ಪದವಿನಂಗಡಿಯಲ್ಲೊಂದು ಘರ್ ವಾಪಸಿ; ಹಿಂದೂ ಧರ್ಮಕ್ಕೆ ಮತಾಂತರಗೊಂಡ ಕ್ರೈಸ್ತ ಕುಟುಂಬ

Spread the love

ಪದವಿನಂಗಡಿಯಲ್ಲೊಂದು ಘರ್ ವಾಪಸಿ; ಹಿಂದೂ ಧರ್ಮಕ್ಕೆ ಮತಾಂತರಗೊಂಡ ಕ್ರೈಸ್ತ ಕುಟುಂಬ

ಮಂಗಳೂರು: ಕ್ರೈಸ್ತ ಕುಟುಂಬವೊಂದು ಹಿಂದು ಧರ್ಮಕ್ಕೆ ಮತಾಂತರಗೊಂಡ ಘಟನೆ ಗುರುಪುರದ ವಜ್ರದೇಹಿ ಮಠದಲ್ಲಿ ಸೋಮವಾರ ನಡೆದಿದೆ.

ಅರುಣ್ ಮೊಂತೆರೊ ಅವರ ಕುಟುಂಬ 40 ವರುಷಗಳ ಹಿಂದೆ ಹಿಂದೂ ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿತ್ತು. ಮತಾಂತರದ ಬಳಿಕ ಕ್ರೈಸ್ತ ಧರ್ಮದಲ್ಲಿ ಅವರಿಗೆ ಸಂತೋಷ ಸಂತೃಪ್ತಿ ಇಲ್ಲದೆ ಕಾರಣ ಮತ್ತೆ ಅವರು ಹಿಂದೂ ದೇವಾಲಯಗಳೀಗೆ ಹೋಗುತ್ತಿದ್ದರು ಮತ್ತು ಹಿಂದೂ ಆಚರಣೆಗಳನ್ನು ಮಾಡಿಕೊಂಡು ಬಂದಿದ್ದರು. ಅಲ್ಲದೆ ಅರುಣ್ ಮೊಂತೆರೋ ಅವರು ಹಿಂದೂ ಜಾಗರಣ ವೇದಿಕೆ ಪದವಿನಂಗಡಿ ಇದರ ಜೊತೆ ಉತ್ತಮ ಸಂಬಂಧವನ್ನು ಕೂಡ ಹೊಂದಿದ್ದು, ಅದರ ಪದಾಧಿಕಾರಿಗಳೊಂದಿಗೆ ತಾನು ಮತ್ತೆ ಹಿಂದೂ ಧರ್ಮಕ್ಕೆ ಮರಳುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಹಿಂದೂ ಜಾಗರಣ ವೇದಿಕೆಯ ಸದಸ್ಯರು ಇದನ್ನು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯ ಬಳಿ ಹೇಳಿದ್ದು ಅವರ ಮಾರ್ಗದರ್ಶನದಂತೆ ಸೋಮವಾರ ಅರುಣ್ ಮೊಂತೇರೊ ಕುಟುಂಬದ ಐದು ಮಂದಿ ಮರಳಿ ಹಿಂದೂ ಧರ್ಮಕ್ಕೆ ಸೇರ್ಪಡೆಗೊಂಡರು.

ಈ ಕುರಿತು ಮ್ಯಾಂಗಲೋರಿಯನ್ ಪ್ರತಿನಿಧಿಯೊಂದಿಗೆ ಮಾತನಾಡಿದ ವಜ್ರದೇಹಿ ಮಠದ ಸ್ವಾಮೀಜಿ, ಅರುಣ್ ಮೊಂತೆರೋ, ಅವರ ತಾಯಿ, ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳು ಹಿಂದೂ ಧರ್ಮಕ್ಕೆ ಮರಳಿ ಮತಾಂತರಗೊಂಡಿದ್ದು, 40 ವರುಷಗಳ ಹಿಂದೆ ಕೆಲವೊಂದು ಕಾರಣಗಳಿಗಾಗಿ ಅರುಣ್ ಅವರ ತಾಯಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರು. ಮತಾಂತರದ ಬಳಿಕ ಅವರ ಕುಟುಂಬ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂತು. ಮೂರು ತಿಂಗಳ ಹಿಂದೆ ಅರುಣ್ ಹಿಂದೂ ಜಾಗರಣ ವೇದಿಕೆಯ ಸದಸ್ಯರನ್ನು ಸಂಪರ್ಕಿಸಿದ್ದು, ಅವರು ನನ್ನಲ್ಲಿ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ನಾನು ಹಿಂಜಾವೇ ಸದಸ್ಯರಿಗೆ ಕಟ್ಟುನಿಟ್ಟಾದ ಸೂಚನೆ ನೀಡಿದ್ದು ಯಾವುದೇ ಕಾರಣಕ್ಕೂ ಬಲವಂತದ ಮತಾಂತರಕ್ಕೆ ಅವಕಾಶ ನೀಡಬಾರದು, ಅವರ ಇಚ್ಛೆಯಂತೆ ಆಗುವುದಾದರೆ ಆಗಲಿ ಎಂದು ತಿಳಿಸಿದ್ದೆ ಅದರ ಬಳಿಕ ಹಿಂಜಾವೇ ಸದಸ್ಯರು ಅರುಣ್ ಮತಾಂತರಗೊಳ್ಳುವ ಸ್ಪಷ್ಠ ನಿರ್ಧಾರವಾದ ಬಳಿಕ ಮತ್ತೆ ನನ್ನ ಗಮನಕ್ಕೆ ತಂದರು.

