ಬಿಜೆಪಿ ಶಾಸಕರ ಒಂದು ದಿನದ ರೆಸಾರ್ಟ್​ ಖರ್ಚು ರೂ. 4.50 ಕೋಟಿ!

Spread the love

ಬಿಜೆಪಿ ಶಾಸಕರ ಒಂದು ದಿನದ ರೆಸಾರ್ಟ್​ ಖರ್ಚು ರೂ. 4.50 ಕೋಟಿ!

 ಗುರುಗ್ರಾಮ : ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಸರ್ಕಾರವನ್ನು ಉರುಳಿಸಲು ಪಣ ತೊಟ್ಟಿರುವ ಬಿಜೆಪಿ ಆಪರೇಷನ್​ ಕಮಲಕ್ಕೆ ಮತ್ತೆ ಮುಂದಾಗಿದೆ. ಬಿಜೆಪಿ ಶಾಸಕರ ಜೊತೆ ಸಂಪರ್ಕದಲ್ಲಿದ್ದೇವೆ ಎನ್ನುವ ಕಾಂಗ್ರೆಸ್​ ಹೇಳಿಕೆಗೆ ಭಯಬಿದ್ದು, ತಮ್ಮ ಶಾಸಕರನ್ನೇ ಐಷಾರಾಮಿ ಹೋಟೆಲ್​ನಲ್ಲಿಟ್ಟು ಬಿಜೆಪಿ ರೆಸಾರ್ಟ್​ ರಾಜಕಾರಣ ಆರಂಭಿಸಿದೆ. ಇದಕ್ಕಾಗಿ ಒಂದು ದಿನಕ್ಕೆ ಕೋಟಿ ಕೋಟಿ ವ್ಯಯ ಮಾಡುತ್ತಿರುವ ಬಿಜೆಪಿ ಹಿರಿತಲೆಗಳ ಬಗ್ಗೆ ಈಗ ಜನ ಸಾಮಾನ್ಯರಲ್ಲಿ ನೂರಾರು ಪ್ರಶ್ನೆಗಳು ಮೂಡಿವೆ.

ಕರ್ನಾಟಕ ಬಿಜೆಪಿಯ 90 ಶಾಸಕರು ಹರಿಯಾಣದ ಗುರುಗ್ರಾಮದಲ್ಲಿರುವ ಐಷಾರಾಮಿ ಐಟಿಸಿ ಭಾರತ್​ ಹೋಟೆಲ್​ನಲ್ಲಿ ತಂಗಿದ್ದಾರೆ. ಈ ಶಾಸಕರು ಕಾಂಗ್ರೆಸ್​ ನಾಯಕರ ಸಂಪರ್ಕಕ್ಕೆ ಬಾರದಂತೆ ಬಿಜೆಪಿ ಎಚ್ಚರಿಕೆ ವಹಿಸುತ್ತಿದೆ. ಬಿಜೆಪಿಯ ರೆಸಾರ್ಟ್​ ರಾಜಕಾರಣಕ್ಕೆ ಪ್ರತಿಯಾಗಿ ಕಾಂಗ್ರೆಸ್​​ ಪ್ರತಿಭಟನೆ ಆರಂಭಿಸಿದೆ. ಪ್ರತಿ ಶಾಸಕನ  ಮೇಲೆ ಬಿಜೆಪಿ ದಿನಕ್ಕೆ ಕನಿಷ್ಟ 4.5 ಲಕ್ಷ ರೂ. ವ್ಯಯಿಸುತ್ತಿದೆ ಎಂಬ ‘ಐಷಾರಾಮಿ’ ವಿಚಾರ ಈಗ ಬಹಿರಂಗಗೊಂಡಿದೆ.

ಐಟಿಸಿ ಐಷಾರಾಮಿ ಹೋಟೆಲ್​. ಇಲ್ಲಿ ಒಂದು ಹೊತ್ತಿನ ಊಟದದ ವೆಚ್ಛದಲ್ಲಿ ಸಾಮಾನ್ಯರು ಒಂದು ತಿಂಗಳ ಬಾಡಿಗೆ ಕಟ್ಟಬಹುದು. ಒಂದು ದಿನದ ಖರ್ಚಿನಲ್ಲಿ ಒಂದು ಪುಟ್ಟ ಮನೆಯನ್ನೇ ನಿರ್ಮಿಸಬಹುದು! ಕಾರಣ, ಇಲ್ಲಿ ಒಂದು ಊಟಕ್ಕೆ 8 ಸಾವಿರ ರೂಪಾಯಿ. ಅಂದರೆ ಮೂರು ಹೊತ್ತಿನ ಊಟಕ್ಕೆ 24 ಸಾವಿರ ರೂ! ಪ್ರತಿ ಲೀಟರ್​ ನೀರಿಗೆ 300 ರೂ. ಶಾಸಕನ ಮೇಲೆ ಒಂದು ದಿನಕ್ಕೆ ಖರ್ಚು ಮಾಡಲಾಗುತ್ತಿರುವ ಹಣ ಬರೋಬ್ಬರಿ 4.5 ಲಕ್ಷ ರೂ! ಈ ರೆಸಾರ್ಟ್​ನಲ್ಲಿ ವಿದೇಶಿ ಮದ್ಯ ಸಿಗುತ್ತದೆ. ಸಾಮಾನ್ಯರು ಕಂಡು ಕೇಳರಿಯದ ಖಾದ್ಯಗಳು ಇಲ್ಲಿ ಲಭ್ಯವಿದೆ. ಇಷ್ಟು ಸೌಕರ್ಯಗಳನ್ನು ಅನುಭವಿಸುತ್ತಾ, ಶಾಸಕರು ತಮ್ಮ ಕ್ಷೇತ್ರವನ್ನೇ ಮರೆತಂತೆ ಕಾಣುತ್ತದೆ ಎಂದು ಕಾಂಗ್ರೆಸ್​ ಮತ್ತು ಜೆಡಿಎಸ್​ ಪಕ್ಷದ ಮೂಲಗಳು ಆರೋಪ ಮಾಡುತ್ತಿವೆ.

