ಬಿಜೆಪಿ ಅಧಿಕಾರ ಸ್ವೀಕರಿಸುವ ಮೊದಲೇ ಆಸ್ತಿ ತೆರಿಗೆ ಯೋಜನೆಯ ರೂಪುರೇಶೆ ಸಿದ್ಧಪಡಿಸಿದ್ದು ಕಾಂಗ್ರೆಸ್- ವೇದವ್ಯಾಸ ಕಾಮತ್

Spread the love

ಬಿಜೆಪಿ ಅಧಿಕಾರ ಸ್ವೀಕರಿಸುವ ಮೊದಲೇ ಆಸ್ತಿ ತೆರಿಗೆ ಯೋಜನೆಯ ರೂಪುರೇಶೆ ಸಿದ್ಧಪಡಿಸಿದ್ದು ಕಾಂಗ್ರೆಸ್- ವೇದವ್ಯಾಸ ಕಾಮತ್

ಮಂಗಳೂರು : ಎಸ್ ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಸ್ವಯಂ ಘೋಷಿತ ಆಸ್ತಿ ತೆರಿಗೆ ಯೋಜನೆ ಪ್ರಾರಂಭಿಸಿ, ಸುತ್ತೋಲೆಯನ್ನು ಮಂಗಳೂರು ಮಹಾನಗರ ಪಾಲಿಕೆಗೆ ಕಳುಹಿಸಿಕೊಟ್ಟಿದ್ದರು. ಆಗ ಪಾಲಿಕೆಯಲ್ಲಿ ಅಧಿಕಾರದಲ್ಲಿದ್ದದ್ದು ಕಾಂಗ್ರೆಸ್. ಕಾಂಗ್ರೆಸ್ ಮುಖಂಡರಿಗೆ ಮನಸ್ಸಿದ್ದಲ್ಲಿ ಆವತ್ತೆ ಎಸ್ ಎಂ ಕೃಷ್ಣ ಅವರಿಗೆ ಮನವಿ ಮಾಡಿ ಜನರ ಮೇಲೆ ಹೇರಲಾಗುವ ತೆರಿಗೆಯ ಭಾರವನ್ನು ಹಿಂತೆಗೆಯುವಂತೆ ಒತ್ತಾಯಿಸಬಹುದಿತ್ತು. ಆದರೆ ಅದನ್ನು ಕಾಂಗ್ರೆಸ್ ಮಾಡದೇ ಈಗ ಬಿಜೆಪಿಯ ಮೇಲೆ ಗೂಬೆ ಕೂರಿಸಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸೆಪ್ಟೆಂಬರ್ 2007 ರಂದು ಮಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ಘೊಷಣೆ ನಡೆದಿತ್ತು. 28.9.2007 ರಂದು ಚುನಾವಣೆ ನಡೆದಿತ್ತಾದರೂ ಮಾರ್ಚ್ 2008 ರ ತನಕ ಮೇಯರ್ ಆಯ್ಕೆ ನಡೆದಿರಲಿಲ್ಲ. ಮಾರ್ಚ್ 2008 ರಂದು ಬಿಜೆಪಿಯ ಮೊದಲ ಮೇಯರ್ ಆಗಿ ಗಣೇಶ್ ಹೊಸಬೆಟ್ಟು ನೇಮಕವಾದರು. ಅವರು ಅಧಿಕಾರ ಸ್ವೀಕಾರ ಮಾಡಿದಾಗ ಸ್ವಯಂ ಘೋಷಿತ ಆಸ್ತಿ ತೆರಿಗೆ ಯೋಜನೆ ಕಾರ್ಯರೂಪಕ್ಕೆ ಬಂದಾಗಿತ್ತು. ಜನರು ತೆರಿಗೆ ಕಟ್ಟಲು ಪ್ರಾರಂಭಿಸಿದ್ದರು. ಯಾವುದೇ ಮೇಯರ್ ಅಧಿಕಾರ ವಹಿಸಿಕೊಂಡ ತಕ್ಷಣ ಇಷ್ಟು ದೊಡ್ಡ ಯೋಜನೆ ಒಮ್ಮೆಲ್ಲೆ ಅನುಷ್ಟಾನಕ್ಕೆ ತರಲು ಸಾಧ್ಯವೇ ಇಲ್ಲ. ಅದರರ್ಥ ಗಣೇಶ್ ಹೊಸಬೆಟ್ಟು ಅವರು ಅಧಿಕಾರ ಸ್ವೀಕಾರ ಮಾಡುವ ಮೊದಲೇ ಈ ಯೋಜನೆಯ ರೂಪುರೇಶೆ ಸಿದ್ಧಪಡಿಸಿ ಆಗಿತ್ತು. ಯೋಜನೆಗೆ ಅಡಿಪಾಯ ಹಾಕುವ ಕೆಲಸ ಮುಗಿದು ಆಗಿತ್ತು. 2007 ಸೆಪ್ಟೆಂಬರ್ ನಿಂದ ಮಾರ್ಚ್ 2008 ರ ಒಳಗೆ ಪಾಲಿಕೆಯಲ್ಲಿ ಚುನಾಯಿತ ಸರಕಾರ ಅಧಿಕಾರ ವಹಿಸಿರಲಿಲ್ಲ ಮತ್ತು ಸ್ವಯಂ ಘೋಷಿತ ಆಸ್ತಿ ತೆರಿಗೆ ಯೋಜನೆ ಆರಂಭಿಸುವ ಯಾವುದೇ ನಿರ್ಣಯಗಳು ಜಾರಿಗೆ ಬರುವ ಅವಕಾಶವೇ ಇರಲಿಲ್ಲ. ಅದರರ್ಥ ಚುನಾವಣೆ ನಡೆಯುವ ಮೊದಲೇ ಇದರ ಎಲ್ಲ ರೂಪುರೇಶೆ ಸಿದ್ಧಪಡಿಸುವ ಪ್ರಕ್ರಿಯೆ ನಡೆದು ಹೋಗಿತ್ತು. ಎಲ್ಲವನ್ನು ಸಿದ್ಧಪಡಿಸಿ ಅಧಿಕಾರದಿಂದ ಇಳಿದವರು ಯಾರು? ಹಾಗಾದರೆ ಬಿಜೆಪಿ ಅಧಿಕಾರಕ್ಕೆ ಬರುವ ಮೊದಲೇ ಅಧಿಕಾರದಲ್ಲಿ ಯಾವ ಪಕ್ಷ ಇತ್ತು ಮೇಯರ್ ಹರಿನಾಥ್ ಅವರೇ?
ಕಳೆದ ಚುನಾವಣೆಯ ಸಂದರ್ಭದಲ್ಲಿ ಹಲವಾರು ಬಾರಿ ಪತ್ರಿಕಾಗೋಷ್ಟಿ ಮಾಡಿ ತಾವು ಅಧಿಕಾರಕ್ಕೆ ಬಂದರೆ ಯಾವುದೇ ಕಾರಣಕ್ಕೂ ಸ್ವಯಂ ಘೋಷಿತ ಆಸ್ತಿ ತೆರಿಗೆ ಹೆಚ್ಚಿಸುವುದಿಲ್ಲ ಎಂದು ಭರವಸೆ ಕೊಟ್ಟಿದ್ದನ್ನು ಅದನ್ನು ಪ್ರಣಾಳಿಕೆಯಲ್ಲಿ ಸೇರಿಸಿದ್ದನ್ನು ಮರೆತಿರಾ ಹರಿನಾಥ್ ಅವರೇ? ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ 2014-15 ರಲ್ಲಿ ಮಹಾಬಲ ಮಾರ್ಲ ಮೇಯರ್ ಆಗಿದ್ದಾಗ ಮೊದಲ ಬಾರಿ ಆಸ್ತಿ ತೆರಿಗೆ ಹೆಚ್ಚಿಸಿದಿರಿ. ಈಗ ಮತ್ತೊಮ್ಮೆ 15% ಹೆಚ್ಚಿಸುತ್ತಿದ್ದಿರಿ. ಇದು ನೀವು ಜನರಿಗೆ ಕೊಟ್ಟ ಪ್ರಾಮಿಸ್
ಮರೆತಿರುವುದಕ್ಕೆ ಬೇರೆ ಸಾಕ್ಷಿ ಬೇಕಾ ಮೇಯರ್ ಅವರೇ?

