ಪರಮ ಪೂಜ್ಯ ಡಾ. ಪೀಟರ್ ಮಚಾದೊ ಬೆಂಗಳೂರಿನ ನೂತನ ಆರ್ಚ್‍ಬಿಷಪ್

Spread the love

ಪರಮ ಪೂಜ್ಯ ಡಾ. ಪೀಟರ್ ಮಚಾದೊ ಬೆಂಗಳೂರಿನ ನೂತನ ಆರ್ಚ್‍ಬಿಷಪ್

ಪರಮ ಪೂಜ್ಯರಾದ ಡಾ. ಬರ್ನಾಡ್ ಮೊರಾಸ್‍ರವರು ತಮ್ಮ 75ನೇ ನಿವೃತ್ತಿ ವಯಸ್ಸು ತಲುಪಿದ ಕಾರಣ, ಪೋಪ್ ಫ್ರಾನ್ಸಿಸ್‍ರವರು ಪರಮ ಪೂಜ್ಯ ಡಾ. ಪೀಟರ್ ಮಚಾದೊರವರನ್ನು ಬೆಂಗಳೂರು ಮಹಾಧರ್ಮಕ್ಷೇತ್ರದ ನೂತನ ಮಹಾಧರ್ಮಾಧ್ಯಕ್ಷರನ್ನಾಗಿ ದಿನಾಂಕ 19 ಮಾರ್ಚ್ 2018ರಂದು ನೇಮಕ ಮಾಡಿರುವರು.

ನಿಯೋಜಿತ ಮಹಾಧರ್ಮಾಧ್ಯಕ್ಷರಾದ ಡಾ. ಪೀಟರ್ ಮಚಾದೊರವರು, ಬೆಂಗಳೂರು ಮಹಾಧರ್ಮಕ್ಷೇತ್ರದ ಏಳನೇ ಮಹಾಧರ್ಮಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಬೆಂಗಳೂರು ಧರ್ಮಕ್ಷೇತ್ರವು ಮಹಾಧರ್ಮಕ್ಷೇತ್ರ ಸ್ಥಾನವನ್ನು ಪಡೆಯುವ ಮೊದಲು, ಮೂವರು ಧರ್ಮಾಧ್ಯಕ್ಷರುಗಳು ಕಾರ್ಯನಿರ್ವಹಿಸಿದ್ದಾರೆ.

ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ನಿವಾಸಿಗಳಾದ ದಿವಂಗತ ಆವೆಲಿನ್ ಮತ್ತು ದಿವಂಗತ ಅಂತೋಣಿ ಮಚಾದೊ ಅವರ ಪುತ್ರರಾಗಿ 26 ಮೇ 1954ರಲ್ಲಿ ಜನಿಸಿದ ಪೀಟರ್ ಮಚಾದೊರವರು, ತಮ್ಮ ಮೆಟ್ರಿಕುಲೇಷನ್ ವಿದ್ಯಾಭ್ಯಾಸಕ್ಕೆ ಮೊದಲೇ ಸಂತ ಮೈಕೇಲ್‍ರ ಗುರು ತರಬೇತಿ ನಿಲಯ ಸೇರಿದರು. ಬೆಳಗಾವಿಯ ಸಂತ ಪೌಲರ ಪ್ರೌಢಶಾಲೆಯಲ್ಲಿ ತಮ್ಮ ಪ್ರೌಢಶಿಕ್ಷಣ ಮುಗಿಸಿದನಂತರ, ಅವರು ಪುಣೆಯ ಪೇಪಲ್ ಗುರು ಮಹಾವಿದ್ಯಾಮಂದಿರ ಸೇರಿ ತಮ್ಮ ತತ್ವಶಾಸ್ತ್ರ ಮತ್ತು ದೈವಶಾಸ್ತ್ರಗಳ ಅಧ್ಯಯನ ಪೂರ್ಣಗೊಳಿಸಿದರು. ಇದರೊಂದಿಗೆ ಪುಣೆಯ ವಿಶ್ವವಿದ್ಯಾಲಯದಿಂದ ವಾಣಿಜ್ಯ ಶಾಸ್ತ್ರದಲ್ಲಿ ಸ್ನಾತಕ ಪದವಿಯನ್ನೂ ಗಳಿಸಿದರು.

ತರುವಾಯ, 08 ಡಿಸೆಂಬರ್ 1978ರಂದು, ಕಾರವಾರದ ಧರ್ಮಕ್ಷೇತ್ರದ ಧರ್ಮಗುರುಗಳಾಗಿ ದೀಕ್ಷೆ ಪಡೆದರು. ಬೆಳಗಾವಿ ಧರ್ಮಕ್ಷೇತ್ರದಿಂದ ಕಾರವಾರವನ್ನು ಪ್ರತ್ಯೇಕಿಸಿ,  ಒಂದು ಸ್ವತಂತ್ರ ಧರ್ಮಕ್ಷೇತ್ರವನ್ನಾಗಿ 1976ರಲ್ಲಿ ರೂಪಿಸಲಾಯಿತು. ಪೂಜ್ಯ ಪೀಟರ್ ಮಚಾದೊರವರು ರೋಮ್‍ನ ಉರ್ಬಾನಿಯ ಮಹಾವಿಶ್ವವಿದ್ಯಾನಿಲಯದಿಂದ “ಕ್ಯಾನನ್ ಲಾ” ಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಗಳಿಸಿದ್ದಾರೆ.

