ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕಿಗೆ ವಂಚಿಸಲು ಯತ್ನ – ವೈದ್ಯೆ ಸೇರಿ ಇಬ್ಬರನ್ನು ಬಂಧಿಸಿದ ಕಾಪು ಪೊಲೀಸರು

Spread the love

ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕಿಗೆ ವಂಚಿಸಲು ಯತ್ನ – ವೈದ್ಯೆ ಸೇರಿ ಇಬ್ಬರನ್ನು ಬಂಧಿಸಿದ ಕಾಪು ಪೊಲೀಸರು

ಕಾಪು : ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕಿಗೆ ವಂಚಿಸಲು ಯತ್ನಿಸಿರುವ ಆರೋಪದಡಿ ವೈದ್ಯೆ ಸೇರಿದಂತೆ ಇಬ್ಬರನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಉಪ್ಪೂರು ಸಾಲ್ಮರ ನಿವಾಸಿ ಡಾ.ರಿನೇಟ್ ಸೋನಿಯಾ ಡಿಸೋಜ(37) ಹಾಗೂ ಸಾಲಿಗ್ರಾಮ ಚಿತ್ರಪಾಡಿಯ ವಿಜಯ ಕೊಠಾರಿ(43) ಎಂದು ಗುರುತಿಸಲಾಗಿದೆ.

ಡಾ.ರಿನೆಟ್ ಮಣಿಪಾಲ ಕೆಎಂಸಿ ಆಸ್ಪತ್ರೆ ಮತ್ತು ಮಣಿಪಾಲ ಮಾಹೆಯಲ್ಲಿ ವೈದ್ಯೆ ಹಾಗೂ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದು, ಜು.13ರಂದು ಆಕೆ ಮತ್ತು ಆಕೆಯ ಸಹೋದರನಿಗೆ ವಾಹನ ಖರೀದಿಸಲು ಸಾಲ ನೀಡುವಂತೆ ಬ್ಯಾಂಕ್ ಆಫ್ ಬರೋಡಾ ಮೂಡಬೆಟ್ಟು ಶಾಖೆಗೆ ದಾಖಲಾತಿಗಳನ್ನು ಸಲ್ಲಿಸಿದ್ದರು. ಅರ್ಜಿಯೊಂದಿಗೆ ಸಲ್ಲಿಸಿದ ಮಣಿಪಾಲ ಮಾಹೆಯ ವೇತನ ಸ್ಲಿಪ್ಗಳನ್ನು ಬ್ಯಾಂಕಿನವರು ಪರಿಶೀಲಿಸಿದ್ದು, ಮಾಹೆ ಇ-ಮೈಲ್ ಮೂಲಕ ಬ್ಯಾಂಕಿಗೆ ಸಲ್ಲಿಸಿರುವ ದೃಢಪತ್ರದಿಂದ ಆಕೆ ಈ ಸಂಸ್ಥೆಯಲ್ಲಿ ಉದ್ಯೋಗದಲ್ಲಿ ಇಲ್ಲ ಎಂಬುದು ತಿಳಿದುಬಂದಿದೆ. ಅದರಂತೆ ಜು.24ರಂದು ಬ್ಯಾಂಕಿನ ಮೆನೇಜರ್ ಅಲ್ವಿನಾ ಡಿಸೋಜ ನೀಡಿದ ದೂರಿನಂತೆ ಡಾ.ರಿನೆಟ್ ವಿರುದ್ಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರು ಆರೋಪಿ ಡಾ.ರಿನೇಟ್ ಡಿಸೋಜ ಜು.24ರಂದು ಬರೋಡಾ ಬ್ಯಾಂಕ್ ಕಟಪಾಡಿ ಶಾಖೆಗೆ ಬಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆಕೆ, ನನಗೆ ವಿಜಯ ಕೊಠಾರಿ ಸಾಲಕ್ಕೆ ಅರ್ಜಿ ಸಲ್ಲಿಸಲು ನಕಲಿ ದಾಖಲಾತಿಗಳನ್ನು ಮಾಡಿಕೊಟ್ಟಿರುವುದಾಗಿ ತಿಳಿಸಿದ್ದಳು. ಅದರಂತೆ ಪೊಲೀಸರು ವಿಜಯ ಕೊಠಾರಿಯನ್ನು ಬಂಧಿಸಿ, ಆತ ನಕಲಿ ದಾಖಲೆ ತಯಾರಿಸುತ್ತಿದ್ದ ಲ್ಯಾಪ್ಟಾಪ್ನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರಪಡಿಸಲಾಗಿದೆ.

ಆರೋಪಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಧಿಕ ಮೊತ್ತದ ಸಾಲ ಪಡೆದು ಬ್ಯಾಂಕಿಗೆ ಮೋಸ ಮಾಡುವುದನ್ನು ಬ್ಯಾಂಕಿನ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ತಪ್ಪಿದಂತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕಾರ್ಯಾಚರಣೆಯನ್ನು ಕಾಪು ಎಸ್ಸೈ ರಾಜಶೇಖರ್ ಬಿ.ಸಾಗನೂರ್, ಅಪರಾಧ ವಿಭಾಗದ ಎಸ್ಸೈ ಐ.ಆರ್.ಗಡ್ಡೆಕರ್, ಪ್ರೊಬೆಷನರಿ ಎಸ್ಸೈ ಅನಿಲ್ ಮಾದರ, ಸಿಬ್ಬಂದಿಗಳಾದ ರವಿ ಕುಮಾರ್, ರಮೇಶ್, ಮಹಾಬಲ ಶೆಟ್ಟಿಗಾರ್, ಸುಲೋಚನಾ, ಶ್ರೀನಾಥ, ಪರಶುರಾಮ, ಅರುಣ್ ಕುಮಾರ್, ಆನಂದ ಭಾಗವಹಿಸಿದ್ದಾರೆ.


Spread the love