ಬೋಳಾರದಲ್ಲಿ ತುಳುನಾಡ ರಕ್ಷಣಾ ವೇದಿಕೆಯಿಂದ ರಸ್ತೆ ತಡೆ ಮತ್ತು ಪ್ರತಿಭಟನಾ ಸಭೆ

Spread the love

ಬೋಳಾರದಲ್ಲಿ ತುಳುನಾಡ ರಕ್ಷಣಾ ವೇದಿಕೆಯಿಂದ ರಸ್ತೆ ತಡೆ ಮತ್ತು ಪ್ರತಿಭಟನಾ ಸಭೆ

ಮಂಗಳೂರು: ಬೋಳಾರ ಮುಖ್ಯ ರಸ್ತೆಯಲ್ಲಿ ದಿನಾಂಕ 23.08.2016 ರಂದು ಬೆಳಿಗ್ಗೆ 11.00 ಗಂಟೆಗೆ ಪ್ರತಿಭಟನಾ ಸಭೆ ಮತ್ತು ರಸ್ತೆ ತಡೆ ಕಾರ್ಯಕ್ರಮದಲ್ಲಿ ತುಳುನಾಡ ರಕ್ಷಣಾವೇದಿಕೆ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ, ಜಪ್ಪುರವರು ಮಂಗಳೂರು ನಗರವೂ ಸೇರಿದಂತೆ ಹೊರವಲಯದಲ್ಲೂ ರಸ್ತೆಯನ್ನೊಳಗೊಂಡಂತೆ ನಾಗರಿಕರಿಗೆ ಮೂಲಭೂತ ಸೌಕರ್ಯಗಳು ಮರೀಚಿಕೆಯಾಗಿವೆ. ಅದರಲ್ಲೂ ರಸ್ತೆಗಳ ಅವ್ಯವಸ್ಥೆಯಂತೂ ತಾರಕಕ್ಕೇರಿದೆ. ನಗರದಲ್ಲಿ ಪಾದಜಾರಿಗಳಿಗೆ ಸಂಚರಿಸಲು ದುಸ್ಸಾಧ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ. ನಗರದಲ್ಲಿ ಹೊಸ ಕಟ್ಟಡಗಳ ನಿರ್ಮಾಣ, ಹಳೆಯ ಕಟ್ಟಡ, ಮನೆ, ಕಚೇರಿಗಳ ನವೀಕರಣ ಸೇರಿದಂತೆ ವರ್ಷವಿಡೀ ನಿರ್ಮಾಣ ಕಾಮಗಾರಿಗಳು ನಡೆಯುತ್ತಲೇ ಇವೆ. ಆದರೆ ಯಾವುದೇ ಕಾಮಗಾರಿ ಪರಿಪೂರ್ಣವಾಗದ ಹಿನ್ನಲೆಯಲ್ಲಿ ಜನಸಾಮಾನ್ಯರು ಬವಣೆ ಪಡುತ್ತಿರುವುದು ಇನ್ನೂ ತಪ್ಪಿಲ್ಲ.

ನಗರದಲ್ಲಿ ರಸ್ತೆ ಅವ್ಯವಸ್ಥೆಯಿಂದಾಗಿ ಪದೇ ಪದೇ ಅಪಘಾತಗಳು ನಡೆದು ಪ್ರಾಣಹಾನಿಯೂ ಆಗುತ್ತಿರುವುದು ಸರ್ವೇ ಸಾಮಾನ್ಯ ಎಂಬಂತಾಗಿದೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಟ್ಟ ಪ್ರಮುಖ ಸ್ಥಳಗಳಾದ ಜಪ್ಪು ಮಹಾಕಾಳಿಪಡ್ಪುವಿನಿಂದ ಬೋಳಾರದವರೆಗಿನ ಮುಖ್ಯ ರಸ್ತೆ, ಕಂಕನಾಡಿ ಯಿಂದ ಪಂಪ್‍ವೆಲ್ ವರೆಗೆ ಹೋಗುವ ಬೈಪಾಸ್ ರಸ್ತೆ, ಬಿಕರ್ನಕಟ್ಟೆ ಯಿಂದ ಕುಲಶೇಖರ ಹೋಗುವ ಮುಖ್ಯ ರಸ್ತೆ ಸೇರಿದಂತೆ ಮಂಗಳೂರಿನ ಪ್ರಮುಖ ರಸ್ತೆಗಳಲ್ಲಿ ದೊಡ್ಡ ದೊಡ್ಡ ಮರಣ ಗುಂಡಿಗಳು ಬಾಯಿ ತೆರೆದಿದ್ದು ರಸ್ತೆಗಳ ನಾದುರಸ್ತಿ ಸ್ಥಿತಿಯಿಂದಾಗಿ ರಿಕ್ಷಾ, ದ್ವಿಚಕ್ರ ವಾಹನ, ಘನವಾಹನಗಳಲ್ಲದೆ, ಪಾದಚಾರಿಗಳಿಗೂ ನಡೆದಾಡುವುದು ಕಷ್ಟಸಾಧ್ಯವಾಗಿದೆ. ಅಧಿಕಾರಿ ವರ್ಗದ ನಿರ್ಲಕ್ಷ್ಯ ಕರ್ತವ್ಯ ಲೋಪ ಇತ್ಯಾದಿಗಳಿಂದಾಗಿ ಜನತೆಯ ಸಂಕಷ್ಟ ದಿನೇ ದಿನೇ ಹೆಚ್ಚುತ್ತಿದೆ.

