ಬೀದರ್ ಶಾಲೆಯ ಸಿಎಎ ವಿರೋಧಿ ನಾಟಕ ದೇಶದ್ರೋಹದ ಪ್ರಕರಣ ಆಗುವುದಿಲ್ಲ: ಕೋರ್ಟ್

Spread the love

ಬೀದರ್ ಶಾಲೆಯ ಸಿಎಎ ವಿರೋಧಿ ನಾಟಕ ದೇಶದ್ರೋಹದ ಪ್ರಕರಣ ಆಗುವುದಿಲ್ಲ: ಕೋರ್ಟ್

ಬೀದರ್: ಬೀದರ್ ನ ಶಾಹೀನ್ ಉರ್ದು ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ಪ್ರದರ್ಶಿಸಿದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ನಾಟಕ ದೇಶದ್ರೋಹದ ಪ್ರಕರಣವಾಗುವುದಿಲ್ಲ ಎಂದು ಬೀದರ್ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಶುಕ್ರವಾರ ಹೇಳಿದೆ.

ಪ್ರಕರಣ ಸಂಬಂಧಿಸಿದಂತೆ ಶಾಹೀನ್ ಗ್ರೂಪ್ ಸಂಸ್ಥೆಗಳ ಸಂಸ್ಥಾಪಕ ಸೇರಿದಂತೆ ಶಾಲಾ ಆಡಳಿತ ಮಂಡಳಿಯ ಐವರಿಗೆ ನಿರೀಕ್ಷಣಾ ಜಾಮೀನು ನೀಡಿದ ನ್ಯಾಯಾಧೀಶೆ ಮನಗೋಳಿ ಪ್ರೇಮಾವತಿ ಅವರು, ನಾಟಕಕ್ಕೆ ಸಂಬಂಧಿಸಿದ ವಿಡಿಯೋವನ್ನು ನಾನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ನಾಟಕದಲ್ಲಿ ನಟಿಸಿದ ವಿದ್ಯಾರ್ಥಿಗಳು ಸಿಎಎ ಮತ್ತು ಎನ್ ಆರ್ ಸಿ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ ಅಷ್ಟೆ. ಹೀಗಾಗಿ ಇದು ದೇಶದ್ರೋಹದ ಪ್ರಕರಣ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಾಸಿಕ್ಯೂಷನ್ ಪ್ರಕಾರ ಇದೊಂದು ಆಕ್ರಮಣಕಾರಿ ಭಾಗವಾಗಿದೆ. ನಾಟಕದಲ್ಲಿನ ಡೈಲಾಗಳನ್ನು ಗಮನಿಸಿದರೆ ಎಲ್ಲೂ ಸರ್ಕಾರದ ವಿರುದ್ಧವಾದ ಹೇಳಿಕೆಗಳಿಲ್ಲ. ದೇಶದ್ರೋಹ ಪ್ರಕರಣದಲ್ಲಿ ಸಾಕ್ಷಿಗಳ ಕೊರತೆ ಇದೆ ಎಂದು ಹೇಳಿದ್ದಾರೆ.

ಇನ್ನು ಪೌರತ್ವ ತಿದ್ದುಪಡಿ ಕಾಯ್ದೆ/ ರಾಷ್ಟ್ರೀಯ ಪೌರತ್ವ ನೋಂದಣಿ/ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು ವಿರೋಧಿಸಿ ಶಾಲಾ ಮಕ್ಕಳಿಂದ ನಾಟಕ ಪ್ರದರ್ಶಿಸಿದ್ದ ಶಾಲೆ, ಶಿಕ್ಷಕಿ ಹಾಗೂ ವಿದ್ಯಾರ್ಥಿನಿಯೊಬ್ಬಳ ವಿಧವೆ ಪೋಷಕಿಯ ವಿರುದ್ದ ದಾಖಲಿಸಲಾಗಿದ್ದ ದೇಶದ್ರೋಹ ಪ್ರಕರಣವನ್ನು ರದ್ದು ಪಡಿಸುವಂತೆ ಕೋರಿ ಸಾಮಾಜಿಕ ಕಾರ್ಯಕರ್ತೆ ಯೋಗಿತಾ ಭಯಾನ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಆರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ನೇತೃತ್ವದ ನ್ಯಾಯಪೀಠ, ಎಫ್ ಐ ಆರ್ ರದ್ದುಕೋರಿ ತೊಂದರೆಗೊಳಗಾಗಿರುವ ವ್ಯಕ್ತಿಗಳು ನ್ಯಾಯಾಲಯದ ಮುಂದೆ ಬಂದರೆ, ಆಗ ಅದನ್ನು ಪರಿಶೀಲಿಸಿ, ಏನು ಮಾಡಬೇಕು ಎಂದು ನಿರ್ಧರಿಸಲಾಗುವುದು ಎಂದು ಹೇಳಿದೆ.

ಯೋಗಿತಾ ಭಯಾನ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಆರ್ಜಿ ಸಂಬಂಧ ಮಧ್ಯಪ್ರವೇಶಿಸಲು ನಿರಾಕರಿಸಿದ ನ್ಯಾಯಪೀಠ, ಈ ಸಂಬಂಧ ನಾವು ಯಾವುದೇ ಆದೇಶ ಹೊರಡಿಸಲು ಆಸಕ್ತರಾಗಿಲ್ಲ. ಹಾಗಾಗಿ ಆರ್ಜಿಯನ್ನು ವಜಾಗೊಳಿಸಿದ್ದೇವೆ ಎಂದು ಆದೇಶಿಸಿದೆ.

ಪೌರತ್ವ ತಿದ್ದುಪಡಿ ಕಾಯ್ದೆ/ ರಾಷ್ಟ್ರೀಯ ಪೌರತ್ವ ನೋಂದಣಿ/ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು ವಿರೋಧಿಸಿ ಮಕ್ಕಳಿಂದ ನಾಟಕ ಪ್ರದರ್ಶಿಸಿದ್ದ ಬೀದರ್ ನಗರದ ಶಾಹೀನ್ ಶಾಲೆಯ ಆಡಳಿತ ಮಂಡಳಿ ಮುಖ್ಯಸ್ಥ, ಮುಖ್ಯ ಶಿಕ್ಷಕಿ ಫರೀದಾ ಬೇಗಂ ಹಾಗೂ ವಿದ್ಯಾರ್ಥಿಯೊಬ್ಬರ ಪಾಲಕರಾದ ಅನುಜಾ ಮಿನ್ಸಾ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ, ಬಂಧಿಸಲಾಗಿತ್ತು. ಬೀದರ್ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯ ಶಾಲಾ ಆಡಳಿತ ಮಂಡಳಿಯ ೫ ಜನರಿಗೆ ನಿರೀಕ್ಷಣಾ ಜಾಮೀನು ನೀಡಿದೆ.


Spread the love