ಬೆಳ್ತಂಗಡಿ: ಶಾಲೆ ಬಾವಿ ನೀರು ಕುಡಿದ 8 ಮಕ್ಕಳು ಅಸ್ವಸ್ಥ

Spread the love

ಬೆಳ್ತಂಗಡಿ: ಶಾಲೆ ಬಾವಿ ನೀರು ಕುಡಿದ 8 ಮಕ್ಕಳು ಅಸ್ವಸ್ಥ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಪೆರ್ಲ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ 8 ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಇಬ್ಬರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ವಿಷ ಸೇರ್ಪಡೆಗೊಂಡ ಬಾವಿಯ ನೀರನ್ನು ಮಕ್ಕಳು ಸೇವಿಸಿರುವುದೇ ಘಟನೆಗೆ ಕಾರಣ ಎನ್ನಲಾಗಿದೆ.

ಸೋಮವಾರ ಬೆಳಗ್ಗೆ ಶಾಲೆಯ ಮಕ್ಕಳು ಶಾಲೆಯ ಆವರಣದಲ್ಲಿರುವ ತರಕಾರಿ ತೋಟಕ್ಕೆ ಬಾವಿಯಿಂದ ಪಂಪ್‌ನಲ್ಲಿ ಗಿಡಗಳಿಗೆ ನೀರು ಹಾಕುತ್ತಿದ್ದು, ಈ ಸಂದರ್ಭ ನೀರು ಕುಡಿದಿದ್ದರು. ಕೆಲವೇ ಹೊತ್ತಲ್ಲಿ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಮುಖ್ಯಶಿಕ್ಷಕಿ ಶಾರದಾ ಪರಿಶೀಲಿಸಿದಾಗ ಬಾವಿ ಸಮೀಪ ರಬ್ಬರ್‌ಗೆ ಮಿಶ್ರಣ ಮಾಡುವ ಆಸಿಡ್ ಕ್ಯಾನ್ ಕಂಡುಬಂದಿದೆ.

ತಕ್ಷಣ ಅಸ್ವಸ್ಥಗೊಂಡ ಎಂಟು ವಿದ್ಯಾರ್ಥಿಗಳನ್ನು ಕೊಕ್ಕಡ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ನಾಲ್ವರನ್ನು ಮಂಗಳೂರು ಜಿಲ್ಲಾಸ್ಪತ್ರೆ ವೆನ್ಲಾಕ್‌ಗೆ ಹಾಗೂ ನಾಲ್ವರನ್ನು ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.


Spread the love