ಬೆಂಗ್ರೆಯಲ್ಲಿ ಚರಂಡಿ ನಿರ್ಮಾಣಕ್ಕೆ ಶಾಸಕ ಕಾಮತ್ ಗುದ್ದಲಿ ಪೂಜೆ

Spread the love

ಬೆಂಗ್ರೆಯಲ್ಲಿ ಚರಂಡಿ ನಿರ್ಮಾಣಕ್ಕೆ ಶಾಸಕ ಕಾಮತ್ ಗುದ್ದಲಿ ಪೂಜೆ

ಮಂಗಳೂರು ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ 60 ಬೆಂಗ್ರೆ ಪ್ರದೇಶದ ಇಮ್ತಿಯಾಜ್ ನಗರದಲ್ಲಿ ಚರಂಡಿ ಕಾಮಗಾರಿಗಳಿಗೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಶುಕ್ರವಾರ ಗುದ್ದಲಿ ಪೂಜೆ ನೆರವೇರಿಸಿದರು. ನಂತರ ಈ ಬಗ್ಗೆ ಮಾತನಾಡಿದ ಶಾಸಕರು ಅಲ್ಪಸಂಖ್ಯಾತರ ಅಭಿವೃದ್ಧಿ ನಿಧಿಯ ಅಡಿಯಲ್ಲಿ ಸುಮಾರು ಹತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಬೆಂಗ್ರೆ ಪ್ರದೇಶದಲ್ಲಿ ಚರಂಡಿ ನಿರ್ಮಾಣದ ಕಾರ್ಯ ನಡೆಸಲಿದ್ದೇವೆ.

ಈ ಭಾಗದಲ್ಲಿ ಮಳೆಗಾಲದ ಸಂದರ್ಭದಲ್ಲಿ ಮಳೆಯ ನೀರು ಹರಿದು ಹೋಗಲು ಯಾವುದೇ ಸೂಕ್ತ ವ್ಯವಸ್ಥೆ ಇಲ್ಲದೆ ನಾಗರಿಕರು ಸಂಕಟಪಡುತ್ತಿದ್ದರು. ವಾಹನಗಳ ಸಂಚಾರಕ್ಕೆ ಕೂಡ ಕಷ್ಟವಾಗುತ್ತಿತ್ತು. ಇದನ್ನು ಮನಗಂಡು ಇಲ್ಲಿ ಸಮರ್ಪಕವಾದ ಚರಂಡಿ ನಿರ್ಮಾಣ ಆಗಬೇಕು ಎಂದು ಯೋಜನೆ ಹಾಕಿಕೊಂಡಿದ್ದೇವು. ಇಲ್ಲಿ ನಿರ್ಮಾಣವಾಗಲಿರುವ ಚರಂಡಿ ಮುಖ್ಯರಸ್ತೆಯ ಮುಖ್ಯಚರಂಡಿಗೆ ಜೋಡಣೆಯಾಗಲಿದೆ ಎಂದು ಶಾಸಕ ಕಾಮತ್ ಹೇಳಿದರು. ಪಾಲಿಕೆ ಸದಸ್ಯೆ ಮೀರಾ ಕರ್ಕೇರ ಹಿಂದಿನ ವಾರ್ಡಿನಲ್ಲಿ ಚರಂಡಿ ನಿರ್ಮಾಣದ ಕಾಮಗಾರಿಗಳನ್ನು ನಡೆಸಿದ್ದಾರೆ. ಈ ಭಾಗದಲ್ಲಿ ಚರಂಡಿ ನಿರ್ಮಾಣವಾಗುವುದರಿಂದ ಈ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಲಿದೆ. ಚರಂಡಿ ನಿರ್ಮಾಣವಾಗುವ ಸಂದರ್ಭದಲ್ಲಿ ಜನರಿಗೆ ಓಡಾಡಲು ಒಂದಿಷ್ಟು ಕಷ್ಟವಾಗಬಹುದು. ಆದರೆ ಮಂಗಳೂರು ಸ್ಮಾರ್ಟ್ ಸಿಟಿ ಆಗುವ ನಿಟ್ಟಿನಲ್ಲಿ ನಗರದ ವಿವಿದೆಡೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಾವು ಹಮ್ಮಿಕೊಂಡಿದ್ದೇವೆ, ಜನರು ಸಹಕರಿಸಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದರು.

ಶಾಸಕರೊಂದಿಗೆ ಪಾಲಿಕೆ ಸದಸ್ಯ ದಿವಾಕರ ಪಾಂಡೇಶ್ವರ, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ವಸಂತ ಜೆ ಪೂಜಾರಿ, ವಾರ್ಡ್ ಅಧ್ಯಕ್ಷ ಎಂ ಸಲೀಂ, ಕಾರ್ಯದರ್ಶಿಗಳಾದ ಮಹಮ್ಮದ್ ಹನೀಫ್, ಮನಸೂರ್, ಸದಸ್ಯರಾದ ಇಮ್ತಿಯಾಸ್, ಪೊಡಿಯಾ ಮತ್ತು ಬಿಜೆಪಿ ಮುಖಂಡರಾದ ಗಂಗಾಧರ ಸಾಲ್ಯಾನ್, ಸೋಮನಾಥ ಕರ್ಕೇರ, ಲೋಕೇಶ್ ಬೆಂಗ್ರೆ ಉಪಸ್ಥಿತರಿದ್ದರು.


Spread the love