ಬಾಬರಿ ಮಸ್ಜಿದ್ ಧ್ವಂಸ ಪ್ರಕರಣದ ತೀರ್ಪು ನಾಚಿಕೆಗೇಡಿನ ಕೃತ್ಯ, ಭಾರತದ ಕಲ್ಪನೆಗೊಂದು ಸವಾಲು: ಪಾಪ್ಯುಲರ್ ಫ್ರಂಟ್

Spread the love

ಬಾಬರಿ ಮಸ್ಜಿದ್ ಧ್ವಂಸ ಪ್ರಕರಣದ ತೀರ್ಪು ನಾಚಿಕೆಗೇಡಿನ ಕೃತ್ಯ, ಭಾರತದ ಕಲ್ಪನೆಗೊಂದು ಸವಾಲು: ಪಾಪ್ಯುಲರ್ ಫ್ರಂಟ್

ಮಂಗಳೂರು: ಬಾಬರಿ ಮಸ್ಜಿದ್ ಧ್ವಂಸ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪು ದೇಶದ ಜನತೆಗೆ ನಾಚಿಕೆಗೇಡಿನ ವಿಚಾರವಾಗಿದೆ ಮತ್ತು ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯೊಂದಿಗೆ ಜಾತ್ಯತೀತ ದೇಶವಾಗಿ ಭಾರತದ ಕಲ್ಪನೆಗೆ ಒಂದು ಸವಾಲಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಚೆಯರ್ ಮೆನ್ ಒ.ಎಂ.ಎ ಸಲಾಂ ಹೇಳಿದ್ದಾರೆ.

ಮಸ್ಜಿದ್ ಧ್ವಂಸದಲ್ಲಿ ಪಿತೂರಿ ನಡೆದಿಲ್ಲ, ಉನ್ನತ ನಾಯಕರು ಗುಂಪನ್ನು ತಡೆಯಲು ಪ್ರಯತ್ನಿಸಿದ್ದರು, ಗುಂಬಝ್ ಮೇಲೆ ಹತ್ತಿ ಮಸ್ಜಿದ್ ಧ್ವಂಸಗೊಳಿಸಿದವರು ಕೇವಲ ಕಿಡಿಗೇಡಿಗಳಾಗಿದ್ದರು. ಮಾತ್ರವಲ್ಲ, ಅವರೆಲ್ಲರೂ ಯಾವುದೇ ಗುರುತನ್ನು ಹೊಂದಿರಲಿಲ್ಲ ಎಂದು ಘೋಷಿಸುವ ಮೂಲಕ ಈ ತೀರ್ಪು ನ್ಯಾಯ ವಿತರಣಾ ವ್ಯವಸ್ಥೆಯನ್ನು ಅಣಕಿಸಿದೆ. ಹಾಡಹಗಲೇ, ಮಾಧ್ಯಮಗಳ ಬೆಳಕಿನಲ್ಲಿ ನಡೆದ ಸಂಘಟಿತ ಅಪರಾಧದ ಘೋರ ಕೃತ್ಯದ 28 ಬಳಿಕ ವರ್ಷಗಳ ಸಿಬಿಐ ಕೋರ್ಟ್ ನ್ಯಾಯಾಧೀಶ ಎಸ್.ಕೆ.ಯಾದವ್ ತೀರ್ಪು ನೀಡಿದ್ದಾರೆ. ಎಲ್.ಕೆ.ಅಡ್ವಾನಿ, ಮುರಳಿ ಮನೋಹರ್ ಜೋಷಿಯಂತಹ ಮತ್ತಿತರರ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲ ಎಂದು ಹೇಳಿ ಎಲ್ಲಾ 32 ಆರೋಪಿಗಳನ್ನು ಖುಲಾಸೆಗೊಳಿಸಿದ ಈ ತೀರ್ಪು ಅತ್ಯಂತ ಕಿವುಡು ಮತ್ತು ಕುರುಡಾಗಿದೆ ಎಂಬುದನ್ನು ಸಾಬೀತುಪಡಿಸುತ್ತದೆ. ಈ ತೀರ್ಪು ಸಂಘಪರಿವಾರದ 68 ನಾಯಕರನ್ನು ಮುಖ್ಯ ಆರೋಪಿಗಳೆಂದು ಹೆಸರಿಸಿರುವ ಲಿಬರ್ಹಾನ್ ಕಮಿಷನ್ ಆಯೋಗದ ವರದಿಯ ಶೋಧನೆಯನ್ನೂ ನಿರ್ಲಕ್ಷಿಸಿದೆ.

