ನಾಡಿನ ಮಂಗಲಕ್ಕೆ ಗೋಮಂಗಲ ಯಾತ್ರೆ-ವಿಶ್ವ ಪ್ರಸನ್ನ ತೀರ್ಥರು

Spread the love

ನಾಡಿನ ಮಂಗಲಕ್ಕೆ ಗೋಮಂಗಲ ಯಾತ್ರೆ-ವಿಶ್ವ ಪ್ರಸನ್ನ ತೀರ್ಥರು

ಉಡುಪಿ: ಗೋವಿನ ಸಂಕುಲ ಚೆನ್ನಾಗಿದ್ದರೆ ಮಾತ್ರ ನಾಡು ದೇಶ ಸುಭಿಕ್ಷೆ- ಸಮೃದ್ಧಿ ಕಾಣಲು ಸಾಧ್ಯ . ಗೋವು ನೋವನ್ನು ಅನುಭವಿಸುತ್ತಿದೆ ಎಂದರೆ ಇಡೀ ಸಮಾಜಕ್ಕೆ ನೋವು ಕಾದಿದೆ ಎಂದೇ ಅರ್ಥ. .ಆದ್ದರಿಂದ ಗೋವಿನ ಹೆಸರಲ್ಲಿ ಮಂಗಲ ಯಾತ್ರೆ ಎಂದರೆ ಅದು ನಮ್ಮ , ಸಮಾಜದ ಮಂಗಲಕ್ಕಾಗಿಯೇ ಹೊರತು ಗೋವಿಗಾಗಿ ಅಲ್ಲ.ಆದ್ದರಿಂದ ನಮ್ಮೆಲ್ಲರ ಯೋಗಕ್ಷೇಮಕ್ಕಾಗಿ ಗೋವಿನ ಹಿತವನ್ನು ಕಾಯಲೇ ಬೇಕಾಗಿದೆ .ಆ ಸತ್ಪ್ರೇರಣೆಯನ್ನು ನಾವೂ ಪಡೆದು ಸಮಾಜಕ್ಕೂ ನೀಡುವುದಕ್ಕಾಗಿ ನಡೆಯುವ ಗೋಮಂಗಲ ಯಾತ್ರೆಯಲ್ಲಿ ಸಮಸ್ತ ಸಮಾಜ ಉತ್ಸಾಹ ಶ್ರದ್ಧೆಯಿಂ ದ ಭಾಗವಹಿಸಬೇಕು ಎಂದು ನೀಲಾವರ ಗೋಶಾಲೆಯ ಮುಖ್ಯಸ್ಥರೂ ,ಪೇಜಾವರ ಕಿರಿಯ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀ ಪಾದರು ಕರೆ ನೀಡಿದ್ದಾರೆ.

go-yatra-meeting

ರಾಮಚಂದ್ರಾಪುರ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ವಿಶ್ವ ಗೋಮಂಗಲ ಯಾತ್ರೆಯು ಜನವರಿ 20ರಂದು ಉಡುಪಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅಂದು ನಡೆಯಲಿರುವ ಶೋಭಾಯಾತ್ರೆ ರಾಜಾಂಗಣದಲ್ಲಿ ನಡೆಯುವ ಬೃಹತ್ ಸಮಾವೇಶದ ಯಶಸ್ಸಿಗಾಗಿ ಕೃಷ್ಣ ಮಠದಲ್ಲಿ ನಡೆದ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಸಂದೇಶ ನೀಡಿದರು.

ಶ್ರೀ ವಿಶ್ವೇಶ ತೀರ್ಥರು ಸಾನ್ನಿಧ್ಯ ವಹಿಸಿ ಸಮಸ್ತ ಭಾರತದ ಹಿತ ಗೋವಿನಲ್ಲಿದೆ. ರಾಜಕೀಯ ಹಿತಾಸಕ್ತಿಗಳನ್ನು ಮರೆತು ಇಂಥಹ ಜಾಗೃತಿ ಕಾರ್ಯಗಳಲ್ಲಿ ಪಾಲ್ಗೊಂಡು ರಾಷ್ಟ್ರ ಕಾರ್ಯದಲ್ಲಿ ಒಂದಾಗಿ ಹೆಜ್ಜೆ ಹಾಕಬೇಕೆಂದರು.

ರಾ ಸ್ವ ಸಂ ಮುಖಂಡ ,ಯಾತ್ರೆಯ ಮಾರ್ಗದರ್ಶಕ ಡಾ ಕಲ್ಲಡ್ಕ ಪ್ರಭಾಕರ ಭಟ್ ಉಡುಪಿಯ ಪ್ರತೀ ಮನೆಯಿಂದ ನಾಗರಿಕರು ಯಾತ್ರೆಗೆ ಆಗಮಿಸಬೇಕೆಂದು ತಿಳಿಸಿ ಸೂಕ್ತ ನಿರ್ದೇಶನ ನೀಡಿದರು.

ಕಪಿಲಾಶ್ರಮದ ಶ್ರೀ ರಾಮಚಂದ್ರ ಸ್ವಾಮೀಜಿ ಉಪಸ್ಥಿತರಿದ್ದರು. ಯಾತ್ರೆಯ ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷ ಎ ಜಿ ಕೊಡ್ಗಿ ಅಧ್ಯಕ್ಷತೆ ವಹಿಸಿದ್ದರು.ಕಾರ್ಯದರ್ಶಿ ಸುಪ್ರಸಾದ್ ಪ್ರಸ್ತಾವನೆಗೈದರು. ಮಾಜಿ ಶಾಸಕ ಕೆ ರಘುಪತಿ ಭಟ್ ,ಲಾಲಾಜಿ ಮೆಂಡನ್ ,ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ , ಉಪ್ಪುಂದ ಚಂದ್ರಶೇಖರ ಹೊಳ್ಳ ,ಶಂಭು ಶೆಟ್ಟಿ ಮಠದ ದಿವಾನ ಎಂ ರಘುರಾಮಾಚಾರ್ಯ ,ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.
ಡಾ ಪಾದೆಕಲ್ಲು ವಿಷ್ಣು ಭಟ್ ಸ್ವಾಗತ , ಡಾ ಎಸ್ ಎಲ್ ಕರ್ಣಿಕ್ ವಂದನಾರ್ಪಣೆಗೈದರು. ಎಚ್ ಎನ್ ವೆಂಕಟೇಶ್ ನಿರೂಪಿಸಿದರು.


Spread the love