ವಿದ್ಯಾರ್ಥಿಗಳಿಗಾಗಿ ಸ್ವ-ಉದ್ಯೋಗ ತರಬೇತಿ ಕಾರ್ಯಕ್ರಮ

Spread the love

ವಿದ್ಯಾರ್ಥಿಗಳಿಗಾಗಿ ಸ್ವ-ಉದ್ಯೋಗ ತರಬೇತಿ ಕಾರ್ಯಕ್ರಮ

ಮೂಡಬಿದಿರೆ: “ಇಂದಿನ ಯುವಕರೆಲ್ಲಾ ವೈಟ್‍ಕಾಲರ್ ಕೆಲಸಗಳ ಬೆನ್ನು ಬಿದ್ದಿದ್ದಾರೆ. ಸ್ವ-ಉದ್ಯೋಗದ ಮಹತ್ವ ಮತ್ತು ಅದರ ಪ್ರಾಮುಖ್ಯತೆಯ ಬಗೆಗಿನ ಅರಿವಿನ ಕೊರತೆಯೇ ಇದಕ್ಕೆ ಮುಖ್ಯಕಾರಣ” ಎಂದು ಎಳ್ಳೂರು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಹಾಗೂ ಸ್ವ-ಉದ್ಯೋಗ ತರಬೇತುಗಾರ್ತಿ ಶರಾವತಿ ರವಿರಾಜ್ ಅಭಿಪ್ರಾಯ ಪಟ್ಟರು.

ಆಳ್ವಾಸ್ ಕಾಲೇಜಿನ ಅರ್ಥಶಾಸ್ತ್ರ ವಿಭಾಗ ಹಾಗೂ ಯೂತ್‍ರೆಡ್ ಕ್ರಾಸ್‍ಘಟಕ ಜಂಟಿಯಾಗಿ ಕಾಲೇಜಿನ ಪುಟ್ಟಣ್ಣಕಣಗಾಲ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸ್ವ-ಉದ್ಯೋಗತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

“ಈ ಸ್ಪರ್ಧಾತ್ಮಕ ಯುಗದಲ್ಲಿ ಕೆಲಸ ದೊರೆಯದ ಕಾರಣಕ್ಕೆ ಯುವಕರು ಆತ್ಮಹತ್ಯೆಗೆ ಶರಣಾಗುವ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ಆದರೆ ಅವರು ಆ ಮನೋಸ್ಥಿತಿಯಿಂದ ಹೊರಬಂದು ಒಮ್ಮೆ ಸ್ವ-ಉದ್ಯೋಗದ ಬಗ್ಗೆ ಯೋಚಿಸಿದಲ್ಲಿ ಆತ್ಮಹತ್ಯೆ ಎಂಬ ಸನ್ನಿವೇಶವೇ ಎದುರಾಗದು. ಆರಂಭದಲ್ಲಿ ಸ್ವಲ್ಪಕಠಿಣ ಎನಿಸಿದರೂ, ಭವಿಷ್ಯದಲ್ಲಿ ಉತ್ತಮ ಲಾಭ ಗಳಿಸುವಂತೆ ಮಾಡುವಂಥದ್ದು ಸ್ವ-ಉದ್ಯೋಗ ಮಾತ್ರ. ಹಾಗಾಗಿ ಇಂದಿನ ಯುವಕರು ಈ ನಿಟ್ಟಿನಲ್ಲಿ ಹೆಚ್ಚೆಚ್ಚು ಕಾರ್ಯಪ್ರವತ್ತರಾಗಬೇಕು” ಎಂದು ಪ್ರತಿಪಾದಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಹರಿಣಾಕ್ಷಿ ಮಾತನಾಡಿ “ನಮ್ಮಲ್ಲಿ ಇಂದು ಅನೇಕ ಯುವಕರು ಒಂದು ಸಣ್ಣ ಕೆಲಸ ಪಡೆದು, ಸರಳ ಜೀವನ ನಡೆಸುವುದಕ್ಕೆ ಹೆಣಗಾಡುತ್ತಿದ್ದಾರೆ. ಪದವಿ ಪಡೆದ ಮಾತ್ರಕ್ಕೆ ತಮಗೆ ತಾವೇ ಇಂಥ ಕೆಲಸಗಳನ್ನೇ ಮಾಡಬೇಕೆಂಬ ಚೌಕಟ್ಟು ನಿರ್ಮಿಸಿಕೊಳ್ಳುತ್ತಿದ್ದಾರೆ. ಅಂಥಯುವಕರು ಸ್ವ-ಉದ್ಯೋಗದಲ್ಲಿರುವ ವಿಫುಲ ಅವಕಾಶಗಳನ್ನು ಮನಗಂಡು, ಅದರಲ್ಲಿ ತೊಡಗಿಕೊಳ್ಳಬೇಕು” ಎಂದು ತಿಳಿಸಿದರು.

ತರಬೇತಿಕಾರ್ಯಕ್ರಮದ ಅಂಗವಾಗಿ ಸಂಪನ್ಮೂಲ ವ್ಯಕ್ತಿ ಶರಾವತಿ ರವಿರಾಜ್ ವಿದ್ಯಾರ್ಥಿಗಳಿಗೆ ಮನೆಯಲ್ಲಿಕಡಿಮೆ ವೆಚ್ಚದಲ್ಲಿತಯಾರಿಸಬಹುದಾದ ಸರಕುಗಳು ಬಗೆಗೆ ತಿಳಿಸಿ, ಅದನ್ನು ಮಾಡುವ ವಿಧಾನವನ್ನು ತಿಳಿಸಿದರು. ಸಂಯೋಜಕರಾದ ಪೂರ್ಣಿಮಾ, ಮೆಲೇಖ್ ಅಭಿಮನ್ಯು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


Spread the love