ಬೆಳ್ಳಿಹಬ್ಬದಂದೇ ರಾಜ್ಯೋತ್ಸವ ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿದ ಸೌಡದ ಮಧುರ ಯುವಕ ಮಂಡಲ

Spread the love

ಬೆಳ್ಳಿಹಬ್ಬದಂದೇ ರಾಜ್ಯೋತ್ಸವ ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿದ ಸೌಡದ ಮಧುರ ಯುವಕ ಮಂಡಲ  

ಕುಂದಾಪುರ: ಸರಿಯಾಗಿ 25 ವರ್ಷಗಳ ಹಿಂದೆ 1992 ನವೆಂಬರ್ 1ರಂದು ಕೆಲವೇ ಕೆಲವು ಯುವ ಮನಸ್ಸುಗಳ ಯುವ ಚಿಂತನೆಗಳೊಂದಿಗೆ ಅನೇಕ ಸಾಮಾಜಿಕ ಚಿಂತನೆಗಳ ಕನಸನ್ನು ಹೊತ್ತು ರೂಪುಗೊಂಡು ಇಂದು ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಮಧುರ ಯುವಕ ಮಂಡಲ ಸೌಡ(ರಿ) ಗೆ ಪ್ರತಿಷ್ಠಿತ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಯುವ ಸಂಘಟನೆಯೊಂದು ತನ್ನ ಗ್ರಾಮದಲ್ಲಿ ಅತ್ಯಂತ ಕ್ರಿಯಾಶೀಲವಾಗಿದ್ದರೆ ಆ ಪರಿಸರದಲ್ಲಿ ಆರೋಗ್ಯಕರ ಹಾಗೂ ಅಭಿವೃದ್ಧಿಪರ ಕಾರ್ಯಕ್ರಮಗಳಿಗೆ ಏನೂ ಕೊರತೆಯಿರಲಾರದು ಎಂಬುದನ್ನು ಎಲ್ಲರೂ ಒಪ್ಪಬೇಕಾದದ್ದೇ. ಇಂತಹ ಸಾಮಾಜಿಕ ಕೈಂಕರ್ಯದ ಭದ್ರ ತಳಹದಿಯ ಮೇಲೆ ರೂಪಿತಗೊಂಡ ಮಧುರ ಯುವಕ ಮಂಡಲ ಅನೇಕ ಸಾಮಾಜಿಕ ಜವಾಬ್ಧಾರಿಗಳನ್ನು ನಿರ್ವಹಿಸಿ ಪರಿಸರದ, ತಾಲೂಕಿನ ಹಾಗೂ ಜಿಲ್ಲೆಯ ಗಮನ ಸೆಳೆದಿರುವುದೂ ನಿಜ.

ಒಳ್ಳೆಯ ಚಿಂತನೆಗಳೊಂದಿಗೆ ಇಷ್ಟೊಂದು ವರ್ಷಗಳ ಕಾಲ ಹಮ್ಮಿಕೊಂಡ ಅನೇಕಕಾರ್ಯಕ್ರಮಗಳನ್ನು ಗುರುತಿಸಿ ಗೌರವಿಸಿ ಯುವ ಮನಸ್ಸುಗಳಿಗೆ ಹುರುಪನ್ನು ತುಂಬುವ ಬಹು ದೊಡ್ಡ ಕಾರ್ಯವನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡುವ ಮೂಲಕ ಉಡುಪಿ ಜಿಲ್ಲಾಡಳಿತ ಯುವಕ ಮಂಡಲದ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ.

ಮಧುರ ಯುವಕ ಮಂಡಲ ತನ್ನ ಪರಿಸರದ ಯಾವುದೇ ಕಾರ್ಯಕ್ರಮವಿರಲಿ ಅಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸೇವಾ ಕಾರ್ಯಗಳಲ್ಲಿ ಭಾಗಿಯಾಗಿ ಜನಮೆಚ್ಚುಗೆಗೆ ಪಾತ್ರರಾಗುತ್ತಿರುವುದು ನಿರಂತರವಾಗಿದೆ. ಧಾರ್ಮಿಕ ಕಾರ್ಯಕ್ರಮಗಳು, ಪರಿಸರ ಕಾಳಜಿಯ ಕಾರ್ಯಕ್ರಮಗಳು, ಸಾಮಾಜಿಕ ಹೊಣೆಗಾರಿಕೆ, ಮುಂತಾದ ಕ್ಷೇತ್ರಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ. ಸಮಾಜದ ಸರ್ವರನ್ನೂ ಒಗ್ಗೂಡಿಸಿಕೊಂಡು ಪರಿಸರದ ಅನೇಕ ಸಂಘ ಸಂಸ್ಥೆಗಳೊಂದಿಗೆ, ಶಿಕ್ಷಣ ಸಂಸ್ಥೆಗಳೊಂದಿಗೆ  ಅನೇಕ ರೀತಿಯ ಕಾರ್ಯಕ್ರಮಗಳಲ್ಲಿ ಸಹಭಾಗಿತ್ವವನ್ನು ಹೊಂದಿ ಚಟುವಟಿಕೆಗಳನ್ನು ಹಮ್ಮಿಕೊಂಡು ಮುನ್ನಡೆಯುತ್ತಿದೆ.


Spread the love