ಕಟಿಂಗ್​ಗೆ 10 ಸಾವಿರ, ಶೇವಿಂಗ್​ಗೆ 5 ಸಾವಿರ:

ಸದ್ಯ, ಐಟಿಸಿ ರೆಸಾರ್ಟ್​​ನಲ್ಲಿ ಬಿಜೆಪಿಯ 90ಕ್ಕೂ ಹೆಚ್ಚು ಶಾಸಕರಿದ್ದಾರೆ. ಅವರೆಲ್ಲರೂ ರೆಸಾರ್ಟ್​​ ಸೇರಿ 3 ದಿನಗಳಾಗಿವೆ. ಪ್ರತಿ ಶಾಸಕನಿಗೆ 4.5 ಲಕ್ಷ ರೂ. ವೆಚ್ಚವಾಗುತ್ತಿದೆ ಎಂದು ಮೂಲಗಳು ತಿಳಿಸುತ್ತಿವೆ. ಅಂದರೆ ಈ ರೆಸಾರ್ಟ್​ ರಾಜಕಾರಣಕ್ಕೆ ಬಿಜೆಪಿ ಎಷ್ಟು ಹಣ ಸುರಿಯುತ್ತಿದೆ ಎಂದು ನೀವೇ ಅಂದಾಜಿಸಬಹುದು. ಬಹುಶಃ ಈ ಹಣದಲ್ಲಿ ಒಂದು ಜಿಲ್ಲೆಯನ್ನು ಸಂಪೂರ್ಣವಾಗಿ ಅಭಿವೃದ್ಧಿ ಮಾಡಿಬಿಡಬಹುದೇನೋ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಕಾಂಗ್ರೆಸ್​ ನಾಯಕರೊಬ್ಬರು.

ಪ್ರತಿಯೊಬ್ಬ ಪ್ರಜೆಯೂ ತಮ್ಮ ಹಳ್ಳಿ, ತಮ್ಮ ಕ್ಷೇತ್ರ ಅಭಿವೃದ್ಧಿಯಾಗಲಿ ಎಂದು ಮತ ಚಲಾಯಿಸುತ್ತಾರೆ. ಹೀಗೆ ಮತ ಚಲಾಯಿಸಿದವರು ಈಗ ಸುದ್ದಿ ವಾಹಿನಿಗಳಲ್ಲಿ ಬಿಜೆಪಿ ನಾಯಕರ ಮೋಜು-ಮಸ್ತಿಯನ್ನು ನೋಡಿ ಶಪಿಸುವ ಸ್ಥಿತಿ ಬಂದಿದೆ. ಉತ್ತರ ಕನ್ನಡ, ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಂಗನ ಕಾಯಿಲೆ ಬಂದಿದೆ. ಅನೇಕ ತಾಲೂಕುಗಳಲ್ಲಿ ಬರ ತಾಂಡವವಾಡುತ್ತಿದೆ. ಬೆಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಮೂಲ ಸೌಕರ್ಯದ ಕೊರತೆ ಇದೆ. ಸಾಲಾಮನ್ನಾ ಮಾಡಲು ರಾಜ್ಯದ ಖಜಾನೆ ಬರಿದಾಗಿದೆ. ಹೀಗಿರುವಾಗ, ಶಾಸಕರು ಈ ರೀತಿ ಮೋಜುಮಸ್ತಿ ಮಾಡುತ್ತಾ ಕುಳಿತರೆ ಕ್ಷೇತ್ರದ ಗತಿ ಏನು ಎನ್ನುವ ಪ್ರಶ್ನೆ ಸಾರ್ವಜನಿಕರದ್ದು.

ಇಷ್ಟಕ್ಕೂ ರೆಸಾರ್ಟಿನಲ್ಲಿ ದಿನವೊಂದಕ್ಕೇ ಕೋಟಿ ಕೋಟಿ ರೂಪಾಯಿ ಖರ್ಚಾಗುತ್ತಿದೆ ಎಂಬ ಮಾತು ಸತ್ಯಕ್ಕೆ ಹತ್ತಿರವಾಗಿಯೇ ಇದೆ. ಇಷ್ಟು ದೊಡ್ಡ ಮಟ್ಟದ ಖರ್ಚನ್ನು ಯಾರು ನೋಡಿಕೊಳ್ಳುತ್ತಿದ್ದಾರೆರೆ. ಎಲ್ಲಿಂದ ದುಡ್ಡು ಹರಿದು ಬರುತ್ತಿದೆ ಎಂಬುದು ಮಾತ್ರ ಪ್ರಶ್ನೆಯಾಗಿಯೇ ಉಳಿದಿದೆ. ಕಪ್ಪು ಹಣದ ಹರಿವೋ ಅಥವಾ ಶಾಸಕರು ತಮ್ಮ ಜೇಬಿನಿಂದಲೇ ಕೊಡುತ್ತಿದ್ದಾರೋ ಎಂಬುದನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಈ ರೀತಿಯ ಸಂದರ್ಭಗಳಲ್ಲಿ ಪಕ್ಷದ ನಿಷ್ಠ ಉದ್ದಿಮೆದಾರರು, ಶ್ರೀಮಂತ ಸದಸ್ಯರು ದುಡ್ಡು ಚೆಲ್ಲುತ್ತಾರೆ ಎಂಬ ಮಾತು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ.


Spread the love