ಭಟ್ಕಳ: ಭಯೋತ್ಪಾದಕ ಕೃತ್ಯ ಆರೋಪದಡಿ ಬಂಧಿತ ಸದ್ದಾಮ್ ಹುಸೇನ್ ನ್ಯಾಯಾಲಯಕ್ಕೆ ಹಾಜರು

Spread the love

ಭಟ್ಕಳ: ಬೆಂಗಳೂರು ಚರ್ಚ್ ಸ್ಟ್ರೀಟ್ ಬಾಂಬ್ ಬ್ಲಾಸ್ಟ್ ಆರೋಪದಡಿ ಬಂಧಿಸಲ್ಪಟ್ಟ ಭಟ್ಕಳ ಮೂಲದ ಸದ್ದಾಮ್ ಹುಸೇನ್ ಎಂಬಾತನನ್ನು ಭಟ್ಕಳದಲ್ಲಿ ಹೊಡೆದಾಟ, ದೊಂಬಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಇಲ್ಲಿನ ಜೆ.ಎಂ.ಎಫ್.ಸಿ ನ್ಯಾಯಾಧೀಶರ ಎದುರು ಬಿಗು ಪೊಲೀಸ್ ಬಂದೋಬಸ್ತಿನಲ್ಲಿ ಹಾಜರು ಪಡಿಸಲಾಯಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ದಾಮ್ ನೊಂದಿಗೆ ಇತರ ೮ ಮಂದಿಯನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿದೆ.
2014 ಫೆ.24 ರಂದು ಭಟ್ಕಳದ ಮದೀನಾ ಕಾಲೋನಿಯಲ್ಲಿನ ಮನೆಯೊಂದಕ್ಕೆ ಕಲ್ಲು ಹೊಡೆದ ಹಾಗೂ ಬೈಕ್ ಸುಟ್ಟ ಪ್ರಕರಣದಲ್ಲಿ ಸದ್ದಾಮ್ ಸೇರಿದಂತೆ ಇತರ ೮ ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಅವರನ್ನು ಬಂಧಿಸಿದ ಪೊಲೀಸರು ನಂತರ ಅವರನ್ನು ಜಾಮಿನಿನ ಮೇಲೆ ನ್ಯಾಯಾಲಯವು ಬಿಡುಗಡೆಗೊಳಿಸಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರದಂದು ಬೆಂಗಳೂರು ಜೈಲಿನಿಂದ ಸದ್ದಾಮ್ ನನ್ನು ಭಟ್ಕಳಕ್ಕೆ ಕರೆ ತಂದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
2015 ರ ಮಾರ್ಚ 5 ರಂದು ಬೆಂಗಳೂರಿನ ಚರ್ಚ್ ಸ್ಟ್ರೀಟ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳದ ಡಾ. ಸೈಯ್ಯದ್ ಆಫಾಖ್ ಲಂಕಾ, ಅಬ್ದುಸ್ಸುಬೂರ್ ನೊಂದಿಗೆ ಸದ್ದಾಮ್ ಹುಸೇನ್ ನನ್ನು ಬಂಧಿಸಿ ಬೆಂಗಳೂರು ಜೈಲಿನಲ್ಲಿಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಭಾರಿ ಪೊಲೀಸ್ ಬಂದೋಬಸ್ತ್: ಗುರುವಾರ ಮುಂಜಾನೆಯಿಂದ ಭಟ್ಕಳದ ಜೆ.ಎಂ.ಎಫ್.