ಬ್ರಹ್ಮಾವರದಲ್ಲಿ ಸಂಘರ್ಷವೇ ಇಲ್ಲದಿರುವಾಗ ಕಾಂಗ್ರೆಸ್ ವತಿಯಿಂದ ಸೌಹಾರ್ದ ನಾಟಕ ಸಭೆ ಯಾವ ಪುರುಷಾರ್ಥಕ್ಕೆ: ರಾಜೀವ್ ಕುಲಾಲ್
ಕುಂಜಾಲುವಿನಲ್ಲಿ ಜೂನ್ 28 ರಂದು ನೆಡೆದ ಗೋಹತ್ಯೆ ಪ್ರಕರಣ ಸಂಬಂಧ ಶಾಸಕರ ಮತ್ತು ಹಿಂದೂ ಸಂಘಟನೆಗಳ ಆಗ್ರಹದ ಪರಿಣಾಮ ಜಿಲ್ಲಾ ಪೊಲೀಸರು 6 ಮಂದಿ ಆರೋಪಿಗಳನ್ನು ಬಂಧಿಸಿದ ಬಳಿಕ ಯಾವುದೇ ಸಂಘರ್ಷವಿಲ್ಲದೆ ಜನಸಾಮಾನ್ಯರು ಸಾಮರಸ್ಯ ಜೀವನ ನಡೆಸುತ್ತಿರುವಾಗಕಾಂಗ್ರೆಸ್ ವತಿಯಿಂದ ಸೌಹಾರ್ದ ಸಭೆ ನಾಟಕ ಯಾವ ಪುರುಷಾರ್ಥಕ್ಕೆ ಎಂದು ಉಡುಪಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷರಾದ ರಾಜೀವ್ ಕುಲಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಂತಿ ಸುವ್ಯವಸ್ಥೆಗೆ ಭಂಗ ತರುವ ಘಟನೆ ನಡೆದ ಕೂಡಲೇ ಓರ್ವ ಜವಾಬ್ದಾರಿಯುತ ಶಾಸಕರಾಗಿ ಯಶ್ ಪಾಲ್ ಸುವರ್ಣ ರವರು ದುಷ್ಕರ್ಮಿಗಳು ಯಾವ ಪಕ್ಷ, ಯಾವ ಧರ್ಮ, ಯಾವ ಜಾತಿ, ಯಾರೇ ಆಗಿರಲಿ 24 ಗಂಟೆಯೊಳಗೆ ಎಲ್ಲಾ ಆರೋಪಿಗಳನ್ನು ಬಂಧಿಸಬೇಕೆಂಬ ಆಗ್ರಹ ಮಾಡಿದ ನಂತರ ಪೋಲಿಸ್ ಇಲಾಖೆ ತಕ್ಷಣ ತನಿಖೆ ನಡೆಸಿ ಪ್ರಕರಣದ ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸಿದ್ದು ಶ್ಲಾಘನೀಯ.
ಶಾಸಕರ ಮುತುವರ್ಜಿಯಲ್ಲಿ ನಡೆದ ಹೋರಾಟದ ಫಲ ಕುಂಜಾಲು ಪರಿಸರದಲ್ಲಿ ಈ ಪ್ರಕರಣದ ಸಲುವಾಗಿ ಯಾವುದೇ ರೀತಿಯ ಅಹಿತಕರ ಘಟನೆಯಾಗಲಿ, ಕೋಮು ಸಂಘರ್ಷ ಘಟನೆಗಳು ನಡೆಯಲು ಅವಕಾಶ ನೀಡಿಲ್ಲ. ಬ್ರಹ್ಮಾವರ ಕುಂಜಾಲು ಪರಿಸರದಲ್ಲಿ ಯಾವುದೇ ಸಂಘರ್ಷ ಇಲ್ಲದಿದ್ದರೂ ಕೂಡ ಕಾಂಗ್ರೆಸ್ ಸಮಾಜದಲ್ಲಿ ಒಡಕು ಮೂಡಿಸಲು ಸೌಹಾರ್ದ ಸಭೆ ಎಂಬ ರಾಜಕೀಯ ದುರುದ್ದೇಶದಿಂದ ದೊಂಬರಾಟ ನಡೆಸಲು ಮುಂದಾಗಿದೆ.
ಕಾಂಗ್ರೆಸ್ ನಾಯಕರಿಗೆ ನಿಜವಾಗಿ ಸೌಹಾರ್ದತೆ ಉದ್ದೇಶವಿದ್ದರೆ ಈ ಅಮಾನುಷ ಘಟನೆಯ ಪ್ರಕರಣದ 7ನೇ ಆರೋಪಿ ಶೀಘ್ರ ಬಂಧನಕ್ಕೆ ಒತ್ತಡ ಮಾಡಿ, ಗೋಮಾಂಸ ಯಾರಿಗೆ ರವಾನೆಯಾಗುತ್ತಿದೆಯೆಂಬ ಸತ್ಯಾಸತ್ಯತೆ ಜನರ ಮುಂದಿಡಲಿ. ಅದು ಬಿಟ್ಟು ಶಾಂತಿಯುತವಾಗಿರುವ ಸಮಾಜದಲ್ಲಿ ಒಡಕು ಮೂಡಿಸುವ ಕೆಲಸಕ್ಕೆ ಪ್ರಯತ್ನ ಮಾಡಬೇಡಿ ಅನ್ನೋದು ನಮ್ಮ ಬಯಕೆ.
ಹಿಂದೂ ಸಮಾಜದ ಧಾರ್ಮಿಕ ಭಾವನೆಗೆ ಧಕ್ಕೆ ತರುವ, ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಸುವ ಗೋಹತ್ಯೆ ಮತ್ತು ಗೋ ಕಳ್ಳಸಾಗಾಣಿಕೆಯ ಕುರಿತು ಕಾಂಗ್ರೆಸ್ ನ ನಿಲುವು ಏನೆಂಬುದು ಇದೇ ಸಭೆಯಲ್ಲಿ ಕಾಂಗ್ರೆಸ್ ಮುಖಂಡರು ಸ್ಪಷ್ಟಪಡಿಸಲಿ ಎಂದು ರಾಜೀವ್ ಕುಲಾಲ್ ಪ್ರಕಟಣೆಯಲ್ಲಿ ಹೇಳಿದ್ದಾರೆ.