕಾ| ಸಾತಿ ಸುಂದರೇಶ್
ಮಂಗಳೂರು: ಜಾತಿಯೊಳಗೆ ವೈಷಮ್ಯ ಹುಟ್ಟಿಸಿ, ಹಿಂದೂ ಮುಸ್ಲಿಮರೊಳಗೆ ಜಗಳವೇರ್ಪಡಿಸಿ ಧರ್ಮವನ್ನು ಬೀದಿಗೆ ತಂದು ಸಾಮಾಜಿಕ ಶಾಂತಿಯನ್ನು ಛಿದ್ರಗೊಳಿಸಿರುವುದರಿಂದಲೇ ಬಂಡವಾಳಶಾಹಿಪರ ಬಿಜೆಪಿ ಇಂದು ಅಸ್ತಿತ್ವದಲ್ಲಿದೆ. ವಿಷಪೂರಿತ ಅಧರ್ಮದ ಭಾಷಣ ಮಾಡಿ ಜನರೊಳಗೆ ದ್ವೇóಷ ಹುಟ್ಟಿಸಿ ತನ್ನ ಸರಕಾರದ ತಪ್ಪು ನೀತಿಗಳನ್ನು ಮರೆಮಾಚುವುದೇ ಸಂಘಪರಿವಾರಿಗಳ ಸಂಚು ಆಗಿದೆ. ಆದುದರಿಂದ ಧರ್ಮವೆಂಬ ಈ ಅಫೀಮನ್ನು ಯುವಜನತೆ ನಶೆಯೇರಿಸಿಕೊಳ್ಳಬಾರದೆಂದು ಭಾರತ ಕಮ್ಯುನಿಸ್ ಪಕ್ಷ (ಸಿಪಿಐ) ದ ಕರ್ನಾಟಕ ರಾಜ್ಯ ಸಹಾಯಕ ಕಾರ್ಯದರ್ಶಿ ಕಾಮ್ರೇಡ್ ಸಾತಿ ಸುಂದರೇಶ್ ಸಲಹೆ ನೀಡಿದರು.
ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ)ದ ಮಂಗಳೂರು ತಾಲೂಕು ಸರ್ವಸದಸ್ಯರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಧರ್ಮವೆಂಬ ಅಫೀಮಿನ ನಶೆ ಏರಿರುವುದರಿಂದಲೇ ಕರಾವಳಿಯಲ್ಲಿ ಪ್ರವೀಣ್ ಪೂಜಾರಿ, ಹರೀಶ್ ಪೂಜಾರಿಯಂತವರು ಇಂದು ಹಿಂದೂಗಳೆಂಬ ಬಿಜೆಪಿಗರಿಂದಲೇ ಕೊಲೆಯಾಗುತ್ತಿರುವುದು. ದೇವಸ್ಥಾನವೊಂದರಲ್ಲಿ ಭ್ರಷ್ಠಾಚಾರದ ವಾಸನೆ ಬಂದಾಗ ಅದರ ಬಗ್ಗೆ ಮಾಹಿತಿ ಕೇಳಿದ ವಿನಾಯಕ ಬಾಳಿಗಾರೆಂಬ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನನ್ನು ಬಿಜೆಪಿ ಗೂಂಡಾಗಳೆ ಕೊಲೆ ಮಾಡಿ ಕೇಸನ್ನು ಮುಚ್ಚಲಾಗುತ್ತದೆ. ಈ ಅನಾಚಾರಗಳಿಗೆ ಕುಮ್ಮಕ್ಕು ಕೊಡುತ್ತಿರುವ ಹಿಂದೂ ನಾಯಕರೆನ್ನಿಸಿಕೊಳ್ಳುವವರಾಗಲೀ ಅವರ ಕುಟುಂಬಿಕರಾಗಲೀ ಸಾಯುವುದಿಲ್ಲ, ಬದಲಾಗಿ ಇಂತವರ ಭಾಷಣಗಳಿಂದ, ಕುಮ್ಮಕ್ಕುಗಳಿಂದ ಪ್ರಚೋದಿಸಲ್ಪಟ್ಟ ಸಾಮಾನ್ಯ ದುಡಿಯುವ ವರ್ಗದ ಯುವಕರೇ ಬಲಿಯಾಗುತ್ತಿರುವುದು. ಈ ಸತ್ಯವನ್ನು ನಾವು ಅರಿತುಕೊಳ್ಳಬೇಕಾಗಿದೆ ಎಂದು ಅವರು ಸೂಚಿಸಿದರು.