ಪರಮ ಪೂಜ್ಯ ಡಾ. ಪೀಟರ್ ಮಚಾದೊರವರು, ಬೆಳಗಾವಿಯ ನೂತನ ಧರ್ಮಾಧ್ಯಕ್ಷರನ್ನಾಗಿ 02 ಫೆಬ್ರವರಿ 2006 ರಂದು ವಿಶ್ವಗುರು 16ನೇ ಬೆನೆಡಿಕ್ಟ್‍ರವರಿಂದ  ನೇಮಕಗೊಂಡು, ಮಾರ್ಚ್ 30, 2006ರಂದು ಧರ್ಮಾಧ್ಯಕ್ಷದೀಕ್ಷೆಯನ್ನು ಪಡೆದರು.

ಬೆಳಗಾವಿಯ ಧರ್ಮಾಧ್ಯಕ್ಷರಾಗಿ ಪೂಜ್ಯರು 2006ರಿಂದ 2018ರವರೆಗೆ ಸುಮಾರು ಹನ್ನೆರಡು ಸಂವತ್ಸರಗಳ ಅವಧಿಯಲ್ಲಿ ಜನರ ಪಾಲನಾ, ಶಿಕ್ಷಣ ಹಾಗೂ ಇತರೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಿರುತ್ತಾರೆ. ಈ ಅವಧಿಯಲ್ಲಿ ಅವರು ಹಲವು ನೂತನ ದೇವಾಲಯಗಳನ್ನೂ ಪ್ರಾಥಮಿಕ, ಪ್ರೌಢ ಶಾಲೆಗಳನ್ನೂ, ಉನ್ನತ ಅಧ್ಯಯನ ಸಂಸ್ಥೆಗಳನ್ನೂ ಹಾಗೂ ನೂತನ ಸಾಮಾಜಿಕ ಯೋಜನೆಗಳನ್ನೂ ಕೈಗೊಂಡು ತಮ್ಮ ಸೇವಾ ಧುರೀಣತೆಯನ್ನು ಸಾಬೀತು ಪಡಿಸಿದ್ದಾರೆ.

ಇವರು ಒಬ್ಬ ಸರಳ ಮತ್ತು ಶ್ರಮಜೀವಿ, ಚಿಂತಕರು, ಸದ್ಗುಣಸಂಪನ್ನರು, ವಾಗ್ಮಿ, ಪುಸ್ತಕ ಪ್ರಿಯರು, ಮತ್ತು ಸಮಾಜ ಸೇವಕರು. ಈ ಎಲ್ಲಾ ಕೌಶಲ್ಯತೆಗಳನ್ನು ಪಡೆದಿರುವ ಇವರು ಬೆಂಗಳೂರು  ಮಹಾಧರ್ಮಕ್ಷೇತ್ರದ ಅಭಿವೃದ್ಧಿಗಾಗಿ ಮುಡಿಪಾಗಿಡುವರು ಎಂಬುದರಲ್ಲಿ ಸಂದೇಹವಿಲ್ಲ.

ಪರಮ ಪೂಜ್ಯರು, ಅನೇಕ ಸಂವತ್ಸರಗಳಿಂದ ಕರ್ನಾಟಕ ಪ್ರಾಂತೀಯ ಹಂತದಲ್ಲಿ, ಕುಟುಂಬ ಸೇವಾ ಮತ್ತು ಶ್ರೀಸಾಮಾನ್ಯರ ಆಯೋಗಗಳ ಮುಖ್ಯಸ್ಥರಾಗಿ ದುಡಿಯುತ್ತಿದ್ದಾರೆ. ಶ್ರೀಸಾಮಾನ್ಯರ ಬಗ್ಗೆ ಅತೀವ ಕಾಳಜಿ ಹೊಂದಿರುವ ಇವರು, ಧರ್ಮಸಭೆಯಲ್ಲಿ ಶ್ರೀಸಾಮಾನ್ಯರ ವರ್ಗವನ್ನು ಸಬಲಗೊಳಿಸಲು, ಪ್ರಾಂತೀಯ ಹಂತದಲ್ಲಿ, ಶ್ರೀಸಾಮಾನ್ಯರ ಆಯೋಗದ ಅಧ್ಯಕ್ಷರಾಗಿ ನೂತನ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಕರ್ನಾಟಕ ಕಥೋಲಿಕ ಪರಿಷತ್ತಿನ ಅಧ್ಯಕ್ಷರಾದ ಇವರು, ಶ್ರೀಸಾಮಾನ್ಯರಿಗೆ ಧರ್ಮಕ್ಷೇತ್ರದ ವಿದ್ಯಾಮಾನಗಳಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ನೀಡಿದ್ದಾರೆ.

ಪರಮ ಪೂಜ್ಯ ಡಾ. ಪೀಟರ್ ಮಚಾದೊರವರು ಮೇ 31ರಂದು ಬೆಂಗಳೂರು ಮಹಾಧರ್ಮಕ್ಷೇತ್ರದ ನೂತನ ಮಹಾಧರ್ಮಾಧ್ಯಕ್ಷರನ್ನಾಗಿ ಅಧಿಕಾರ ವಹಿಸಲಿರುವರು. ನೂತನ ಮಹಾಧರ್ಮಾಧ್ಯಕ್ಷರಿಗೆ ಇಡೀ ಬೆಂಗಳೂರು ಮತ್ತು ಕರ್ನಾಟಕ ಜನತೆ ಶುಭಹಾರೈಕೆಗಳನ್ನು ಕೋರುತ್ತದೆ.


Spread the love