ನಿಷೇಧಿತ ಮಾದಕ ದ್ರವ್ಯ ‘ಎಂಡಿಎಂ’ ವಶ; ಇಬ್ಬರ ಬಂಧನ

Spread the love

ನಿಷೇಧಿತ ಮಾದಕ ದ್ರವ್ಯ ‘ಎಂಡಿಎಂ’ ವಶ; ಇಬ್ಬರ ಬಂಧನ

ಮಂಗಳೂರು: ಸುರತ್ಕಲ್ ಲೈಟ್ ಹೌಸ್ ಸಮೀಪ ಸಮುದ್ರ ಕಿನಾರೆಯ ಸಾರ್ವಜನಿಕ ರಸ್ತೆಬದಿ ನಿಷೇಧಿತ ಮಾದಕ ದ್ರವ್ಯ ‘ಎಂಡಿಎಂ’ನ್ನು ಅಮಾಯಕ ವಿದ್ಯಾರ್ಥಿಗಳಿಗೆ ಮಾರಾಟಕ್ಕೆ ಯತ್ನಿಸಿದ ಆರೋಪದಲ್ಲಿ ಇಬ್ಬರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಸುರತ್ಕಲ್ ಕೃಷ್ಣಾಪುರ 6ನೇ ಬ್ಲಾಕ್ ನಿವಾಸಿ ಮುಹಮ್ಮದ್ ಮುಜಾಮಿಲ್ (40), ಚೊಕ್ಕಬೆಟ್ಟು ನಿವಾಸಿ ಮುಹಮ್ಮದ್ ಶರೀಫ್ (40) ಬಂಧಿತ ಆರೋಪಿಗಳು.

ವಿಶೇಷ ಅಪರಾಧ ಪತ್ತೆ ದಳದ ಪೊಲೀಸ್ ಅಧಿಕಾರಿ ಮುಹಮ್ಮದ್ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಸಲಾಗಿದೆ.

ಸೆ.19ರಂದು ಬೆಳಗ್ಗೆ 9:30ಕ್ಕೆ ಆರೋಪಿಗಳು ಸುರತ್ಕಲ್ ಲೈಟ್‌ಹೌಸ್ ಬಳಿ ಇರುವ ಗೆಸ್ಟ್ ಹೌಸ್ ಒಂದರ ಸಮೀಪ ಸಮುದ್ರ ಕಿನಾರೆಯ ಸಾರ್ವಜನಿಕ ರಸ್ತೆಯ ಬದಿ ಬಿಳಿ ಬಣ್ಣದ ಕಾರಿನಲ್ಲಿ ನಿಷೇಧಿತ ಮಾದಕ ದ್ರವ್ಯವನ್ನು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.

ಬಂಧಿತ ಆರೋಪಿಗಳಿಂದ 30 ಸಾವಿರ ರೂ. ಮೌಲ್ಯದ 11 ಗ್ರಾಂ ‘ಎಂಡಿಎಂ’ ಮಾದಕ, ನಾಲ್ಕು ಲಕ್ಷ ಮೌಲ್ಯದ ಬಿಳಿಬಣ್ಣದ ಕಾರು, 10,950 ರೂ. ನಗದು, 21 ಸಾವಿರ ರೂ.ಮೌಲ್ಯದ ನಾಲ್ಕು ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಸ್ವಾಧೀನಪಡಿಸಿಕೊಂಡ ಒಟ್ಟು ಸೊತ್ತಿನ ಅಂದಾಜು ಮೌಲ್ಯ 4.61 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಈ ಕುರಿತು ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love