ಹಳೆಯ ನೋಟುಗಳನ್ನು ಬದಲಾಯಿಸಲು ಬೇಂಕುಗಳೆದುರು ಇರುವ ಸಾಲಿನಲ್ಲಿ ಮಾಲಕರಾಗಲೀ, ಕಾರ್ಪೊರೇಟ್ ವಲಯದ ಧಣಿಕರಾಗಲೀ ಕಾಣಸಿಗುವುದಿಲ್ಲ. ನಮ್ಮ ನಿಮ್ಮಂತಹ ಜನಸಮಾನ್ಯರು ಮಾತ್ರ ಸರತಿ ಸಾಲಿನಲ್ಲಿ ಕಾಣಸಿಗುತ್ತಾರೆ. ನೋಟು ರದ್ದತಿಯ ವಿಚಾರ ಯಾರಿಗೂ ಗೊತ್ತಿಲ್ಲವೆಂದಾದರೆ ಪಶ್ಚಿಮ ಬಂಗಾಳದ ಬಿಜೆಪಿಯವರು ನೋಟು ರದ್ದತಿಯ ಹಿಂದಿನ ದಿನ 1000 ಮತ್ತು 500 ರೂಗಳ ನೋಟುಗಳ ಮೂರು ಕೋಟಿ ಮೊತ್ತವನ್ನು ಒಮ್ಮಲೇ ಬೇಂಕಿಗೆ ಯಾಕೆ ಜಮಾ ಮಾಡಿದರು, ಹಳೆ ನೋಟು ರದ್ದತಿಗೆ ಮೊದಲೇ ಉತ್ತರಪ್ರದೇಶದ ಬಿಜೆಪಿ ನೇತಾರ ಕೇಶವದಾಸ್ ರ ಮಗಳ ಕೈಗೆ ಎರಡು ಸವಿರದ ಹೊಸ ನೋಟು ಹೇಗೆ ಬಂತು ಎಂಬುದನ್ನು ಜನ ಕೇಳಬೇಕು. ಬಿಜೆಪಿ ನಾಯಕರುಗಳಿಗೆ ನೋಟು ರದ್ದತಿಯ ವಿಚಾರ ಮೊದಲೇ ತಿಳಿದಿರುವುದರಿಂದ ಕಪ್ಪು ಹಣದಿಂದ ಅವರೆಲ್ಲಾ ಬಚಾವಾಗಿದ್ದಾರೆ. ಮೋದಿಯಂತಹ ಪ್ರಧಾನಿಯನ್ನು ಆಯ್ಕೆ ಮಾಡಿ ಜನ ತಪ್ಪು ಮಾಡಿದ್ದಾರೆಂಬ ಬಿಜೆಪಿ ನಾಯಕ ಅರುಣ್ ಶೌರಿಯವರ ಮಾತು ಅಕ್ಷರ: ನಿಜವಾಗಿದೆ ಎಂದು ಸಾತಿ ಸುಂದರೇಶ್ ಆರೋಪಿಸಿದರು.
ಸಭೆಯ ಅಧ್ಯಕ್ಷತೆಯನ್ನು ಹೆಚ್.ವಿ ರಾವ್ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್ ಸಾಂದರ್ಭಿಕವಾಗಿ ಮಾತನಾಡಿದರು. ಎ. ಪ್ರಭಾಕರ್ ರಾವ್, ಕೆ. ತಿಮ್ಮಪ್ಪ, ಆರ್ಡಿ ಸೋನ್ಸ್, ಸುಲೋಚನ, ಕಲ್ಯಾಣಿ ಮೊದಲಾದವರು ಚರ್ಚೆಯಲ್ಲಿ ಭಾಗವಹಿಸಿದರು. ತಾಲೂಕು ಕಾರ್ಯದರ್ಶಿ ವಿ.ಎಸ್. ಬೇರಿಂಜ ಸ್ವಾಗತಿಸಿ ಮಂಗಳೂರು ತಾಲೂಕಿನ ಪಕ್ಷದ ಚಟುವಟಿಕೆ ಮತ್ತು ರಾಜಕೀಯ ಸಂಘಟನಾ ವರದಿ ನೀಡಿದರು. ಎಂ. ಕರುಣಾಕರ್ ವಂದಿಸಿದರು.


Spread the love