ಮಂಗಳೂರಿನ ಪಾದಚಾರಿಗಳ ಗೋಳನ್ನು ಕೇಳುವವರಿಲ್ಲ!

Spread the love

ಮಂಗಳೂರು: ಮಂಗಳೂರಿನ ಹಲವಾರು ಕೂಡು ರಸ್ತೆಗಳಿಗೆ ಕೊನೆಗೂ ಸಿಗ್ನಲ್ ದೀಪದ ಸೌಭಾಗ್ಯ ದೊರೆತಿರುವುದು ಸಂತೋಷದ ಸಂಗತಿ. ವಾಹನಗಳ ಸಂಖ್ಯೆ ವಿಪರೀತವಾಗಿ ಬೆಳೆದಿರುವಂಥಾ ಇಂದಿನ ಪರಿಸ್ಥಿತಿಯಲ್ಲಿ ಇಂತಹ ಟ್ರಾಫಿಕ್ ಸಿಗ್ನಲ್‍ಗಳ ಅವಶ್ಯಕತೆ ಹಾಗೂ ಉಪಯುಕ್ತತೆ ಬಗ್ಗೆ ಎರಡು ಮಾತಿಲ್ಲ. ಇದರ ಜೊತೆಗೆ ವಾಹನಗಳಿಗೋಸ್ಕರ ಅಲ್ಲಲ್ಲಿ ರಸ್ತೆ ಅಗಲೀಕರಣ, ಕಾಂಕ್ರೀಟೀಕರಣದ ಕೆಲಸವೂ ನಡೆಯುತ್ತಿದೆ. ಆದರೆ ಕೆಲವೆಡೆಗಳಲ್ಲಿ ಹಿಂದಿನ ತೋಡುಗಳನ್ನು ಅತಿಕ್ರಮಿಸಿ ಅಗಲಕಿರಿದಾದ ತೋಡುಗಳನ್ನು ನಿರ್ಮಿಸಿರುವುದರಿಂದಾಗಿ ಮಳೆಗಾಲದಲ್ಲಿ ಕೃತಕ ನೆರೆಗಳು ಸೃಷ್ಟಿಯಾಗುತ್ತಿವೆ. ಎರಡನೆಯದಾಗಿ, ಕಾಂಕ್ರೀಟು ರಸ್ತೆ ರಿಪೇರಿಗೆ ದಾಮರು ರಸ್ತೆಗಿಂತಲೂ ಹೆಚ್ಚು ದಿನಗಳು ತಗಲುತ್ತಿರುವುದು ಟ್ರಾಫಿಕ್ ಜಾಮ್‍ಗಳ ಹೆಚ್ಚಳಕ್ಕೆ ಒಂದು ಕಾರಣವಾಗಿದೆ.