ಸರಕಾರದ ಸುತ್ತೊಲೆ ಪ್ರಕಾರ ಸ್ವಯಂ ಘೋಷಿತ ಆಸ್ತಿ ತೆರಿಗೆ ಹೆಚ್ಚಿಸದಿದ್ದರೆ ಅನುದಾನ ಕಡಿತವಾಗುತ್ತೆ ಎಂದು ಜನರಿಗೆ ಸಮಜಾಯಿಷಿಕೆ ಕೊಡುತ್ತಿದ್ದಿರಿ. ಈಗ ಇರುವುದು ನಿಮ್ಮದೇ ಕಾಂಗ್ರೆಸ್ ಪಕ್ಷದ ಸರಕಾರ. ಪಾಲಿಕೆಯ ವ್ಯಾಪ್ತಿಯಲ್ಲಿ ಇರುವುದು ನಿಮ್ಮದೇ ಪಕ್ಷದ ಶಾಸಕರು. ಹಾಗಿರುವಾಗ ನಿಮ್ಮ ಜನಪ್ರತಿನಿಧಿಗಳನ್ನು ಮುಖ್ಯಮಂತ್ರಿಗಳ ಬಳಿ ಕರೆದುಕೊಂಡು ಹೋಗಿ ಚುನಾವಣೆಯಲ್ಲಿ ಜನರಿಗೆ ತೆರಿಗೆ ಹೆಚ್ಚಳ ಮಾಡುವುದಿಲ್ಲ ಎಂದು ಭರವಸೆ ಕೊಟ್ಟಿದ್ದೇವೆ. ಈಗ ಅದಕ್ಕೆ ತಪ್ಪಿದರೆ ಮೋಸ ಮಾಡಿದಂತೆ ಆಗುತ್ತದೆ. ಆದ್ದರಿಂದ ತೆರಿಗೆ ಹೆಚ್ಚಿಸದಿರುವುದಕ್ಕೆ ಅನುಮತಿ ಕೊಡಬೇಕು, ಹೊಸ ಸುತ್ತೋಲೆ ಹೊರಡಿಸಬೇಕು ಎಂದು ಯಾಕೆ ಮನವಿ ಮಾಡಿಲ್ಲ ಮೇಯರ್ ಹರಿನಾಥ್ ಅವರೇ?

ಚುನಾವಣೆಯ ಸಂದರ್ಭದಲ್ಲಿ ನೀವು ಹಲವಾರು ಸುದ್ದಿಗೋಷ್ಟಿ ಕರೆದು ಸ್ವಯಂ ಘೋಷಿತ ಆಸ್ತಿ ತೆರಿಗೆ ಹೆಚ್ಚಿಸುವುದಿಲ್ಲ ಎಂದು ಭರವಸೆ ಕೊಡುವಾಗ ನಿಮ್ಮದೇ ಪಕ್ಷ ಅಧಿಕಾರದಲ್ಲಿ ಇರುವ ರಾಜ್ಯ ಸರಕಾರ ಭವಿಷ್ಯದಲ್ಲಿ ಸುತ್ತೋಲೆ ಹೊರಡಿಸಿದರೆ ಅದನ್ನು ಪಾಲಿಸುವ ಅನಿವಾರ್ಯತೆ ಬರುತ್ತೆ ಎನ್ನುವ ಸಾಮಾನ್ಯ ಜ್ಞಾನ ನಿಮಗೆ ಇರಲಿಲ್ಲವೇ ಮೇಯರ್ ಅವರೇ. ನೀವು ಕೊಟ್ಟ ಭರವಸೆಗಳನ್ನು ಮರೆತಿರಬಹುದು ಆದರೆ ನಿಮ್ಮ ಹಿರಿಯ ನಾಯಕ ಜನಾರ್ಧನ ಪೂಜಾರಿಯವರು ಮರೆತಿಲ್ಲ, ಅವರು ಜನರಲ್ಲಿ ಕ್ಷಮೆ ಕೇಳಿದ್ದಾರೆ. ಅದರರ್ಥ ಅಧಿಕಾರರೂಢ ನೀವು ಚುನಾವಣೆಯ ಮೊದಲೊಂದು ಅಧಿಕಾರಕ್ಕೆ ಬಂದ ಬಳಿಕ ಮತ್ತೊಂದು ಮಾತನಾಡುವ ಮೂಲಕ ಜನರಿಗೆ ಮಾಡಿರುವ ಮೋಸವನ್ನು ಜನ ಮರೆಯುವುದಿಲ್ಲ. ಅದಕ್ಕೆ ಬರುವ ದಿನಗಳಲ್ಲಿ ಜನರು ತಕ್ಕ ಉತ್ತರ ಕೊಡಲಿದ್ದಾರೆ. ಜನರ ಪರವಾಗಿ ಇದೇ ಬುಧವಾರ ಬೆಳಿಗ್ಗೆ 10 ಗಂಟೆಗೆ ಮಂಗಳೂರು ಮಹಾನಗರ ಪಾಲಿಕೆಯ ಹೊರಗೆ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದು ವೇದವ್ಯಾಸ ಕಾಮತ್ ತಿಳಿಸಿದರು.


Spread the love