ನೂತನ ಕರಡು ಶಿಕ್ಷಣ ನೀತಿ 2019 – ಕಾರ್ಯಗಾರ

Spread the love

ನೂತನ ಕರಡು ಶಿಕ್ಷಣ ನೀತಿ 2019 – ಕಾರ್ಯಗಾರ

“ಪ್ರಸ್ತುತ ಶಿಕ್ಷಣ ವ್ಯವಸ್ಥೆ ಕಾರ್ಖಾನೆಯ ಮಾದರಿಯನ್ನು ಅನುಸರಿಸುತ್ತಿದ್ದು, ಜೊತೆಗೆ ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಯ ಉತ್ಪಾದನೆಗಳಾಗುತ್ತಿದ್ದು, ಶಿಕ್ಷಣ ವಲಯ ಈ ಕಾರ್ಖಾನೆಗಳ ಕಾರ್ಮಿಕರಾಗಿದ್ದಾರೆ. ಶಿಕ್ಷಕ ಮತ್ತು ಶಿಕ್ಷಣಾರ್ಥಿಗಳ ನಡುವೆ ಅಗಾಧ ಕಂದಕ ನಿರ್ಮಿತಗೊಂಡಿದ್ದು, ಪ್ರಸ್ತುತ ಶಿಕ್ಷಣ ವ್ಯವಸ್ಥೆ ಶಿಕ್ಷಣ ವಲಯದಲ್ಲಿ ಹಲವು ಆಯಾಮಗಳ ಸಂಕೀರ್ಣ ಸಮಸ್ಯೆಗಳನ್ನು ಹುಟ್ಟುಹಾಕಿದೆ” ಎಂದು ಹಿರಿಯ ಶಿಕ್ಷಣ ತಜ್ಞ, ಶಿಕ್ಷಣ ಸಿದ್ಧಾಂತಿ ಪ್ರೊ. ಸುಕುಮಾರ್ ಗೌಡ ಅಭಿಪ್ರಾಯಪಟ್ಟರು.

ಕೇಂದ್ರ ಸರ್ಕಾರದ ಪ್ರಾಸ್ತಾವಿಕ ನೂತನ ಕರಡು ಶಿಕ್ಷಣ ನೀತಿ 2019ರ ಕುರಿತಂತೆ ಕಾಲೇಜಿನ ಪ್ರಾಂಶುಪಾಲರು ಹಾಗೂ ವಿಭಿನ್ನ ವಲಯದ ಶಿಕ್ಷಣ ತಜ್ಞರಿಗಾಗಿ ಏರ್ಪಡಿಸಲಾಗಿದ್ದ ಒಂದು ದಿನದ ಕಾರ್ಯಗಾರದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಪ್ರಾಸ್ತಾವಿಕ ಶಿಕ್ಷಣ ನೀತಿ ಭಾರತೀಯತೆಯ ಅಸ್ತಿತ್ವಕ್ಕೆ ಒತ್ತು ನೀಡುವಂತಿರಬೇಕೆಂದು ಆಶಯ ವ್ಯಕ್ತಪಡಿಸಿದರು.

ಕಾರ್ಯಗಾರದ ಮತ್ತೊಬ್ಬ ಅತಿಥಿಯಾಗಿ ಆಗಮಿಸಿದ್ದ ಶಿಕ್ಷಣ ಮತ್ತು ಸಾಮಾಜಿಕ ಅಧ್ಯಯನ ಕೇಂದ್ರದ ಡಾ. ಗೌರೀಶ್ ಜೋಶಿ ಹಾಗೂ ಕರಡು ಶಿಕ್ಷಣ ಸಮಿತಿಯ ಸದಸ್ಯರು ಕರಡು ನೀತಿಯ ಆಶಯಗಳನ್ನು ಸಭಿಕರಿಗೆ ಮನದಟ್ಟು ಮಾಡಿಸಿದರು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಮಂಗಳಗಂಗೋತ್ರಿ ವಿ.ವಿ ಯ ನೂತನ ಕುಲಪತಿಗಳಾದ ಪ್ರೊ. ಎಡಪಡಿತ್ತಾಯ ಅವರು ಪ್ರಸ್ತುತ ಚಾಲ್ತಿಯಲ್ಲಿರುವ ಶೈಕ್ಷಣಿಕ ವಾತಾವರಣದ ರೂಪಾಂತರದ ಅನಿವಾರ್ಯತೆಯ ಬಗ್ಗೆ ಮಾತನಾಡುತ್ತಾ, ಶೈಕ್ಷಣಿಕ ಗುಣಮಟ್ಟದ ಅಭಿವೃದ್ಧಿ ಹಾಗೂ ನೈಜ ಶಿಕ್ಷಣದ ಉದಾತ್ತ ಗುರಿಗಳ ಅನಿವಾರ್ಯತೆಯ ಕುರಿತಂತೆ ತಮ್ಮ ನಿಲುವುಗಳನ್ನು ಪ್ರಸ್ತಾಪಿಸಿದರು.

ಕಾಲೇಜು ಅಭಿವೃದ್ಧಿ ಮಂಡಳಿಯ ನಿರ್ದೇಶಕರಾದ ಪ್ರೊ. ಪಿ.ಎಲ್ ಧರ್ಮ ಕಾರ್ಯಕ್ರಮದ ಆಶಯ ಭಾಷಣ ಮಾಡಿದರು. ಡಾ. ಧನಂಜಯ ಕುಂಬ್ಳೆ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.


Spread the love