ಮಂಗಳೂರು: ಐವರು ಸಾಧಕರಿಗೆ 2025ನೇ ಸಾಲಿನ ರಚನಾ ಪ್ರಶಸ್ತಿ ಘೋಷಣೆ
ಮಂಗಳೂರು: ಕೆಥೊಲಿಕ್ ಉದ್ಯಮಿಗಳು, ವೃತ್ತಿಪರರು ಹಾಗೂ ಕೃಷಿಕರು ಒಟ್ಟಾಗಿ ಸೇರಿ ಆರಂಭಿಸಿರುವ ರಚನಾ ಸಂಸ್ಥೆ ಕೆಥೊಲಿಕ್ ಸಮಾಜದ ಯಶಸ್ವಿ ಉದ್ಯಮಿಗಳು, ವೃತ್ತಿಪರರು, ಕೃಷಿಕರು, ಅನಿವಾಸಿ ಭಾರತೀಯರು ಹಾಗೂ ಸಾಧಕ ಮಹಿಳೆಯರನ್ನು ಗುರುತಿಸಿ ನೀಡುವ 2025ನೇ ಸಾಲಿನ ಪ್ರಶಸ್ತಿಗೆ ಐವರನ್ನು ಆಯ್ಕೆ ಮಾಡಿದೆ.
ಮಂಗಳೂರು ಪ್ರೆಸ್ ಕ್ಲಬ್ ನಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ರಚನಾ ಅಧ್ಯಕ್ಷ ಜೊನ್ ಬಿ. ಮೊಂತೇರೊ, ಸುಮಾರು 25 ಜ್ಯೂರಿ ಸದಸ್ಯರನ್ನೊಳಗೊಂಡ ಸಮಿತಿಯು ಪರಿಶೀಲನೆ ನಡೆಸಿ 2025ನೇ ಸಾಲಿನ ಪ್ರಶಸ್ತಿಗ ಐವರನ್ನು ಆಯ್ಕೆ ಮಾಡಿದೆ.
ರಚನಾ ಉದ್ಯಮಿ ಪ್ರಶಸ್ತಿಗೆ ಆಸ್ಟಿನ್ ರೋಚ್, ಬೆಂಗಳೂರು, ರಚನಾ ವೃತ್ತಿಪರ ಪ್ರಶಸ್ತಿಗೆ ಜೆ.ಆರ್.ಲೋಬೊ ಮಂಗಳೂರು, ರಚನಾ ಕೃಷಿಕ ಪ್ರಶಸ್ತಿಗೆ ಡಾ.ಗಾಡ್ತಿನ್ ರೊಡ್ರಿಗಸ್, ಬೆಳುವಾಯಿ, ಮಂಗಳೂರು, ರಚನಾ ಅನಿವಾಸಿ ಉದ್ಯಮಿ ಪ್ರಶಸ್ತಿಗೆ ಪ್ರತಾಪ್ ಮೆಂಡೋನ್ಸಾ ದುಬೈ ಹಾಗೂ ರಚನಾ ಮಹಿಳಾ ಸಾಧಕಿ ಪ್ರಶಸ್ತಿಗೆ ಶೋಭಾ ಮೆಂಡೋನ್ಸಾ ದುಬೈ ಆಯ್ಕೆಯಾಗಿದ್ದಾರೆ ಎಂದು ಅವರು ತಿಳಿಸಿದರು.
ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಅಕ್ಟೋಬರ್ 5ರಂದು ರವಿವಾರ ಸಂಜೆ 6 ಗಂಟೆಗೆ ಮಂಗಳೂರಿನ ಮಿಲಾಗ್ರಿಸ್ ಸಭಾಭವನದಲ್ಲಿ ಜರುಗಲಿದೆ. ಮಂಗಳೂರು ಬಿಷಪ್ ರೆ.ಫಾ. ಡಾ.ಪೀಟರ್ ಪಾವ್ಕ್ ಸಲ್ದಾನ ಅಧ್ಯಕ್ಷತೆ ವಹಿಸುವರು. ರಾಜ್ಯ ಇಂಧನ ಸಚಿವ ಕೆ.ಜೆ.ಜಾರ್ಜ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಯುಎಇಯ ಬುರ್ಜೀಲ್ ಹೋಲ್ಡಿಂಗ್ಸ್ ಸಮೂಹ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಾನ್ ಸುನೀಲ್ ಹಾಗೂ ಬೆಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ ಹಾಗೂ ಡೀನ್ ಮತ್ತು ನಿರ್ದೇಶಕಿ ಡಾ.ಸಿಂಥಿಯಾ ಮಿನೇಜಸ್ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರಚನಾ ಸಂಸ್ಥೆಯ ಕಾರ್ಯದರ್ಶಿ ವಿಜಯ್ ವಿ. ಲೋಬೊ, ಖಜಾಂಚಿ ನೆಲ್ಸನ್ ಮೊಂತೇರೊ, ಉಪಾಧ್ಯಕ್ಷ ನವೀನ್ ಲೋಬೊ, ಸಂಘಟಕಿ ಯುಲಾಲಿಯಾ ಡಿಸೋಜ ಉಪಸ್ಥಿತರಿದ್ದರು.