ಪಿಲಿಕುಳದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

Spread the love

ಪಿಲಿಕುಳದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ
ಮಂಗಳೂರು: ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಈ ವರ್ಷದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾದ ವಿಜ್ಞಾನ ಚಟುವಟಿಕೆಗಳ ವಸ್ತುಪ್ರದರ್ಶನವನ್ನು ಸನ್ಮಾನ್ಯ ಸ್ಥಳೀಯ ಶಾಸಕರಾದ ಅಭಯಚಂದ್ರ ಜೈನ್ ಇವರು ಉದ್ಘಾಟಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಬಯಲು ರಂಗ ಮಂದಿರದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮವನ್ನು ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ (ಕ್ಷೇಮಾ) ಪ್ರೋ. ಮಾರ್ಟಿನ್ ಅವರು ಉದ್ಘಾಟಿಸಿದರು. ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ಕೆ. ವಿ ರಾವ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ವಿ. ಪ್ರಸನ್ನರವರು ಎಲ್ಲರನ್ನು ಸ್ವಾಗತಿಸಿ ಪ್ರಸ್ತಾವನೆಗೈದರು. ಶ್ರೀಮತಿ ಶೋಭಾ ವಿಶೇಷಾಧಿಕಾರಿ ಇವರು ಕಾರ್ಯಕ್ರಮದಲ್ಲಿ ವಿಶೇಷ ಶಾಲಾ ಮಕ್ಕಳಿಗೆ ನೀಡಿದ ಆತಿಥ್ಯ ಹಾಗೂ ಕಾಳಜಿಗೆ ತಮ್ಮ ಸಂತಸ ವ್ಯಕ್ತಪಡಿಸಿದರು. ಉದ್ಘಾಟಕರಾದ ಪ್ರೋ.ಮಾರ್ಟಿನ್ ಪಿಲಿಕುಳದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿ ವಿಜ್ಞಾನ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಎಲ್ಲಾ ಸಂಸ್ಥೆಗಳನ್ನು ಒಟ್ಟುಗೂಡಿಸಿ ಇಂತಹ ಪ್ರದರ್ಶನವನ್ನು ವಿಶೇಷ ಶಾಲೆ ಮಕ್ಕಳಲ್ಲದೆ ಉಳಿದ ಎಲ್ಲರಿಗೂ ಏರ್ಪಡಿಸಿರುವುದು ಪ್ರಶಂಸನೀಯ ಎಂದರು. ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಡಾ ಕೆ. ವಿ. ರಾವ್ ಮಕ್ಕಳು ತಮ್ಮ ಮುಂದಿನ ಜೀವನದ ಗುರಿಯನ್ನು ನಿರ್ಧರಿಸಲು ಮತ್ತು ದೇಶಕ್ಕೆ ಕೀರ್ತಿ ತರುವ ಕೆಲಸ ಮಾಡಲು ವಿಜ್ಞಾನ ದಿನಾಚರಣೆಯಂತಹ ಕಾರ್ಯಗಳು ಸ್ಫೂರ್ತಿ ನೀಡುತ್ತವೆ ಎಂದರು. ಪ್ರೋ. ಅಶೋಕ್ ಕಾಮತ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ನಂತರ ವಿಶೇಷ ಶಾಲೆಯ ಮಕ್ಕಳಿಗೋಸ್ಕರ ಕಲಾ ಸೃಷ್ಟಿ ಪುತ್ತುರು ತಂಡದವರಿಂದ ಮ್ಯಾಜಿಕ್ ಶೋ, ಶಾಲೆಗಳಿಂದ ಅಧಿಕ ಸಂಖ್ಯೆಯಲ್ಲಿ ಬಂದ ಎಲ್ಲಾ ವಿದ್ಯಾರ್ಥಿಗಳಿಗೆ ವೈದ್ಯಕೀಯ, ಇಂಜಿನಿಯರಿಂಗ್, ಪ್ರಥಮ ದರ್ಜೆ ಕಾಲೇಜುಗಳು ಹಾಗೂ ಹೈಸ್ಕೂಲ್‍ಗಳು ಹಾಗೂ ಸಂಬಂಧಪಟ್ಟ ಇಲಾಖೆಗಳಿಂದ ದಿವ್ಯಾಂಗರ ಜೀವನ ಶೈಲಿ ಉತ್ತಮ ಗೊಳಿಸಲು ನೂತನ ಆವಿಷ್ಕಾರಗಳು, ಇತರ ವಿಷಯ ಸಂಬಂಧಿಸಿದಂತೆ ಮನೋರಂಜನಾ ವಿಜ್ಞಾನ ಪ್ರಯೋಗ ಇತರ ಆವಿಷ್ಕಾರಗಳು, ಏರೋ ಮತ್ತು ಡ್ರೋನ್ ಶೋ ಹಾಗೂ ಇನ್ನಿತರ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಡಿಜಿಟಲ್ ಮೊಬೈಲ್ ಪ್ಲಾನೆಟೇರಿಯಮ್ ಶೋ ಆಕರ್ಷಣೆ ಕೇಂದ್ರವಾಗಿತ್ತು. ಹೈಸ್ಕೂಲ್ ವಿದ್ಯಾರ್ಥಿಗಳಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ರಸಪ್ರಶ್ನೆ ಸ್ಪರ್ಧೆ, ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಪೈಂಟಿಂಗ್ ಸ್ಪರ್ಧೆ ಹಾಗೂ ವಿಶೇಷ ಶಾಲೆಗಳಿಂದ ಆಯ್ಕೆಮಾಡಿ ಕಳುಹಿಸಿದ ವಿದ್ಯಾರ್ಥಿಗಳಿಗೆ ಟೈಪಿಂಗ್ ಮತ್ತು ಪೈಂಟಿಂಗ್ ಸ್ಪರ್ಧೆ ನಡೆಯಿತು.

ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶ್ರೀ ವಾಲ್ಟರ್ ಡಿಮೆಲ್ಲೊ, ವಿಷಯ ಪರಿವೀಕ್ಷಣಾಧಿಕಾರಿಗಳಾದ ಶ್ರೀ ಪುರುಷೋತ್ತಮ್, ಶ್ರೀ ರಾಧಾಕೃಷ್ಣ, ಕ್ವಿಜ್ ಮಾಸ್ಟರ್ ಡಾ. ಮಂಜುನಾಥ, ಡಾ. ಅನಿಲ್ ಮಸ್ಕರೆನ್ಹಸ್, ಶ್ರೀ ಚಂದ್ರಶೇಖರ್ ಶೆಟ್ಟಿ ವಿಜೇತರಿಗೆ, ಭಾಗವಹಿಸಿದ ಸಂಸ್ಥೆಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.


Spread the love