ಅದರಂತೆ ಸೋಮವಾರ ಹಿಂದೂ ಧರ್ಮಧ ಧಾರ್ಮಿಕ ವಿಧಿವಿಧಾನಗಳ ಮೂಲಕ ಅರುಣ್ ಅವರ ಕುಟುಂಬವನ್ನು ಮರಳಿ ಹಿಂದೂ ಧರ್ಮಕ್ಕೆ ಸ್ವಾಗತಿಸಲಾಯಿತು. ಅರುಣ್ ಮೊಂತೆರೋ ತನ್ನ ಹೆಸರನ್ನು ಅರುಣ್ ಪೂಜಾರಿ ಎಂದು, ಆತನ ಪತ್ನಿ ಸುನೀತಾ, ಸಂಗೀತಾ ಆಗಿ, ಆವರ ತಾಯಿ ಐಡಾ ತೋಮಸ್, ಗೌರಿ ಪೂಜಾರ್ತಿಯಾಗಿ, ಅರುಣ್ ಅವರ ಇಬ್ಬರು ಗಂಡು ಮಕ್ಕಳು ಅಜಯ್ ಹಾಗೂ ಅನೀಶ್ ಪೂಜಾರಿ ಎಂದು ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ ಎಂದರು.

ಇದೇ ವೇಳೆ ಮಾತನಾಡಿದ ಹಿಂಜಾವೇ ಜಿಲ್ಲಾ ಕಾರ್ಯದರ್ಶಿ ಶರತ್ ಪದವಿನಂಗಡಿ ಅವರು ಅರುಣ್ ಅವರ ತಾಯಿ ಐಡಾ ತೋಮಸ್ ಅವರು ಮೂಲತಃ ಕಾಸರಗೋಡಿನವರಾಗಿದ್ದು ಹಿಂದೂ ಕುಟುಂಬದಲ್ಲಿ ಜನಿಸಿದ್ದು, 40 ವರುಷಗಳ ಹಿಂದೆ ಕ್ರೈಸ್ತ ಧರ್ಮಕ್ಕೆ ಮತಾಂತರ ಗೊಂಡಿದ್ದರು. ಮೂರು ತಿಂಗಳ ಹಿಂದೆ ಅರುಣ್ ತಮ್ಮ ಸಂಘಟನೆಯನ್ನು ಸಂಪರ್ಕಿಸಿ ತನ್ನ ಆಸೆಯನ್ನು ವ್ಯಕ್ತಪಡಿಸಿದ್ದರು. ಒಂದು ಹಂತದಲ್ಲಿ ಸಂಘಟನೆ ಅದನ್ನು ನಿರಾಕರಿಸಿದ್ದರೂ ಕೂಡ ಅರುಣ್ ತಮ್ಮ ನಿರ್ದಾರದಲ್ಲಿ ಧೃಡವಾಗಿದ್ದರು. ಆದ್ದರಿಂದ ಸಂಘಟನೆ ವಜ್ರದೇಹಿ ಮಠದ ಸ್ವಾಮೀಜಿಯವರನ್ನು ಸಂಪರ್ಕಿಸಿ ಅವರ ಮಾರ್ಗದರ್ಶನದಂತೆ ಅರುಣ್ ಕುಟುಂಬವನ್ನು ಮರಳಿ ಹಿಂದೂ ಧರ್ಮಕ್ಕೆ ಸ್ವೀಕರಿಸಲಾಗಿದೆ ಎಂದರು.

ಹಿಂಜಾವೇ ಸದಸ್ಯರದಾದ ಅರುಣ್ ಗುಂಡಲಿಕೆ, ಸಂದೀಪ್ ಶೆಟ್ಟಿ, ಹರೀಶ್ ಮಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.


Spread the love