ಪ್ಲಾಸ್ಟಿಕ್ ನಿಷೇಧ ಏಕಕಾಲಕ್ಕೆ ಆಗಬೇಕು: ಉಡುಪಿ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ ಅಭಿಪ್ರಾಯ

Spread the love

ಪ್ಲಾಸ್ಟಿಕ್ ನಿಷೇಧ ಏಕಕಾಲಕ್ಕೆ ಆಗಬೇಕು: ಉಡುಪಿ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ ಅಭಿಪ್ರಾಯ

ಉಡುಪಿ: ಜಿಲ್ಲೆಯಲ್ಲಿ ಪ್ಲಾಸ್ಟಿಕ್ ನಿಷೇಧ ವಾಗಿದ್ದರೂ ಎಲ್ಲಡೆ ಈಗಲೂ ಪ್ಲಾಸ್ಟಿಕ್ ಬಳಕೆಯಾಗುತ್ತಿದೆ. 2016 ರ ಪ್ಲಾಸ್ಟಿಕ್ ನಿಷೇಧ ಕಾಯ್ದೆಯ ಅನ್ವಯ ಇಡೀ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ನಿಷೇಧ ಕಾಯ್ದೆಯನ್ನು ಕಾರ್ಯರೂಪಕ್ಕೆ ತರಬೇಕಾದರೆ ಎಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಪ್ಲಾಸ್ಟಿಕ್ ನಿಷೇಧ ಜಾರಿಯಾಗಬೇಕು ಎಂದು ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಅವರ ಅಧ್ಯಕ್ಷೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಯಿತು.

ಪ್ಲಾಸ್ಟಿಕ್ ನಿಷೇಧವಾಗಬೇಕಾದರೆ ಒಂದು ಕಡೆಯಲ್ಲಿ ಆದರೆ ಸಾಲದು, ಗ್ರಾಮ ಹಾಗೂ ನಗರ ಪ್ರದೇಶದಲ್ಲಿ ಎರಡೂ ಕಡೆ ಖಾಸಗಿ ಕಾರ್ಯಕ್ರಮಗಳು, ಮದುವೆ ಹಾಗೂ ಕಲ್ಯಾಣ ಮಂಟಪಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಬೇಕು. ಕೇವಲ ಪ್ಲಾಸ್ಟಿಕ್ ಬಳಕೆ ನಿಷೇಧಿಸಿದರೆ ಸಾಲದು ಪ್ಲಾಸ್ಟಿಕ್ ಉತ್ಪನ್ನಗಳ ಉತ್ಪಾದಿಸುವ ಘಟಕಗಳ ಸ್ಥಾಪನೆಗೆ ಅವಕಾಶ ನೀಡದೆ ಪ್ಲಾಸ್ಟಿಕ್ ಉತ್ಪಾದನೆಗಳ ಮೇಲೆ ಕಡಿವಾಣ ಹಾಕಬೇಕು. ಈಗಾಗಲೇ ವಂಡ್ಸೆಯಲ್ಲಿ ಬಟ್ಟೆ ಬ್ಯಾಗ್ಗಳ ತಯಾರಿಕಾ ಘಟಕವನ್ನು ಸ್ಥಾಪಿಸಲಾಗಿದೆ. ಈ ರೀತಿ ಎಲ್ಲಾ ಗ್ರಾಮಗಳಲ್ಲೂ ನಡೆದರೆ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇಧಿಸಬಹುದು ಎಂದರು.

ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ನಾವುಂದ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ಆರಂಭವಾಗಿ 5 ತಿಂಗಳಾದರೂ ಸಹ ಈವರೆಗೂ ಕಾಮಗಾರಿ ಪೂರ್ಣಆಗದಿರುವ ಬಗ್ಗೆ ಚರ್ಚೆ ನಡೆಯಿತು. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿ ಮಾತನಾಡಿ, ಹಳೇ ಪೈಪ್ ಲೈನ್ ಈಗಾಗಲೇ ಇದ್ದು, ಹೊಸ ಪೈಪ್ಲೈನ್ನ ಬೇಡಿಕೆ ಬಂದಿದೆ.ಆದ್ರೆ ಹೊಸ ಪೈಪ್ ಲೈನ್ ಅಳವಡಿಸಲು ಭೂ ಸ್ವಾಧೀನ ಮಾಡಬೇಕಾಗಿದ್ದು, ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕವಷ್ಟೆ ಹೊಸ ಪೈಪ್ ಲೈನ್ ನೀಡಲಾಗುತ್ತದೆ. ಭೂ ಸ್ವಾಧೀನ ಪ್ರಕ್ರಿಯೆ ನಡೆದರೆ ಒಂದುವರೆ ತಿಂಗಳೊಳಗೆ ನೀರಿನ ಪೈಪ್ಲೈನ್ ಒದಗಿಸಿ ಕೊಡುವ ಭರವಸೆ ನೀಡಿದರು.

