ಧರ್ಮಸ್ಥಳ ಲಕ್ಷದೀಪೋತ್ಸವ: ಬೆಳ್ತಂಗಡಿ ತಾಲ್ಲೂಕಿನಾದ್ಯಂತ ಸ್ವಚ್ಛತಾ ಅಭಿಯಾನ

Spread the love

ಧರ್ಮಸ್ಥಳ ಲಕ್ಷದೀಪೋತ್ಸವ: ಬೆಳ್ತಂಗಡಿ ತಾಲ್ಲೂಕಿನಾದ್ಯಂತ ಸ್ವಚ್ಛತಾ ಅಭಿಯಾನ

ಉಜಿರೆ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವ ಕಾರ್ಯಕ್ರಮಗಳು ಇದೇ 22 ರಿಂದ 27 ರ ವರೆಗೆ ನಡೆಯಲಿದ್ದು ಇದಕ್ಕೆ ಪೂರ್ವಭಾವಿಯಾಗಿ ಭಾನುವಾರ ಬೆಳ್ತಂಗಡಿ ತಾಲ್ಲೂಕಿನಾದ್ಯಂತ ನಡೆದ ಸ್ವಚ್ಛತಾ ಕಾರ್ಯದಲ್ಲಿ ಸಹಸ್ರಾರು ಜನ ಸ್ವಯಂ ಪ್ರೇರಣೆಯಿಂದ ಭಾಗವಸಿದರು.

ಉಜಿರೆಯಿಂದ ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ತನಕ, ಬೆಳ್ತಂಗಡಿಯಿಂದ ಉಜಿರೆ ಪೇಟೆ ವರೆಗೆ, ಬೆಳ್ತಂಗಡಿ ಸಂತೆಕಟ್ಟೆಯಿಂದ ಬಸ್ ನಿಲ್ದಾಣದ ತನಕ, ಗುರುವಾಯನಕೆರೆ ಪೇಟೆಯಿಂದ ವಾಣಿ ವಿದ್ಯಾ ಸಂಸ್ಥೆಗಳ ವರೆಗೆ, ಮಡಂತ್ಯಾರು ಪೇಟೆ, ನಾರಾವಿ ಪೇಟೆ, ಹೊಸಂಗಡಿ, ಪಿಲ್ಯ, ಅಳದಂಗಡಿಯಲ್ಲಿ ಭಾನುವಾರ ಬೆಳಿಗ್ಯೆ ಏಳು ಗಂಟೆಯಿಂದ ಒಂಬತ್ತು ಗಂಟೆ ವರೆಗೆ ಜಾತಿ-ಮತ, ವಯಸ್ಸಿನ ಅಂತರವಿಲ್ಲದೆ ಸಾರ್ವಜನಿಕರು, ವಿದ್ಯಾರ್ಥಿಗಳು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ಹಾಗೂ ಸ್ವಚ್ಛತಾ ಸೇನಾನಿಗಳು ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದರು. 21 ಕಡೆಗಳಲ್ಲಿ ನಡೆದ ಸ್ವಚ್ಛತಾ ಅಭಿಯಾನದಲ್ಲಿ 1728 ಮಂದಿ ಸ್ವಯಂ ಸೇವಕರು ಭಾಗವಹಿಸಿದರು. 413 ಗೋಣಿ ಚೀಲಗಳಲ್ಲಿ ಕಸವನ್ನು ಸಂಗ್ರಹಿಸಿ ಗ್ರಾಮ ಪಂಚಾಯಿತಿ ಹಾಗೂ ನಗರ ಪಂಚಾಯಿತಿ ಸ್ವಚ್ಛತಾ ವಾಹನದ ಮೂಲಕ ವಿಲೇವಾರಿ ಮಾಡಲಾಯಿತು.

ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್, ಕಲ್ಮಂಜ ವೀರಕೇಸರಿ ಘಟಕ, ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಎಂ. ಶೆಟ್ಟಿ, ಉಜಿರೆಯ ಡಾ. ಎಂ.ಎಂ. ದಯಾಕರ್, ಭರತ್ ಕುಮಾರ್, ಮೋಹನ ಶೆಟ್ಟಿಗಾರ್, ರಾಮಚಂದ್ರ ಶೆಟ್ಟಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಎ. ಶ್ರೀಹರಿ, ಬೂದಪ್ಪ ಗೌಡ, ನಿರ್ದೇಶಕ ಲಕ್ಷ್ಮಣ ಎಂ. ಹಾಗೂ ಯೋಜನಾಧಿಕಾರಿಗಳಾದ ಜಯಕರ ಶೆಟ್ಟಿ, ಪ್ರವೀಣ ಕುಮಾರ್ ಮೊದಲಾದವರು ಅಭಿಯಾನದ ನೇತೃತ್ವ ವಹಿಸಿದರು.

ಕಳೆದ ಒಂದು ವರ್ಷದಲ್ಲಿ ಸ್ವಚ್ಛತಾ ಸೇನಾನಿಗಳು 481 ಸ್ವಚ್ಛತಾ ಕಾರ್ಯಕ್ರಮಗಳನ್ನು ನಡೆಸಿದ್ದು 21,986 ಮಂದಿ ಸ್ವಯಂ ಸೇವಕರಾಗಿ ಭಾಗವಹಿಸಿದ್ದಾರೆ.

ಇದೇ 22 ರಂದು ಶುಕ್ರವಾರ ಉಜಿರೆ ಮೂಲಕ ಹತ್ತು ಸಾವಿರಕ್ಕೂ ಮಿಕ್ಕಿ ಭಕ್ತರು ಹಾಗೂ ಸಾರ್ವಜನಿಕರು ಧರ್ಮಸ್ಥಳಕ್ಕೆ ಪಾದಯಾತ್ರೆ ಮಾಡಲಿದ್ದಾರೆ ಎಂದು ಪಾದಯಾತ್ರೆ ಸಮಿತಿಯವರು ತಿಳಿಸಿದ್ದಾರೆ.


Spread the love