ಧರ್ಮಸ್ಥಳದಲ್ಲಿ ನಿರ್ಗತಿಕ ಕುಟುಂಬಗಳಿಗೆ ಮಾಸಾಶನ ವಿತರಣೆ 

Spread the love

ಧರ್ಮಸ್ಥಳ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಸ್ವ-ಸಹಾಯ ಸಂಘಗಳ ಮೂಲಕ ಮಾಡಿದ ಸಾಧನೆ, ಪ್ರಗತಿ, ಆರ್ಥಿಕ ಸ್ವಾವಲಂಬನೆ ಮತ್ತು ಮಹಿಳಾ ಸಬಲೀಕರಣ ದೇಶಕ್ಕೆ ಮಾದರಿಯಾಗಿದೆ ಹಾಗೂ ಅನುಕರಣೀಯವಾಗಿದೆ ಎಂದು ಐ.ಡಿ.ಬಿ.ಐ. ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಕಿಶೋರ್ ಖಾರಟ್ ಹೇಳಿದರು.

image001dharmasthala-monthly-pension-20160516 image002dharmasthala-monthly-pension-20160516 image003dharmasthala-monthly-pension-20160516 image004dharmasthala-monthly-pension-20160516 image005dharmasthala-monthly-pension-20160516

ಧರ್ಮಸ್ಥಳದಲ್ಲಿ ಸೋಮವಾರ 581 ನಿರ್ಗತಿಕ ಕುಟುಂಬಗಳಿಗೆ 37 ಲಕ್ಷ ರೂ. ಮಾಸಾಶನ ವಿತರಿಸಿ ಅವರು ಮಾತನಾಡಿದರು.
ದೇಶದಲ್ಲಿ ವಿವಿಧ ಬ್ಯಾಂಕ್‍ಗಳು ಸ್ವ-ಸಹಾಯ ಸಂಘಗಳಿಗೆ ಐದು ಸಾವಿರ ಕೋಟಿ ರೂ. ಸಾಲ ನೀಡಿವೆ. ದೀನ-ದಲಿತರು, ದುರ್ಬಲ ವರ್ಗದವರು ವಿಶ್ವಾಸಾರ್ಹರು ಹಾಗೂ ಅವರಿಗೆ ನೀಡಿದ ಸಾಲ ಶೇ. ನೂರರಷ್ಟು ವಸೂಲಾತಿ ಆಗುತ್ತದೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಫಲಾನುಭವಿಗಳ ಶಿಸ್ತು, ಪ್ರಾಮಾಣಿಕತೆ ಮತ್ತು ದಕ್ಷತೆಯನ್ನು ಅವರು ಶ್ಲಾಘಿಸಿ ಅಭಿನಂದಿಸಿದರು. ಸ್ವ-ಸಹಾಯ ಸಂಘಗಳ ಮೂಲಕ ಆರ್ಥಿಕ ಸಬಲೀಕರಣ ಪಡೆದು ಸ್ವಾವಲಂಬಿ ಜೀವನ ನಡೆಸಬಹುದು ಎಂದು ಧರ್ಮಸ್ಥಳ ಯೋಜನೆ ಸಾಧಿಸಿ ತೋರಿಸಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಫಲಾನುಭವಿ ಚಂಪಾ ತನ್ನ ಅನಿಸಿಕೆ ವ್ಯಕ್ತ ಪಡಿಸಿದರು.
ಅಧ್ಯಕ್ಷತೆ ವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಪರಾವಲಂಬನೆ ಸಲ್ಲದು. ಸರ್ಕಾರ ಹಾಗೂ ವಿವಿಧ ಸಂಘಟನೆಗಳ ಸೌಲಭ್ಯಗಳ ಸದುಪಯೋಗ ಪಡೆದು ಆರ್ಥಿಕ ಸ್ವಾವಲಂಬನೆಯೊಂದಿಗೆ ಫಲಾನುಭವಿಗಳು ಸ್ವತಂತ್ರ ಜೀವನ ನಡೆಸಬೇಕು. ಗ್ರಾಮಾಭಿವೃದ್ಧಿ ಯೋಜನೆಯಿಂದಾಗಿ ಮಹಿಳಾ ಸಬಲೀಕರಣವಾಗಿ ಈಗ ಮಹಿಳೆಯರು ಪ್ರಗತಿಪರ ಚಿಂತನೆಯೊಂದಿಗೆ ಗೃಹಾಡಳಿತ ನಡೆಸಿ ವ್ಯವಹಾರ ತಜ್ಞರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು. ಈಗ ಸಾಮಾಜಿಕ ಪರಿವರ್ತನೆಯಾಗಿದ್ದು ಪುರುಷರು ಮತ್ತು ಮಹಿಳೆಯರು ಸಮಾನ ಮನಸ್ಕರಾಗಿ ಸಂಸಾರ ಮತ್ತು ಸಮಾಜವನ್ನು ಮುನ್ನಡೆಸಬೇಕು ಎಂದು ಅವರು ಕಿವಿ ಮಾತು ಹೇಳಿದರು.
ಐ.ಡಿ.ಬಿ.ಐ. ಮುಖ್ಯ ಪ್ರಬಂಧಕರಾದ ನಾರಾಯಣಮೂರ್ತಿ, ಶ್ರೀನಿವಾಸನ್, ಸುರೇಶ್ ಮತ್ತು ಹಿರಿಯ ಅಧಿಕಾರಿ ಡಿಂಪಲ್ ಉಪಸ್ಥಿತರಿದ್ದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ. ಎಲ್. ಎಚ್. ಮಂಜುನಾಥ್ ಸ್ವಾಗತಿಸಿದರು. ಬೆಳ್ತಂಗಡಿ ತಾಲ್ಲೂಕು ಯೋಜನಾಧಿಕಾರಿ ರೂಪಾ ಜೈನ್ ಧನ್ಯವಾದವಿತ್ತರು. ಮಮತಾ ರಾವ್ ಕಾರ್ಯಕ್ರಮ ನಿರೂಪಿಸಿದರು.


Spread the love