ಪುತ್ತೂರು ದೇವಳ ಜಾತ್ರಾ ಮಹೋತ್ಸವದ ಆಮಂತ್ರಣ ಮರು ಮದ್ರಣಕ್ಕೆ ಶಾಸಕಿ ಸೂಚನೆ

Spread the love

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯಲ್ಲಿ ಜಿಲ್ಲಾಧಿಕಾರಿಯವರ ಹೆಸರು ಹಾಕಿರುವ ವಿಚಾರದ ವಿವಾದ ತಾರಕಕ್ಕೇರಿದ್ದು, ವಿವಾದಕ್ಕೆ ತಾರ್ಕಿಕ ಅಂತ್ಯ ಹಾಡಲು ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ನಿರ್ಧರಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಶಾಸಕಿ ಕಳೆದ ಕೆಲ ದಿನಗಳಿಂದ ಚರ್ಚೆಯಲ್ಲಿರುವ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಆಮಂತ್ರಣ ಪತ್ರಿಕೆ ವಿವಾದಕ್ಕೆ ತಾರ್ಕಿಕ ಹಾಡಲು ತಾನು ನಿರ್ದರಿಸಿದ್ದು, ಆಮಂತ್ರಣ ಪತ್ರಿಕೆಯನ್ನು ಮರು ಮುದ್ರಣ ಮಾಡಲಾಗುವುದು ಎಂದು ತಿಳಿಸಿದ್ದಾರೆ. ದೇಗುಲದ ಆಮಂತ್ರಣ ಪತ್ರಿಕೆಯಲ್ಲಿ ಜಿಲ್ಲಾಧಿಕಾರಿ ಹೆಸರು ಹಾಕುವುದು ತಪ್ಪೇನಲ್ಲ, ಆದರೆ ಹಿಂದು ಧಾರ್ಮಿಕ ದತ್ತಿ ಇಲಾಖೆಯ ಕಲಂ 7 ರ ಪ್ರಕಾರ ಹಿಂದುಯೇತರ ವ್ಯಕ್ತಿಯ ಹೆಸರು ಹಾಕುವಂತಿಲ್ಲ. ಸೌಹಾರ್ದತೆ ಮುರಿಯುವ ಕೆಲಸಕ್ಕೆ ಅವಕಾಶ ನೀಡದಂತೆ ಆಮಂತ್ರಣ ಪತ್ರಿಕೆಯನ್ನು ಮರು ಮುದ್ರಿಸಲು ಸೂಚಿಲಾಗುವುದು ಒಂದು ವೇಳೆ ಆಡಳಿತ ಮಂಡಳಿ ಈ ಬಗ್ಗೆ ಕ್ರಮ ಕೈಗೊಳ್ಳದ್ದಿದ್ದರೆ ಸ್ವಂತ ಖರ್ಚಿನಲ್ಲಿ ಆಮಂತ್ರಣ ಪತ್ರಿಕೆ ಮುದ್ರಿಸಲಾಗುವುದು ಎಂದರು.
ದೇವಳದ ಆಮಂತ್ರಣ ಪತ್ರಿಕೆಯಲ್ಲಿ ಜಿಲ್ಲಾಧಿಕಾರಿ ಎಂದಷ್ಟೇ ಹಾಕಿರುತ್ತಿದ್ದರೆ ಸಮಸ್ಯೆ ಸೃಷ್ಟಿಯಾಗುತ್ತಿರಲಿಲ್ಲ, ಆದರೆ ಎ ಬಿ ಇಬ್ರಾಹಿಂ ಹೆಸರು ಹಾಕಿರುವುದು ಕಾನೂನಿನ ತೊಡಕಿಗೆ ಕಾರಣ ಜಿಲ್ಲಾಧಿಕಾರಿ ಗಮನಕ್ಕೆ ಬಾರದ ಕಾರಣ ತೊಂದರೆ ಸೃಷ್ಟಿಯಾಗಿರುವ ಸಾಧ್ಯತೆ ಇದೆ. ಏನೇ ಇದ್ದರೂ,ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆ ಮುಖ್ಯ. ದೇವರಿಗೆ ಅವಮಾನ ಆಗುವ ಘಟನೆ ನಡೆಯಲು ಅವಕಾಶ ನೀಡುವುದಿಲ್ಲ, ಹಾಗೆಂದು ಸರ್ಕಾರದ ವಿರುದ್ದ ಹೋರಾಟ ನಡೆಸುತ್ತಿಲ್ಲ. ದೇವಳದ ಜಾತ್ರೆಯ ಹಿನ್ನಲೆಯಲ್ಲಿ ಮಾರ್ಚ್ 16 ರಂದು ಭಕ್ತಾದಿಗಳ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ಎಲ್ಲಾ ಗೊಂದಲಗಳನ್ನು ಪರಿಹರಿಸಲಾಗುವುದು. ಸೌಹಾರ್ದತೆ ಮುರಿಯುವ ವಾತಾವರಣಕ್ಕೆ ಈ ಹಿಂದೆಯೂ ಅವಕಾಶ ನೀಡಿಲ್ಲ ಮುಂದೆಯೂ ನೀಡುವುದಿಲ್ಲ ಎಂದು ಅವರು ಹೇಳಿದರು.
