ನಾಮಪತ್ರ ಹಿಂಪಡೆಯುವುದಿಲ್ಲ: ಬಂಡಾಯ ಅಭ್ಯರ್ಥಿ ಅಮೃತ್‌ ಶೆಣೈ

Spread the love

ನಾಮಪತ್ರ ಹಿಂಪಡೆಯುವುದಿಲ್ಲ: ಬಂಡಾಯ ಅಭ್ಯರ್ಥಿ ಅಮೃತ್‌ ಶೆಣೈ

ಉಡುಪಿ: ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರ್ಧಾರ ಅಚಲ. ಯಾವುದೇ ಕಾರಣಕ್ಕೂ ನಾಮಪತ್ರ ಹಿಂಪಡೆಯುವುದಿಲ್ಲ ಎಂದು ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಅಮೃತ್‌ ಶೆಣೈ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರದಲ್ಲಿ ಜೆಡಿಎಸ್‌ಗೆ ಜನಬೆಂಬಲ ಇಲ್ಲ. ಪ್ರಬಲ ಅಭ್ಯರ್ಥಿ ಕೂಡ ಇಲ್ಲ. ಹಾಗಾಗಿ ಕಾರ್ಯಕರ್ತರ ಶ್ರಮ ವ್ಯರ್ಥ ಮಾಡಬೇಡಿ. ಈಗಾಗಲೇ ಜಿಲ್ಲೆಯಾದ್ಯಂತ ಶೋಭಾ ಕರಂದ್ಲಾಜೆ ವಿರುದ್ಧದ ವಾತಾವಾರಣ ಇದೆ ಎಂಬ ವಿಚಾರವನ್ನೂ ಮನವರಿಕೆ ಮಾಡಿದ್ದೇವೆ. ಆದರೂ ಪಕ್ಷದಲ್ಲಿ ಸಕ್ರಿಯರಾಗಿರುವ ಕಾರ್ಯಕರ್ತರ ಗಮನಕ್ಕೆ ತರದೆ, ಏಕಾಏಕಿ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಹೈಕಮಾಂಡ್‌ ಉಡುಪಿ–ಚಿಕ್ಕಮಗಳೂರು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ನಿರ್ಧಾರ ಪ್ರಕಟಿಸುತ್ತಿದ್ದಂತೆ ಕೆಪಿಸಿಸಿ ಪದಾಧಿ ಕಾರಿ ಭೇಟಿಯಾಗಿ ವಿರೋಧ ವ್ಯಕ್ತಪಡಿಸಿ ದ್ದೇವೆ. ಜಿಲ್ಲೆಯ ಎಲ್ಲ ನಾಯಕರು ಹೈಕಮಾಂಡ್‌ ತೀರ್ಮಾ ನವನ್ನು ಖಂಡಿಸಿದ್ದಾರೆ. ಆದರೂ ಈ ಬಗ್ಗೆ ಹೈಕಮಾಂಡ್‌ ತಲೆಕೆಡಿಸಿಕೊಳ್ಳಲಿಲ್ಲ. ಈಗ ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ರನ್ನು ಕಣಕ್ಕಿಳಿಸಿದೆ ಇದು ದುರದೃಷ್ಟಕರ. ಹಾಗಾಗಿ, ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೂಲಕ ಹೈಕಮಾಂಡ್‌ಗೆ ಸೂಕ್ತ ಸಂದೇಶ ರವಾನಿಸಲು ನಿರ್ಧರಿಸಿದ್ದೇನೆ ಎಂದರು.

ಪ್ರಮೋದ್‌ ಮಧ್ವರಾಜ್‌ ಜೆಡಿಎಸ್‌ ಅಭ್ಯರ್ಥಿ ಎಂಬುದನ್ನು ಒಪ್ಪಲಾಗುತ್ತಿಲ್ಲ. ನಾಮಪತ್ರ ಸಲ್ಲಿಸು ವುದಕ್ಕೂ ಮುನ್ನ ನನ್ನ ಬಳಿ ಬಂದು, ಸರಿಯಾಗಿ ಆಲೋಚಿಸಿ, ದುಡುಕಿನ ನಿರ್ಧಾರ ಕೈಗೊಳ್ಳಬೇಡಿ ಎಂದಿದ್ದರು. ನಾನೊಬ್ಬ ಕಾಂಗ್ರೆಸ್‌ ಕಾರ್ಯಕರ್ತನಾಗಿ ಯಾವ ಮುಖ ಇಟ್ಟುಕೊಂಡು ಮತದಾರರಲ್ಲಿ ಜೆಡಿಎಸ್‌ಗೆ ಮತ ಹಾಕಿ ಎಂದು ಕೇಳಲಿ ಎಂದರು.

ಸಾರ್ವಜನಿಕರಿಂದ ನಿಧಿ ಸಂಗ್ರಹ ಮಾಡಿ ಚುನಾವಣೆ ಎದುರಿಸುತ್ತೇನೆ. ಮಾರ್ಚ್‌ 28ರಂದು ಉಡುಪಿಯಲ್ಲಿ ಪಾದೆಯಾತ್ರೆ ಮೂಲಕ ನಿಧಿ ಸಂಗ್ರಹ ಮಾಡುತ್ತೇನೆ. ಸಂಸದರಾದರೆ ಸಾಮಾಜಿಕ ಸಾಮರಸ್ಯ ಕಾಪಾಡುವ ಕೆಲಸವನ್ನು ಗಟ್ಟಿಯಾಗಿ ಮಾಡುತ್ತೇನೆ. ಕ್ಷೇತ್ರದ ಜ್ವಲಂತ ಸಮಸ್ಯೆಯಾದ ಮರಳು ಸಮಸ್ಯೆ, ರೈತರ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದರು.

ಮನೋವೈದ್ಯ ಡಾ.ಪಿ.ವಿ.ಭಂಡಾರಿ, ಸಾಮಾಜಿಕ ಕಾರ್ಯಕರ್ತೆ ಜಯಶ್ರೀ ಭಟ್‌, ಯಜ್ಞೇಶ್‌ ಆಚಾರ್ಯ ಇದ್ದರು.


Spread the love