ಧಾರ್ಮಿಕ ಕೇಂದ್ರಗಳು, ಹೊಟೇಲ್, ರೆಸ್ಟೋರೆಂಟ್ ಗಳ ಮರು ಆರಂಭ:ಕೇಂದ್ರದ ಅನುಮತಿಗೆ ಕಾಯುತ್ತಿದೆ ರಾಜ್ಯ ಸರ್ಕಾರ

Spread the love

ಧಾರ್ಮಿಕ ಕೇಂದ್ರಗಳು, ಹೊಟೇಲ್, ರೆಸ್ಟೋರೆಂಟ್ ಗಳ ಮರು ಆರಂಭ:ಕೇಂದ್ರದ ಅನುಮತಿಗೆ ಕಾಯುತ್ತಿದೆ ರಾಜ್ಯ ಸರ್ಕಾರ

ಬೆಂಗಳೂರು: ಕೊರೋನಾ ವೈರಸ್ ಲಾಕ್ ಡೌನ್ ನಿಂದ ರಾಜ್ಯಾದ್ಯಂತ ಧಾರ್ಮಿಕ ಕೇಂದ್ರಗಳನ್ನು ಮುಚ್ಚಿದ್ದು ಅದನ್ನು ತೆರೆಯುವುದು ಮತ್ತು ಹಿಂದಿನ ಸ್ಥಿತಿಗೆ ತರುವುದು ಸವಾಲಾಗಿದೆ. ದೇವಸ್ಥಾನ, ಚರ್ಚ್, ಮಸೀದಿಗಳಲ್ಲಿ ಜನರು ಸೇರಿ ಸಾಮಾಜಿಕ ಅಂತರ ಪರಿಕಲ್ಪನೆಗೆ ತೊಂದರೆಯಾಗುವುದನ್ನು ತಪ್ಪಿಸುವುದು ಧಾರ್ಮಿಕ ಕೇಂದ್ರವನ್ನು ಮುಚ್ಚಿದ್ದರ ಮುಖ್ಯ ಉದ್ದೇಶವಾಗಿತ್ತು.

ಇಂದು ಬೆಂಗಳೂರಿನಲ್ಲಿ ಮಾಜಿ ಪ್ರಧಾನಮಂತ್ರಿ ದಿ.ಪಂಡಿತ್ ಜವಹರಲಾಲ್ ನೆಹರೂರವರ 56 ನೇ ಪುಣ್ಯತಿಥಿಯ ಸಂಬಂಧ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಯಡ್ಯೂರಪ್ಪ, ಮೇ 31ರ ನಂತರ ರಾಜ್ಯದಲ್ಲಿ ದೇವಸ್ಥಾನ, ಚರ್ಚ್, ಮಸೀದಿಗಳನ್ನು ತೆರೆಯಲಾಗುವುದು ಎಂದು ಹೇಳಿದರು.

ಆದರೆ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ ಕೇಂದ್ರ ಸರ್ಕಾರದ ಅನುಮತಿಗೆ ರಾಜ್ಯ ಕಾಯುತ್ತಿದ್ದು ಜೂನ್ 1ರ ನಂತರ ಅನುಮತಿ ಸಿಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಮುಖ್ಯಮಂತ್ರಿಗಳು ಅನುಮತಿ ಕೋರಿ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಹೊಟೇಲ್, ರೆಸ್ಟೋರೆಂಟ್ ಗಳ ತೆರೆಯುವಿಕೆಗೆ ಸಹ ಕೇಂದ್ರ ಸರ್ಕಾರದ ಅನುಮತಿಗೆ ರಾಜ್ಯ ಸರ್ಕಾರ ಕಾಯುತ್ತಿದೆ.

ಲಾಕ್ ಡೌನ್ ನಿಯಮದಲ್ಲಿ ಬದಲಾವಣೆ ಮಾಡಲು ಬಿಜೆಪಿ ಆಡಳಿತವಿರುವ ರಾಜ್ಯಗಳು ಕೇಂದ್ರ ಸರ್ಕಾರದ ಮಾರ್ಗಸೂಚಿಗೆ ಕಾಯುತ್ತಿವೆ.

ಈ ಸಂಬಂಧ ನಾಳೆ ಸಚಿವ ಸಂಪುಟ ಸಭೆ ನಡೆಯಲಿದ್ದು ಅಲ್ಲಿ ಧಾರ್ಮಿಕ ಸ್ಥಳಗಳಾದ ದೇವಸ್ಥಾನ, ಚರ್ಚ್, ಮಸೀದಿಗಳನ್ನು ಆರಂಭಿಸುವ ಬಗ್ಗೆ ಮಾತುಕತೆ ನಡೆಯಲಿದೆ ಎನ್ನಲಾಗುತ್ತಿದೆ.


Spread the love