ಇದೇ ವೇಳೆ ನಗರಸಭೆಯ ಸದಸ್ಯ ರಾಜೇಶ್ ಬನ್ನೂರು ಸುದ್ದಿಗೋಷ್ಟಿ ನಡೆಸಿ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಪುತ್ತೂರು ಶ್ರೀ ಮಹಾಲೀಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆಯ ಆಮಂತ್ರಣ ಪತ್ರಿಕೆಯಲ್ಲಿ ಎಂಡೋಮೆಂಟ್ ಕಾಯಿದೆ ಉಲ್ಲಂಘಿಸಿ ಹಿಂದೂಯೇತರ ಜಿಲ್ಲಾಧಿಕಾರಿ ಆಗಿರುವ ಎ ಬಿ ಇಬ್ರಾಹಿಂ ಹೆಸರು ಮುದ್ರಿಸಲಾಗಿದೆ. ಈ ಕ್ರಮವನ್ನು ಜಿಲ್ಲಾಧಿಕಾರಿಗಳು ಸಮರ್ಥಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ ಹೀಗೆ ಸಮರ್ಥಿಸುವ ಜಿಲ್ಲಾಧಿಕಾರಿ ಜಾತ್ರೆಯ ದಿನ ಬಂದು ಶ್ರೀ ದೇವರ ಅಂಕುರ ಪ್ರಸಾದ ಸ್ವೀಕರಿಸಲು ಸಿದ್ದರಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
ಜಾತ್ರೆಗೆ ಆಮಂತ್ರಿತ ಭಕ್ತರ ಸಾಲಿನಲ್ಲಿ ಎ ಬಿ ಇಬ್ರಾಹಿಂ ಹೆಸರಿದೆ. ಇದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದ್ದು ಹಿಂದು ದೇಗುಲಗಳ ಚಟುವಟಿಕೆಯಲ್ಲಿ, ಆಡಳಿತದಲ್ಲಿ ನಿರ್ವಹಣೆಯಲ್ಲಿ ಹಿಂದೂಯೇತರ ಅಧಿಕಾರಿಗಳು ಪಾಲು ಪಡೆಯಬಾರದು ಎಂಬ ಸ್ಪಷ್ಟ ನಿಯಮವಿದೆ. ಹೀಗಿರುವಾಗ ಅಧಿಕಾರಿಗಳು ಈ ರೀತಿ ಯಾಕೆ ವರ್ತಿಸುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು ಎ ಬಿ ಇಬ್ರಾಹಿಂ ಅವರ ಹೆಸರನ್ನು ತೆಗೆ ಜಾತ್ರೆಯ ಆಮಂತ್ರಣ ಪತ್ರಿಕೆಯನ್ನು ಮರುಮುದ್ರಣ ಮಾಡಬೇಕೆಂಬ ನಮ್ಮ ಬೇಡಿಕೆಯಲ್ಲಿ ಯಾವುದೇ ರಾಜಿ ಇಲ್ಲ ಎಂದರು.
ಪ್ರಸ್ತುತ ಪುತ್ತೂರು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಆಗಿರುವವರು ಹಿಂದು ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಅಧಿಕಾರಿಯಾಗಿದ್ದು, ಇವರು ದೇವಾಲಯಗಳ ಅಧಿಕಾರಿಯಾಗಬಹುದೇ ಹೊರತು ಬೇರೆ ಧರ್ಮಗಳ ಶ್ರದ್ಧಾಕೇಂದ್ರಗಳ ಆಡಳಿತ ವಹಿಸಿಕೊಳ್ಳಲು ಸಾಧ್ಯವಿಲ್ಲ. ಜಿಲ್ಲಾಧಿಕಾರಿಗಳ ಬಗ್ಗೆ ನಮ್ಮ ವಿರೋಧವಿಲ್ಲ, ಆದರೆ ಅವರ ಹೆಸರನ್ನು ಹಿಂದೂ ಮುಜರಾಯಿ ದೇವಾಲಯದ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಿದ್ದಕ್ಕೆ ಮಾತ್ರ ಆಕ್ಷೇಪವಿದೆ ಎಂದರು.


Spread the love