ಬಂಟ್ವಾಳದಲ್ಲಿ ಎಂ.ಡಿ.ಎಂ.ಎ ವಸ್ತು ಸಹಿತ ಆರೋಪಿಯ ಬಂಧನ
ಬಂಟ್ವಾಳ: ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಂ.ಡಿ.ಎಂ.ಎ ಮಾದಕ ವಸ್ತು (ಡ್ರಗ್) ಹೊಂದಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಿನಾಂಕ 15-10-2025 ರಂದು, ಬಂಟ್ವಾಳ ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕರು ಹಾಗೂ ಠಾಣಾ ಸಿಬ್ಬಂದಿಗಳು ಪಾಣೆಮಂಗಳೂರು ಗ್ರಾಮದ ಸ್ಮಶಾನ ರಸ್ತೆಯಲ್ಲಿ ಪೆಟ್ರೋಲಿಂಗ್ ವೇಳೆ ಕಾರ್ಯಾಚರಣೆ ನಡೆಸಿದರು.
ಈ ವೇಳೆ, ಕೆಎ-19-ಡಿ-1806 ನಂಬರಿನ ಆಟೋ ರಿಕ್ಷಾವನ್ನು ಸ್ಮಶಾನದ ಪಕ್ಕದಲ್ಲಿ ನಿಲ್ಲಿಸಿರುವುದನ್ನು ಗಮನಿಸಿ, ಅದರಲ್ಲಿ ಅನುಮಾನಾಸ್ಪದವಾಗಿ ಕುಳಿತಿದ್ದ ವ್ಯಕ್ತಿಯನ್ನು ವಿಚಾರಿಸಲಾಯಿತು. ವಿಚಾರಣೆ ವೇಳೆ ಆ ವ್ಯಕ್ತಿ ತನ್ನನ್ನು ಮೊಹಮ್ಮದ್ ಇಮ್ತಿಯಾಜ್ (40), ಬಂಟ್ವಾಳ ತಾಲೂಕು ನಿವಾಸಿ ಎಂದು ಪರಿಚಯಿಸಿಕೊಂಡಿದ್ದು, ಈತ ಬಂಟ್ವಾಳ ನಗರ ಠಾಣೆಯಲ್ಲಿ ಈಗಾಗಲೇ ದಾಖಲಾದ ಅ.ಕ್ರ. 50/2025 ಪ್ರಕರಣದಲ್ಲಿ ಆರೋಪಿಯಾಗಿರುವುದಾಗಿ ಪತ್ತೆಯಾಯಿತು.
ಪೊಲೀಸರು ವಿಚಾರಣೆ ನಡೆಸಿದಾಗ, ಇಮ್ತಿಯಾಜ್ ತನ್ನ ಬಳಿ ಎಂ.ಡಿ.ಎಂ.ಎ ಮಾದಕ ವಸ್ತು ಇರುವುದು ಹಾಗೂ ಅದನ್ನು ಸೇವಿಸಲು ಇಲ್ಲಿ ಬಂದಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ.
ತನಿಖೆಯ ವೇಳೆ ಒಟ್ಟು 0.760 ಗ್ರಾಂ (760 ಮಿಲಿಗ್ರಾಂ) ಎಂ.ಡಿ.ಎಂ.ಎ ವಸ್ತು ಪತ್ತೆಯಾಗಿದ್ದು, ಅದರ ಅಂದಾಜು ಮೌಲ್ಯ ರೂ. 1,000/- ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ. 117/2025, ಕಲಂ 8(c), 22(b) NDPS Act 1985 ಅಡಿ ಪ್ರಕರಣ ದಾಖಲಿಸಲಾಗಿದೆ.
ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮಾನ್ಯ ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.