padachari padachari1

ದುರಂತ ಏನೆÉಂದರೆ ಈ ವಾಹನಕೇಂದ್ರಿತ ‘ಅಭಿವೃದ್ಧಿ’ಯ ಭರಾಟೆಯಲ್ಲಿ ಮಗ್ನರಾಗಿರುವ ಸಂಬಂಧಪಟ್ಟವರೆಲ್ಲ ಪಾದಚಾರಿಗಳೆಂಬ ಜನವರ್ಗದ ಅಸ್ತಿತ್ವವನ್ನೇ ಮರೆತುಬಿಟ್ಟಿರುವಂತೆ ತೋರುತ್ತಿದೆ. ಯಾಕೆಂದರೆ ಅನೇಕ ಕಡೆಗಳಲ್ಲಿ ಕಾಲ್ದಾರಿಗಳೇ ಕಣ್ಮರೆಯಾಗಿಬಿಟ್ಟಿವೆ. ಇದರಿಂದಾಗಿ ಪಾದಚಾರಿಗಳಿಗೆ ಪ್ರಾಣಭೀತಿ ಮೊದಲಿಗಿಂತ ನೂರಾರು ಪಟ್ಟು ಹೆಚ್ಚಾಗಿದೆ. ರಸ್ತೆ ಅವಘÀಢಗಳಿಗೆ ಬಲಿಯಾಗುವ ಅಮಾಯಕ ದಾರಿಹೋಕರ ಸಂಖ್ಯೆ ದಿನೇದಿನೇ ಏರುತ್ತಿರುವ ವಾಸ್ತವ ನಮ್ಮ ಕಣ್ಣ ಮುಂದಿದೆ. ಇಂತಹ ಅಪಾಯಕಾರಿ ಸನ್ನಿವೇಶದ ನಿರ್ಮಾಣಕ್ಕೆ ಯಾರು ಹೊಣೆ? ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಅವರು ಕೇವಲ ವಾಹನಿಗರ ಸೌಕರ್ಯವನ್ನಷ್ಟೇ ಪರಿಗಣಿಸಿದರೆ ಸಾಕೇ? ತೆರಿಗೆ ಕಟ್ಟುವ ಪಾದಚಾರಿಗಳು ಏನು ಪಾಪ ಮಾಡಿದ್ದಾರೆಂದು ಅವರ ಬಗ್ಗೆ ಈ ಪರಿಯ ನಿರ್ಲಕ್ಷ್ಯ? ಈ ನಿರ್ಲಕ್ಷ್ಯದ ರೋಗ ಅನೇಕ ಟ್ರಾಫಿಕ್ ಪೊಲೀಸರಿಗೂ ತಟ್ಟಿರುವಂತಿದೆ. ಇವತ್ತು ರಸ್ತೆದಾಟು ಸಿಗ್ನಲ್‍ಗಳು ಇಲ್ಲದಲ್ಲಿ ಪಾದಚಾರಿಗಳನ್ನು ಕೇಳುವವರೇ ಇಲ್ಲವೆಂದಾಗಿದೆ. ಉದಾಹರಣೆಗೆ ಬಂಟ್ಸ್ ಹಾಸ್ಟೆಲ್ ಸಮೀಪ ರಸ್ತೆ ದಾಟುವುದೆಂದರೆ ಅದೊಂದು ದೊಡ್ಡ ಸಾಹಸವೇ ಆಗಿದೆ. ಸ್ವಾಭಾವಿಕವಾಗಿ ಇಂತಹ ಸಾಹಸಕೃತ್ಯದಲ್ಲಿ ಸೋಲುವವರೆಂದರೆ ಮಕ್ಕಳು, ಮಹಿಳೆಯರು ಮತ್ತು ವೃದ್ಧರು. ಇನ್ನು ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಸಮೀಪ ಇರುವ ಕೂಡು ರಸ್ತೆಯಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸಿದ ನಂತರ ಪಾದಚಾರಿಗಳು ಅನುಭವಿಸುತ್ತಿರುವ ಸಂಕಷ್ಟಗಳು, ಎದುರಿಸುತ್ತಿರುವ ಅಪಾಯಗಳು ಅಷ್ಟಿಷ್ಟಲ್ಲ. ಕೆಎಸ್ಸಾರ್ಟಿಸಿ ವೃತ್ತದಿಂದ ಸರ್ಕಿಟ್ ಹೌಸ್ ತನಕದ ರಸ್ತೆಯ ಇಕ್ಕೆಲಗಳಲ್ಲೂ ಕಾಲ್ದಾರಿಗಳೇ ಇಲ್ಲ. ಸಾಲದ್ದಕ್ಕೆ ರಸ್ತೆಯ ಇಕ್ಕೆಲಗಳಲ್ಲಿ ಅಡ್ಡಾದಿಡ್ಡಿ ಪಾರ್ಕ್ ಮಾಡುವ ವಾಹನಗಳು ಮತ್ತು ಅನಧಿಕೃತ ರಿಕ್ಷಾ ಪಾರ್ಕಿನಿಂದಾಗಿ ಪಾದಚಾರಿಗಳು ವಿಧಿಯಿಲ್ಲದೆ ಭರ್ರನೆ ರಭಸದಿಂದ ಸಾಗುವ ವಾಹನಗಳ ನಡುವೆ ರಸ್ತೆಯಲ್ಲಿಯೇ ನಡೆದಾಡಬೇಕಾದ ಪರಿಸ್ಥಿತಿ ಇದೆ. ಒಂದು ನಿರ್ದಿಷ್ಟ ಜಾಗದಲ್ಲಂತೂ ಒಂದು ಹೆಜ್ಜೆ ಎತ್ತಿದರೆ ರಸ್ತೆಯಿಂದ ನೇರವಾಗಿ ಬಾರ್ ಒಳÀಗೆ ಪ್ರವೇಶಿಸಬಹುದಾಗಿದೆ! ಇಲ್ಲಿ ಹೆಚ್ಚುಕಡಮೆ ಅರೆಪಾಲು ರಸ್ತೆಯನ್ನು ಆಕ್ರಮಿಸುವ ವಾಹನಗಳು, ಕುಡಿದು ತೂರಾಡುವ ಗಿರಾಕಿಗಳ ಮಧ್ಯೆ ದಾರಿಹೋಕರ ಗತಿ ನರಕಸದೃಶವೆಂದರೆ ಖಂಡಿತಾ ಅತಿಶಯೋಕ್ತಿ ಅಲ್ಲ.  ಕೆಎಸ್ಸಾರ್ಟಿಸಿ ವೃತ್ತದಿಂದ ಕಾಪಿಕಾಡ್ ಕಡೆ ಹೋಗುವ ರಸ್ತೆಯಲ್ಲಿಯೂ ದೊಡ್ಡ ಸಮಸ್ಯೆ ಉಂಟಾಗಿದೆ. ರಸ್ತೆಯ ಬಲಗಡೆ ಇರುವ ಅನಧಿಕೃತ ಆಟೊರಿಕ್ಷಾ ತಂಗುದಾಣದಿಂದಾಗಿ ಜನರು ರಸ್ತೆ ಮಧ್ಯದಲ್ಲಿ, ವಾಹನಗಳ ಎಡೆಯಲ್ಲಿ ದಾರಿ ಮಾಡಿಕೊಂಡು, ಜೀವ ಕೈಲಿ ಹಿಡಿದುಕೊಂಡು ಸಂಚರಿಸುವಂತಾಗಿದೆ. ಪ್ರಶ್ನೆ ಏನೆಂದರೆ ಪಾದಚಾರಿಗಳೂ ವಾಹನ ಮಾಲೀಕರಂತೆಯೇ ತೆರಿಗೆ ಪಾವತಿಸುವುದಿಲ್ಲವೆ? ಅವರಿಗೂ ಹಕ್ಕುಗಳಿಲ್ಲವೇ? ಅವರ ಬಗ್ಗೆ ಯಾಕಿಷ್ಟು ಉಪೇಕ್ಷೆ? ದಕ್ಷತೆಗೆ ಹೆಸರು ಮಾಡಿರುವ ಆಯುಕ್ತರಾದರೂ ಸ್ಥಳ ಪರಿಶೀಲನೆ ನಡೆಸಿ ಪಾದಚಾರಿಗಳ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗುವರೇ?

 


Spread the love