ಪಂಪ್ವೆಲ್ – ಕಂಕನಾಡಿ ರಸ್ತೆ ಕಾಮಗಾರಿ: ಬದಲಿ ಮಾರ್ಗದ ವ್ಯವಸ್ಥೆ
ಮಂಗಳೂರು: ನಗರದ ಪಂಪ್ವೆಲ್ ಸರ್ಕಲ್ನಿಂದ ಕಂಕನಾಡಿ ಬೈಪಾಸ್ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದರಿಂದ ಅಕ್ಟೋಬರ್ 13 ರಿಂದ ಎಪ್ರಿಲ್ 15 ರವರೆಗೆ (7 ತಿಂಗಳು) ವಾಹನಗಳ ಸಂಚಾರದಲ್ಲಿ ಮಾರ್ಗ ಬದಲಾಯಿಸಿ ತಾತ್ಕಾಲಿಕ ಅಧಿಸೂಚನೆ ಹೊರಡಿಸಲಾಗಿದೆ.
ಪಂಪ್ವೆಲ್ ವೃತ್ತದಿಂದ ಕಂಕನಾಡಿ ಬೈಪಾಸ್ವರೆಗೆ ರಸ್ತೆಯ ಪ್ರಥಮ ಹಾಗೂ ದ್ವಿತೀಯ ಹಂತದ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುವ ಸಮಯದಲ್ಲಿ ದ್ವಿ-ಮುಖ ರಸ್ತೆಯ ಒಂದು ರಸ್ತೆಯನ್ನು ಕರಾವಳಿ ಜಂಕ್ಷನ್ನಿಂದ ಪಂಪ್ವೆಲ್ವರೆಗೆ ವಾಹನಗಳು ಸಂಚರಿಸಲು ತಾತ್ಕಾಲಿಕವಾಗಿ ಏಕಮಖ ರಸ್ತೆಯನ್ನಾಗಿ ಘೋಷಿಸಿದೆ. ಅದೇ ರೀತಿ ಪಂಪ್ವೆಲ್ ಕಡೆಯಿಂದ – ಕಂಕನಾಡಿ ಓಲ್ಡ್ ರಸ್ತೆ – ಕಂಕನಾಡಿ ಜಂಕ್ಷನ್ ರಸ್ತೆಯನ್ನು ತಾತ್ಕಾಲಿಕವಾಗಿ ಏಕಮುಖ ರಸ್ತೆಯನ್ನಾಗಿ ಘೋಷಿಸಿದೆ. ಏಕಮುಖ ರಸ್ತೆಯ ಎರಡೂ ಬದಿಗಳಲ್ಲಿ ಎಲ್ಲಾ ತರಹದ ವಾಹನಗಳ ನಿಲುಗಡೆ ಮಾಡುವುದನ್ನು ನಿಷೇಧಿಸಲಾಗಿದೆ.
ಪಡೀಲ್ ಹಾಗೂ ತೊಕ್ಕೊಟ್ಟು ಕಡೆಯಿಂದ ಪಂಪ್ವೆಲ್ ವೃತ್ತಕ್ಕೆ ಬಂದು ಕರಾವಳಿ ವೃತ್ತಕ್ಕೆ ಹೋಗುವ ಎಲ್ಲಾ ವಾಹನಗಳು ಕಂಕನಾಡಿ ಓಲ್ಡ್ ರಸ್ತೆಯ ಮೂಲಕ ಕಂಕನಾಡಿ ಜಂಕ್ಷನ್ಗೆ ಬಂದು ಬಲಕ್ಕೆ ತಿರುಗಿ ಕರಾವಳಿ ವೃತ್ತದ ಕಡೆಗೆ ಸಂಚರಿಸಬೇಕು. ಫಳ್ನೀರ್ ರಸ್ತೆಯಿಂದ ಹಾಗೂ ವೆಲೆನ್ಸಿಯಾ ರಸ್ತೆಯಿಂದ ಪಂಪ್ವೆಲ್ ಕಡೆಗೆ ಹೋಗುವ ಎಲ್ಲಾ ವಾಹನಗಳು ಕಂಕನಾಡಿ ಜಂಕ್ಷನ್ನಿಂದ ನೇರವಾಗಿ ಕರಾವಳಿ ಜಂಕ್ಷನ್ಗೆ ಬಂದು ಬಲಕ್ಕೆ ತಿರುಗಿ ಪಂಪ್ವೆಲ್ ವೃತ್ತದ ಕಡೆಗೆ ಸಂಚರಿಸಬೇಕು ಎಂದು ನಗರ ಪೋಲಿಸ್ ಆಯುಕ್ತರು ಆದೇಶಿಸಿದ್ದಾರೆ.