trv-road-protest-20160823

ಜಿಲ್ಲಾಡಳಿತ, ಮಹಾನಗರ ಪಾಲಿಕೆಯ ಅಸಮರ್ಪಕ ಹಾಗು ಅಸಡ್ಡೆಯ ಕ್ರಿಯಾ ಯೋಜನೆಯಿಂದಾಗಿ ರಸ್ತೆ ವ್ಯವಸ್ಥೆ, ಒಳಚರಂಡಿ ನಿರ್ಮಾಣ ಯೋಜನೆಗಳೂ ನೆನೆಗುದಿಗೆ ಬಿದ್ದಿವೆ. ನಗರದ ಹೆಚ್ಚಿನೆಡೆ ಫುಟ್‍ಪಾತ್‍ಗಳೇ ಮಾಯವಾಗಿವೆ. ಮಳೆಗಾಲದ ಸಂದರ್ಭದಲ್ಲಿ ಕಾಡುತ್ತಿರುವ ದೊಡ್ಡ ಸಮಸ್ಯೆ ಎಂದರೆ ತಗ್ಗು ರಸ್ತೆಯ ಇಕ್ಕೆಲಗಳ ತಗ್ಗು ಪ್ರದೇಶಗಳಲ್ಲಿ ನಿಲ್ಲುತ್ತಿರುವ ನೀರು. ಇಕ್ಕೆಲಗಳಲ್ಲಿ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ, ರಸ್ತೆಯಲ್ಲೇ ಶೇಖರಣೆಯಾಗುತ್ತಿದ್ದು ವಾಹನ ಸವಾರರಿಗೆ ಪಾದಚಾರಿಗಳಿಗೆ ಕಂಟಕವಾಗಿ ಪರಿಣಮಿಸುತ್ತಿದೆ.

ಮಂಗಳೂರಿನಲ್ಲಿ ನಡೆಯುತ್ತಿರುವ ಸಚಿವರ ಪ್ರಗತಿ ಪರಿಶೀಲನಾ ಸಭೆ, ಜಿಲ್ಲಾಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ, ಜಿಲ್ಲಾ ಪಂಚಾಯತ್ ಸಭೆ, ನಗರಪಾಲಿಕೆ ಸಭೆ, ಸಂಸದರ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಗಳಲ್ಲಿ ಕೆಲವು ವರ್ಷಗಳಿಂದ ಈ ಸಮಸ್ಯೆಗಳ ಬಗ್ಗೆ ಚರ್ಚೇ ನಡೆಯುತ್ತಲೇ ಇರುತ್ತದೆ. ಅಧಿಕಾರಿಗಳು ಸರಿಪಡಿಸುವ ಭರವಸೆ ನೀಡುತ್ತಲೇ ಇದ್ದಾರೆ. ಅಲ್ಲದೆ ಜಾಣ ಕುರುಡು, ಕಿವುಡುತನ ಪ್ರದರ್ಶಿಸುತ್ತಿದ್ದಾರೆ.  ಸಭೆಯಲ್ಲಿ  ಅಧಿಕಾರಿಗಳನ್ನು  ತರಾಟೆಗೆ  ತೆಗೆದುಕೊಳ್ಳುವ  ಸಚಿವರು,  ಸಂಸದರು ಜನಪ್ರತಿನಿಧಿಗಳು ಕೂಡಾ ಯಾವುದೇ ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ಗಂಭೀರ ಪ್ರಯತ್ನ ಮಾಡುವುದೇ ಇಲ್ಲ. ಏಲ್ಲ ಜನಪ್ರತಿನಿಧಿಗಳು ಕೂಡ ಇದೇ ರಸ್ತೆಗಳಲ್ಲಿ ಸಂಚರಿಸುತ್ತಿದ್ದರೂ ಸಮಸ್ಯೆ ಪರಿಹಾರದ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ. ಇನ್ನೊಂದು ಸಭೆ ಬಂದಾಗ ಮತ್ತೆ ಅದೇ ವಿಷಯ ಪ್ರಸ್ತಾಪಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ.

