ಪಿಯು ಕಾಲೇಜುಗಳಿಗೆ ದಂಡ: ಸುತ್ತೋಲೆ ಹಿಂತೆಗೆದುಕೊಳ್ಳುವಂತೆ ಆಗ್ರಹ

Spread the love

ಪಿಯು ಕಾಲೇಜುಗಳಿಗೆ ದಂಡ: ಸುತ್ತೋಲೆ ಹಿಂತೆಗೆದುಕೊಳ್ಳುವಂತೆ ಆಗ್ರಹ

ಮಂಗಳೂರು: 2017-18ನೇ ಸಾಲಿನ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿಗಳ ಶುಲ್ಕವನ್ನು ಖಜಾನೆಗೆ ತಡವಾಗಿ ಪಾವತಿಸಿದ್ದಾರೆ ಎನ್ನುವ ಕಾರಣವೊಡ್ಡಿ ಪ್ರತಿ ವಿದ್ಯಾರ್ಥಿಗೆ ರೂ. 504.00 ರಂತೆ ದಂಡ ಶುಲ್ಕ ಪಾವತಿಸುವಂತೆ ಕಾಲೇಜುಗಳ ಪ್ರಾಂಶುಪಾಲರಿಗೆ ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ನೋಟೀಸು ನೀಡಿರುವುದು ರಾಜ್ಯದಾದ್ಯಂತ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರಲ್ಲಿ ಆತಂಕ ಮೂಡಿಸಿದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದ್ದಾರೆ.

ಕಾಲೇಜಿನ ಪ್ರಾಂಶುಪಾಲರುಗಳು ಈ ಹಿಂದಿನ ವರ್ಷಗಳಲ್ಲಿದ್ದಂತೆ ವಿದ್ಯಾರ್ಥಿಗಳಿಂದ ಸಂಗ್ರಹವಾದ ಹಣವನ್ನು ಇಲಾಖೆಯ ಮಾರ್ಗಸೂಚಿಯಲ್ಲಿರುವ ದಿನಾಂಕದೊಳಗೆ ಪಾವತಿಸಿ ಚಲನ್ ಹಾಗೂ ವಿದ್ಯಾರ್ಥಿಗಳ ಪಟ್ಟಿಯನ್ನು ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರಿಗೆ ಸಲ್ಲಿಸಿದ್ದರೂ ಲಕ್ಷಾಂತರ ರೂಪಾಯಿ ದಂಡ ಶುಲ್ಕವನ್ನು ಪಾವತಿಸುವಂತೆ ಕೋರಿರುವುದು ಸರಿಯಾದ ಕ್ರಮವಲ್ಲ.

ವಿದ್ಯಾರ್ಥಿಗಳಿಂದ ದಂಡ ರಹಿತವಾಗಿ ಪಡೆದ ಶುಲ್ಕಕ್ಕೂ ತಲಾ ರೂ. 504.00 ರಂತೆ 500 ವಿದ್ಯಾರ್ಥಿಗಳಿದ್ದಲ್ಲಿ (500 ಘಿ ರೂ. 504 = ರೂ. 2,52,000) ದಂಡವಿಧಿಸಿರುವುದು ಅಕ್ರಮ. ಪದವಿಪೂರ್ವ ಶಿಕ್ಷಣ ಇಲಾಖೆ ಶಿಕ್ಷಣ ಸಂಸ್ಥೆಗಳಿಗೆ ಈ ರೀತಿ ಎಕಾಏಕಿ ಭಾರಿ ದಂಡ ಶುಲ್ಕವನ್ನು ವಿಧಿಸುವ ಮೂಲಕ ಕಾಲೇಜುಗಳನ್ನು ಸುಲುಗೆ ಮಾಡಲು ಹೊರಟಿರುವುದನ್ನು ಕೂಡಲೇ ನಿಲ್ಲಿಸಬೇಕು ಹಾಗೂ ಕಾಲೇಜು ಪ್ರಾಂಶುಪಾಲರುಗಳಿಗೆ ಲಕ್ಷಾಂತರ ರೂಪಾಯಿ ದಂಡ ಪಾವತಿಸುವಂತೆ ನೀಡಲಾಗಿರುವ ನೋಟೀಸನ್ನು ಕೂಡಲೇ ಹಿಂತೆಗೆದುಕೊಳ್ಳುವಂತೆ ಮಾನ್ಯ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರನ್ನು ಆಗ್ರಹಿಸುತ್ತೇನೆ.


Spread the love