ಸಿ ನ್ಯಾಯಾಲದ ಆವರಣದಲ್ಲಿ ಭಾರಿ ಪೊಲೀಸ್ ಬಂದೋಬಸ್ ಮಾಡಲಾಗಿತ್ತು. ನ್ಯಾಯಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಸೇರಿದ್ದು ಕಂಡ ಜನತೆ ಇಂದು ಯಾವುದೋ ದೊಡ್ಡ ಅಪರಾಧಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುತ್ತಿರಬಹುದೆಂದು ಭಾವಿಸಿ ಸಾರ್ವಜನಿಕರೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು ಸುದ್ದಿಯ ವಾಸನೆ ಹಿಡಿದು ಜಿಲ್ಲಾ ಕೇಂದ್ರದಿಂದ ಭಟ್ಕಳಕ್ಕೆ ಬಂದ ಎಲೆಕ್ಟ್ರಾನಿಕ್ ಮಾಧ್ಯಮ ಪ್ರತಿನಿಧಿಗಳು ಬೆಳಿಗ್ಗೆಯಿಂದಲೇ ನ್ಯಾಯಾಲದ ಎದುರು ಕಾದು ಕುಳಿತಿದ್ದರು.
ನಮ್ಮ ದುಃಖ ಕೇಳುವವರಾರು? ಸದ್ದಾಮ್ ಪತ್ನಿ ಸಾಯಿರಾಳ ಅಳುವು: ಸದ್ದಾಮ್ ನನ್ನು ಭಟ್ಕಳದ ನ್ಯಾಯಾಲಯಕ್ಕೆ ಹಾಜರು ಪಡಿಸಲು ಇಲ್ಲಿಗೆ ಕರೆದುಕೊಂಡು ಬರುತ್ತಾರೆ ಎಂದು ತಿಳಿದುಕೊಂಡಿದ್ದ ಸದ್ದಾಮ್ ನ ಪತ್ನಿ ಸಾಯಿರಾ ಹಾಗೂ ತಂದೆ ತಾಯಿ ತಮ್ಮ ಮಗನನ್ನು ಕಾಣಲು ಇನ್ನಿಲ್ಲದ ಕಷ್ಟ ಅನುಭವಿಸಬೇಕಾಗಿ ಬಂತು. ಬೆಳಿಗ್ಗೆಯಿಂದಲೇ ಅವರು ಕೋರ್ಟ್ ಆವರಣದಲ್ಲಿ ನಿಂತುಕೊಂಡಿದ್ದರು. ಆದರೆ ಅವರಿಗೆ ಅಲ್ಲಿ ಅವಕಾಶ ಸಿಗುವುದಿಲ್ಲ ಬೇರೆಗೆ ಬರುವಂತೆ ಯಾರೂ ಸೂಚಿಸಿದ್ದಾರೆ ಎಂಬ ಮಾಹಿತಿ ಪಡೆದು ಅಲ್ಲಿಗೂ ತೆರಳಿದ್ದು ಆ ಸ್ಥಳದಲ್ಲಿಯೂ ಕೂಡ ತಮ್ಮ ಮಗನನ್ನು ನೋಡಲು ಆಗಲಿಲ್ಲಿ, ಕೊನೆಗೆ ಬಹಳ ಕಷ್ಟಪಟ್ಟು ತಮ್ಮ ಮಗನ ಮುಖದರ್ಶನವಾಯಿತು ಎಂದು ಸದ್ದಾಮ್ ತಾಯಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ನಾವು ಬಹಳ ಬಡವರು ನಮ್ಮ ಕಷ್ಟು ದುಃಖವನ್ನು ಯಾರಿಗೆ ಹೇಳಬೇಕು ಎಂದು ಸದ್ದಾಮ್ ಪತ್ನಿ ಸಾಯಿರಾ ಮಾಧ್ಯಮಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು. ನಮಗೆ ಸಹಾಯ ಮಾಡುವವರು ಇಲ್ಲಿ ಯಾರೂ ಇಲ್ಲಿ ದುಡಿದು ಸಾಕುವ ಮಗನೆ ಕಳೆದ 10 ತಿಂಗಳಿಂದ ಜೈಲಿನಲ್ಲಿ ಕೊಳೆಯುತ್ತಿದ್ದಾನೆ ಎಂದು ತಂದೆ ತಮ್ಮ ದುಃಖವನ್ನು ತೋರ್ಪಡಿಸಿಕೊಂಡರು.


Spread the love