ಸಭೆಯಲ್ಲಿ ಸಾಮಾಜಿಕ ಪಿಂಚಣಿಗಳು ಸಕಾಲಕ್ಕೆ ತಲುಪದಿರುವ ಬಗ್ಗೆ ಚರ್ಚೆಯಾಯಿತು ಇದಕ್ಕೆ ಉತ್ತರಿಸಿದ ಉಡುಪಿ ತಹಶೀಲ್ದಾರ್ ಮಾತನಾಡಿ, ಖಜಾನೆ ತಂತ್ರಾಂಶದ ಕೆ2 ನಿಂದಾಗಿ ಕೆಲವೊಂದು ಸಮಸ್ಯೆಗಳು ಇದೆ. ಅಲ್ಲದೇ ಒಂದೇ ಕುಟುಂಬದ ಇಬ್ಬರು ಫಲಾನುಭವಿಗಳಿಗೂ ಒಂದೇ ಆಧಾರ್ ಸಂಖ್ಯೆ ಜೋಡಣೆಯಾಗಿದ್ದು ಸಮಸ್ಯೆಯಾಗಿದೆ. ಈ ಬಗ್ಗೆ ಖಜಾನೆ ಅಧಿಕಾರಿಯೊಂದಿಗೆ ಚರ್ಚಿಸಿದ್ದು, ಪ್ರಕರಣವನ್ನು ಗುರುತಿಸಿ ಪಿಂಚಣಿ ಮೊತ್ತವನ್ನು ಫಲಾನುಭವಿಗಳಿಗೆ ವಿತರಣೆ ಮಾಡುವುದಾಗಿ ತಿಳಿಸಿದರು. ಪಿಂಚಣಿ ಮೊತ್ತಗಳು ನೇರವಾಗಿ ಫಲಾನುಭವಿಗಳಿಗೆ ಸೇರಬೇಕು ಎನ್ನುವ ಕಾರಣದಿಂದ ಫಲಾನುಭವಿಗಳ ಖಾತೆಗೆ ಹಾಕಲಾಗುತ್ತಿದೆ ಎಂದರು.

ಕೊಕ್ಕರ್ಣೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಟಂಬೈಲು ಪ್ರದೇಶದಲ್ಲಿ 4 ವರ್ಷದ ಹಿಂದೆ 2 ಕೋಟಿ ರೂ. ವೆಚ್ಚದಲ್ಲಿ ಏಕಪಥ ರಸ್ತೆ ಕಾಮಗಾರಿಯಾಗಿದ್ದು, ರಸ್ತೆಯ ಇಕ್ಕೆಲಗಳಲ್ಲಿ ಮಣ್ಣು ತುಂಬಲಾಗಿದೆ ಇಂದರಿಂದ ಮಳೆಗಾಲದಲ್ಲಿ ನೀರಿನ ಹರಿವಿಗೆ ಸಮಸ್ಯೆಯಾಗಲಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುಂತೆ ತಿಳಿಸಿದ್ದರೂ ಈ ಬಗ್ಗೆ ಯಾವುದೇ ಇಲಾಖೆ ಮಾಹಿತಿ ನೀಡಿಲ್ಲ. ಈ ಬಗ್ಗೆ ತನಿಖೆ ನಡೆಸಬೇಕೆಂದು ಸಭೆಯಲ್ಲಿ ಕೋರಲಾಯಿತು.ಈ ಬಗ್ಗೆ ಯೋಜನಾಧಿಕಾರಿ ಪ್ರತಿಕ್ರಿಯಿಸಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಮಿತಿ ಸಭೆ ಮಾಡಿ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸಲಾಗುವುದು ಎಂದರು.

ಸಭೆಯಲ್ಲಿ ಉಡುಪಿ ಶಾಸಕ ಕೆ.ರಘುಪತಿ ಭಟ್, ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಸಿಂಧೂ ಬಿ ರೂಪೇಶ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್ರಾವ್, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಬಾಬು ಶೆಟಿ,್ಟ ಶಶಿಕಾಂತ್ ಪಡುಬಿದ್ರೆ, ಮತ್ತಿತರರು ಉಪಸ್ಥಿತರಿದ್ದರು.


Spread the love