ಬಂದರು ಜಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ- ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ 

Spread the love

ಬಂದರು ಜಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ- ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ 

ಉಡುಪಿ: ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಅವಕಾಶ ಇರುವ ಬಂದರು ಇಲಾಖೆಗೆ ಸೇರಿದ ಖಾಲಿ ಜಾಗಗಳಲ್ಲಿ ಮೂಲಸೌಕರ್ಯಗಳನ್ನು ಒದಗಿಸಿ ಪ್ರವಾಸಿ ತಾಣಗಳನ್ನಾಗಿ ಪರಿವರ್ತಿಸಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.

ಅವರು ಮಂಗಳವಾರ ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು. ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕ ಸ್ಥಳಗಳನ್ನು ಗುರುತಿಸಿ ಯೋಜನೆ ರೂಪಿಸಲು ಈಗಾಗಲೇ ರಾಜ್ಯ ಸರಕಾರ ಸಮಾಲೋಚಕರನ್ನು ನೇಮಿಸಿದೆ. ಆದರೆ, ಹಲವೆಡೆ ಸೂಕ್ತ ಜಮೀನು ಲಭ್ಯವಿಲ್ಲದೇ, ಪ್ರವಾಸಿಗರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಪ್ರವಾಸೋದ್ಯಮಕ್ಕೆ ಪೂರಕವಾದ ಸಾಕಷ್ಟು ಖಾಲಿ ಜಾಗಗಳು ಬಂದರು ಇಲಾಖೆಯ ಸ್ವಾಧೀನದಲ್ಲಿದೆ. ಜಿಲ್ಲಾಡಳಿತವು ಉತ್ತಮ ರೀತಿಯ ಪ್ರವಾಸಿ ಯೋಜನೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಮುಂದೆ ಬರುವ ಸಂಸ್ಥೆಗಳನ್ನು ಪಾರದರ್ಶಕ ಮಾದರಿಯಲ್ಲಿ ಗುರುತಿಸಿ, ಬಂದರು ಇಲಾಖೆಗೆ ರವಾನಿಸಲಿದೆ. ಅಲ್ಲಿಂದ ಜಮೀನು ಲೀಸ್‍ಗೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಉಡುಪಿ ಜಿಲ್ಲೆಯಲ್ಲಿ ಬಂದರು ಇಲಾಖೆಯ ಸ್ವಾಧೀನದಲ್ಲಿರುವ ಖಾಲಿ ಜಮೀನುಗಳ ಪಟ್ಟಿಯನ್ನು ನೀಡಬೇಕು. ಬಂದರು ಇಲಾಖೆ ಯಾವುದೇ ಜಾಗವನ್ನು ನೇರವಾಗಿ ಪ್ರವಾಸಿ ಸಂಸ್ಥೆಗಳಿಗೆ ನೀಡುವಂತಿಲ್ಲ ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದಿಗೆ ಸರಕಾರಿ ಜಾಗ ಲಭ್ಯವಿಲ್ಲದಿದ್ದಲ್ಲಿ, ಅಗತ್ಯಬಿದ್ದರೆ ಖಾಸಗೀ ಜಾಗವನ್ನು ಭೂಸ್ವಾಧೀನ ಮಾಡಿಕೊಳ್ಳಲಾಗುವುದು ಎಂದರು. ಕುಂದಾಪುರ ಕೋಡಿ ಹಾಗೂ ಗಂಗೊಳ್ಳಿಯಲ್ಲಿ ಸಮುದ್ರದಲ್ಲಿ ನಿರ್ಮಿಸಲಾಗಿರುವ ಬ್ರೇಕ್ ವಾಟರ್‍ಗಳಲ್ಲಿ ಮಲ್ಪೆ ಮಾದರಿಯಲ್ಲಿ ಸೀ ವಾಕ್ ಮತ್ತಿತರ ಸೌಲಭ್ಯ ನಿರ್ಮಿಸುವ ಬಗ್ಗೆ ಸೂಕ್ತ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಧಿಕಾರಿಗಳು ತಿಳಿಸಿದರು.

ಬಂದರು ಇಲಾಖೆ ನಿರ್ದೇಶಕ ಕ್ಯಾಪ್ಟನ್ ಸ್ವಾಮಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜನಾರ್ಧನ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಮಲ್ಪೆ ಬೀಚ್ ಅಭಿವೃದ್ಧಿ: ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ ಸಭೆ ನಡೆಸಿದರು. ಮಲ್ಪೆಯಿಂದ ಸೈಂಟ್ ಮೇರಿ ದ್ವೀಪಕ್ಕೆ ಪ್ರಸಕ್ತ ಬೆಳಿಗ್ಗೆ 9 ಗಂಟೆಗೆ ಬೋಟುಗಳ ಸಂಚಾರ ಆರಂಭವಾಗುತ್ತದೆ. ವಾರಾಂತ್ಯ ಮತ್ತು ರಜಾ ದಿನಗಳಲ್ಲಿ ಇದನ್ನು ಬೆಳಿಗ್ಗೆ 7 ಗಂಟೆಯಿಂದಲೇ ಆರಂಭಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು. ಪ್ರವಾಸಿಗರ ಜೀವ ಸುರಕ್ಷತೆ ದೃಷ್ಟಿಯಿಂದ ಮಲ್ಪೆ ಬೀಚ್‍ಗೆ ಒಂದು ಜೆಟ್ ಸ್ಕೀ ಹಾಗೂ ಅಂಬ್ಯುಲೆನ್ಸ್ ಖರೀದಿಸಲು ಸಭೆಯಲ್ಲಿ ತೀಮಾನಿಸಲಾಯಿತು. ಉಡುಪಿ ಕರಾವಳಿ ಬೈಪಾಸ್‍ನಿಂದ ಬಂದರು ಪ್ರವೇಶದ್ವಾರದವರೆಗಿನ ರಸ್ತೆಯನ್ನು ಚತುಷ್ಪಥಗೊಳಿಸುವ ಪ್ರಸ್ತಾವ ಇದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ತಿಳಿಸಿದರು.


Spread the love