ನೂತನ ಬೈಂದೂರು ತಾ.ಪಂ ಪ್ರಥಮ ಅಧ್ಯಕ್ಷರಾಗಿ ಮಹೇಂದ್ರ, ಉಪಾಧ್ಯಕ್ಷರಾಗಿ ಮಾಲಿನಿ ಅವಿರೋಧ ಆಯ್ಕೆ

Spread the love

ನೂತನ ಬೈಂದೂರು ತಾ.ಪಂ ಪ್ರಥಮ ಅಧ್ಯಕ್ಷರಾಗಿ ಮಹೇಂದ್ರ, ಉಪಾಧ್ಯಕ್ಷರಾಗಿ ಮಾಲಿನಿ ಅವಿರೋಧ ಆಯ್ಕೆ

ಕುಂದಾಪುರ: ನೂತನವಾಗಿ ಅಸ್ತಿತ್ವಕ್ಕೆ ಬಂದ ಬೈಂದೂರು ತಾಲೂಕು ಪಂಚಾಯಿತಿಯ ಪ್ರಥಮ ಅಧ್ಯಕ್ಷರಾಗಿ ಮಹೇಂದ್ರ ಪೂಜಾರಿ ಹಾಗೂ ಉಪಾಧ್ಯಕ್ಷರಾಗಿ ಮಾಲಿನಿ ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬೈಂದೂರು ತಾ.ಪಂ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಹೇಂದ್ರ ಪೂಜಾರಿ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಮಾಲಿನಿ ಕೆ ನಾಮಪತ್ರ ಸಲ್ಲಿಸಿದ್ದು, ಬೇರ್ಯಾರು ನಾಮಪತ್ರ ಸಲ್ಲಿಸದಿರುವುದರಿಂದ ಅವಿರೋಧ ಆಯ್ಕೆ ನಡೆದಿದೆ.

ಕುಂದಾಪುರ ತಾಲೂಕಿನಿಂದ ವಿಭಜನೆಗೊಂಡ ಬೈಂದೂರು ತಾಲೂಕು ಪಂಚಾಯಿತಿ 14 ಸದಸ್ಯ ಬಲ ಹೊಂದಿದ್ದು, 9 ಬಿಜೆಪಿ, 5 ಕಾಂಗ್ರೆಸ್ ಸದಸ್ಯರಿದ್ದಾರೆ. ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಮಹೇಂದ್ರ ಪೂಜಾರಿ 2ನೇ ಬಾರಿಗೆ ತಾಪಂ ಸದಸ್ಯರಾಗಿ ಆಯ್ಕೆಗೊಂಡವರು. ಮೊದಲು ಕಿರಿಮಂಜೇಶ್ವರ ಕ್ಷೇತ್ರದಿಂದ, ಆ ಬಳಿಕ ಕಂಬದಕೋಣೆ ಕ್ಷೇತ್ರದಿಂದ ಆಯ್ಕೆಗೊಂಡಿದ್ದರು. ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಮಾಲಿನಿ ಕೆ. ಬೈಂದೂರು ತಾಲೂಕು ಪಂಚಾಯತಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಮಹೇಂದ್ರ ಪೂಜಾರಿಯವರು ಅಧ್ಯಕ್ಷನಾಗಿ ಅವಿರೋಧವಾಗಿ ಆಯ್ಕೆ ಮಾಡುವಲ್ಲಿ ಸಹಕರಿಸಿದ ಪಕ್ಷದ ಎಲ್ಲಾ ವರಿಷ್ಠರಿಗೂ, ತಾಲೂಕು ಪಂಚಾಯತಿ ಸದಸ್ಯರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಹೊಸ ತಾಲೂಕು ಪಂಚಾಯಿತಿಗೆ ಹೊಸ ಸವಾಲುಗಳಿವೆ. ಸರಿಯಾದ ಕಛೇರಿ ಇಲ್ಲ. ಸೌಲಭ್ಯ ಮತ್ತು ಸೌಕರ್ಯಗಳ ಕೊರತೆ ಇದೆ. ಹೊಸ ತಾಲೂಕನ್ನು ಮಾದರಿ ತಾಲೂಕಾಗಿ ರೂಪಿಸಲು, ಅಭಿವೃದ್ದಿ ಪಥದಲ್ಲಿ ಕೊಂಡೊಯ್ಯಲು ಇಡೀ ತಾಲೂಕು ಪಂಚಾಯಿತಿ ತಂಡ ಕಟಿಬದ್ದವಾಗಿದೆ ಎಂದರು.

ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯರಾದ ಬಾಬು ಶೆಟ್ಟಿ, ಸುರೇಶ ಬಟ್ವಾಡಿ, ಬಿಜೆಪಿ ಕ್ಷೇತ್ರಾಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಪೂಜಾರಿ ಜೆಡ್ಡು, ಮಾಜಿ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು, ಎಪಿಎಂಸಿ ಅಧ್ಯಕ್ಷ ವೆಂಕಟ ಪೂಜಾರಿ ಉಪಸ್ಥಿತರಿದ್ದರು.ಕುಂದಾಪುರ ಸಹಾಯಕ ಆಯುಕ್ತರಾದ ರಾಜು ಚುನಾವಣಾಧಿಕಾರಿಯಾಗಿ ಭಾಗವಹಿಸಿದ್ದರು. ಬೈಂದೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭಾರತಿ, ತಹಶೀಲ್ದಾರ್ ಬಿ.ಪಿ ಪೂಜಾರ್ ಉಪಸ್ಥಿತರಿದ್ದರು.


Spread the love