trv-road-protest2-20160823

ಅಂತೂ ಬಡಜನತೆಯ ಬವಣೆಗೆ ಮಾತ್ರ ಕೊನೆಯಿಲ್ಲ ಎಂಬಂತಾಗಿದೆ. ಈ ಎಲ್ಲಾ ಮೇಲ್ಕಾಣಿಸಿದ ಸಮಸ್ಯೆಗಳನ್ನು ಕೂಡಲೇ ತ್ವರಿತವಾಗಿ ಸಂಬಂಧಪಟ್ಟವರು ಗಮನಹರಿಸುವಂತೆ ತುಳುನಾಡ ರಕ್ಷಣಾವೇದಿಕೆ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ, ಜಪ್ಪು ರವರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ತಡೆ ನಡೆಯುತ್ತಿರುವ ಸ್ಥಳಕ್ಕೆ ಆಗಮಿಸಿದ ಕೋರ್ಪರೇಟರ್‍ಗಳಾದ ಪ್ರೇಮಾನಂದ ಶೆಟ್ಟಿ, ರತಿಕಲಾ ಈ ಸಮಸ್ಯೆ ಬಗ್ಗೆ ಮ.ನಾ.ಪ ಸಭೆಯಲ್ಲಿ ಪ್ರಸ್ತಾಪಮಾಡುವುದಾಗಿ ತಿಳಿಸಿದರು. ಮತ್ತು ಎಕ್ಸಿಕ್ಯೂಟಿವ್ ಇಂಜಿನಿಯರ್ ಗುರುರಾಜ್ ಮರಳಹಳ್ಳಿ, ಸಹಾಯಕ ಎಕ್ಸಿಕ್ಯೂಟಿವ್ ಇಂಜಿನಿಯರ್ ಕೃಷ್ಣಾನಂದ, ಜ್ಯೂನಿಯರ್ ಇಂಜಿನಿಯರ್ ಪ್ರತಿಮಾ   ಕೂಡಲೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ಮುಖಂಡರುಗಳಾದ ಪ್ರಶಾಂತ್ ಭಟ್ ಕಡಬ, ಹಮೀದ್ ಹಸನ್ ಮಾಡೂರು,  ಆನಂದ ಅಮೀನ್ ಅಡ್ಯಾರ್, ಸಿರಾಜ್ ಅಡ್ಕರೆ, ನೇಮು ಕೊಟ್ಟಾರಿ ಗುಜ್ಜಾರಕೆರೆ, ಜರಾಲ್ಡ್ ಟವರ್ಸ್, ಜ್ಯೋತಿಕ ಜೈನ್, ಹರೀಶ್ ಶೆಟ್ಟಿ, ರಕ್ಷಿತ್ ಕೆ. ಬಂಗೇರ, ರಾಜೇಶ್ ಕುತ್ತಾರ್, ನವಾಜ್ ಬಜಾಲ್, ತಾರನಾಥ ಜತ್ತನ್ನ, ರಿಯಾಜ್ ಬೆಂಗರೆ, ರವಿ ಶೆಟ್ಟಿ ಮಾಡೂರು, ಅಶೋಕ್ ಜೆಪ್ಪು, ಶರತ್, ಪ್ರಾಣೇಶ್, ಚಂದ್ರಶೇಖರ್, ಚರಣ್ ಮತ್ತಿತರ ಪ್ರಮುಖರು ಮತ್ತು ಸ್ಥಳೀಯರು ಪ್ರತಿಭಟನೆಗೆ ಬೆಂಬಲ ನೀಡಿದರು.


Spread the love