ಬಾಬ್ರಿ ಧ್ವಂಸ ಪ್ರಕರಣದಲ್ಲಿ ಸಿಬಿಐ ಕೋರ್ಟು ರಾಜಕೀಯಪ್ರೇರಿತ ತೀರ್ಪೊಂದನ್ನು ಸೃಷ್ಟಿಸಿದ್ದು, ಅಪರಾಧ ಪ್ರಕರಣದಲ್ಲಿರಬೇಕಾದಂತೆ ವಾಸ್ತವ ಮತ್ತು ಪುರಾವೆಗಳನ್ನು ಆಧರಿಸಿಲ್ಲ. 2019ರ ನವೆಂಬರ್ 9ರಂದು ರಾಮ ಮಂದಿರವನ್ನು ನಿರ್ಮಿಸಲು ಅನುಮತಿಸಿದ ಸುಪ್ರೀಂ ಕೋರ್ಟ್ ತೀರ್ಪಿನ ವೇಳೆ ಧ್ವಂಸ ಒಂದು ಅಪರಾಧ ಕೃತ್ಯವೆಂದು ಹೇಳಿರುವುದರಿಂದ ಧ್ವಂಸದ ಕುರಿತು ಇಂತಹ ಪಕ್ಷಪಾತದ ತೀರ್ಪನ್ನು ನಿರೀಕ್ಷಿಸಿರಲಿಲ್ಲ. ಸ್ವತಂತ್ರ ಏಜೆನ್ಸಿಗಳ ಮೇಲೆ ಬಿಜೆಪಿ ನೇತೃತ್ವದ ಸರಕಾರದ ಸಂಪೂರ್ಣ ಪ್ರಭಾವ ಮತ್ತು ಹೆಚ್ಚುತ್ತಿರುವ ನಿಯಂತ್ರಣವು ದೇಶದ ಮುಂದಿರುವ ದೊಡ್ಡ ಸಮಸ್ಯೆಯಾಗಿದೆ. ಕಳೆದ 6 ವರ್ಷಗಳ ಹಲವು ನಿದರ್ಶನಗಳು ಕೇಂದ್ರೀಯ ಏಜೆನ್ಸಿಗಳ ಸ್ವಾತಂತ್ರದ ಮೇಲೆ ನಡೆದ ದಾಳಿಯನ್ನು ಬಹಿರಂಗಡಿಸುತ್ತವೆ.

ವಾಸ್ತವದಲ್ಲಿ ಮುಸ್ಲಿಮರ ಮತ್ತು ನ್ಯಾಯಕ್ಕಾಗಿ ಆಗ್ರಹಿಸುವ ಎಲ್ಲಾ ಭಾರತೀಯರ ತಲ್ಲಣಗಳು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ದಿನದಂದೇ ಬರಿದಾಗಿವೆ. ಆದಾಗ್ಯೂ, ಈ ದಿನವು ಭಾರತೀಯ ಇತಿಹಾಸದ ಮತ್ತೊಂದು ಕರಾಳ ದಿನವಾಗಿ ನೆನಪಿನಲ್ಲಿರಲಿದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಪರವಾಗಿ ಚೆಯರ್ ಮೆನ್ ಒ.ಎಂ.ಎ. ಸಲಾಂ, ನಿರಂತರ ಹಿನ್ನಡೆ ಕಾಣುತ್ತಿರುವ ಈ ಸಮಯದಲ್ಲಿ ಜನರು ತಮ್ಮ ಸ್ಪೂರ್ತಿಯನ್ನು ಕಳೆದುಕೊಳ್ಳಬಾರದು ಮತ್ತು ಸಾಧ್ಯವಿರುವ ಎಲ್ಲಾ ವಿಧಾನಗಳಿಂದ ನ್ಯಾಯ ಮತ್ತು ಶಾಂತಿ ಪುನಃಸ್ಥಾಪನೆಯ ಹೋರಾಟದಲ್ಲಿ ದೃಢವಾಗಿ ನಿಲ್ಲಬೇಕೆಂದು ಕರೆ ನೀಡಿದ್ದಾರೆ.


Spread the love