ಮಂಗಳೂರು : ಪಾವೂರು ಉಳಿಯ ಕುದ್ರುವಿನಲ್ಲಿ ನಡೆಯುತ್ತಿರುವ ಮರಳುಗಾರಿಕೆಯನ್ನು ನಿಯಂತ್ರಿಸಲು ಒತ್ತಾಯಿಸಿ ಪ್ರತಿಭಟನಾ ಧರಣಿ

Spread the love

ಮಂಗಳೂರು: ಪಾವೂರು ಗ್ರಾಮದ ಉಳಿಯ ದ್ವೀಪ (ಕುದ್ರು)ವಿನಲ್ಲಿ ವ್ಯಾಪಕ ಮರಳುಗಾರಿಕೆಯಿಂದ ಕುುದ್ರುವಿನಲ್ಲಿರುವ ಮನೆಗಳು ನದಿ ಪಾಲಾಗುವ ಸಾಧ್ಯತೆಯಿದ್ದು ಈ ಮರಳುಗಾರಿಕೆಯನ್ನು ನಿಯಂತ್ರಿಸಲು ಆಗ್ರಹಿಸಿ ಡಿವೈಎಫ್‍ಐ ದ.ಕ. ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯೆದುರು ಪ್ರತಿಭಟನಾ ಧರಣಿ ನಡೆಯಿತು. ಪ್ರತಿಭಟನಾ ಧರಣಿಯನ್ನು ಉದ್ಘಾಟಿಸಿ ಮಾತನಾಡಿದ ಡಿವೈಎಫ್‍ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಜಿಲ್ಲಾಡಳಿತದ ನಿಯಮಗಳನ್ನು ಗಾಳಿಗೆ ತೂರಿ ಮರಳುಗಾರಿಕೆ ನಡೆಯುತ್ತಿದ್ದು ಇದನ್ನು ಕಡಿವಾಣ ಹಾಕಲು ಜಿಲ್ಲಾಡಳಿತಕ್ಕೆ ಏಕೆ ಸಾಧ್ಯವಾಗುತ್ತಿಲ್ಲ? ಎಂದು ಪ್ರಶ್ನಿಸಿದರು. ಜಿಲ್ಲೆಯ ಜನಪ್ರತಿನಿಧಿಗಳ ಹಿಂಬಾಲಕರು ಮರಳುಗಾರಿಕೆಯನ್ನು ನಡೆಸುತ್ತಿದ್ದು ಇದರಿಂದ ಜನಪ್ರತಿನಿಧಿಗಳು ಮರಳುಗಾರರ ಜೊತೆ ಶಾಮೀಲಾಗಿದ್ದಾರೆ ಎಂದು ಹೇಳಿದ್ದರು. ಇವತ್ತು ತೆಗೆದ ಮರಳನ್ನು ಹೊರ ರಾಜ್ಯಗಳಿಗೆ ಕಳುಹಿಸಿ ನಮಗೆ ಮರಳಿನ ಅಭಾವವನ್ನು ಸೃಷ್ಟಿ ಮಾಡಿಸುತ್ತಿದ್ದಾರೆ, ನೇತ್ರಾವತಿ ನದಿಗೆ ಡ್ರೆಜಿಂಗ್ ಮೆಷಿನ್ ಬಳಸಿ ಮರಳು ಸಾಗಾಟ ಮಾಡುತ್ತಿದ್ದಾರೆ. ನೇತ್ರಾವತಿ ನದಿ ಉಳಿಸುವ ಹೋರಾಟಗಾರರು ಮೊದಲು ಈ ಅಕ್ರಮ ಮರಳು ಸಾಗಾಟದ ವಿರುದ್ಧ ಹೋರಾಟ ನಡೆಸಬೇಕು ಆಗ ಖಂಡಿತವಾಗಿ ನೇತ್ರಾವತಿ ನದಿ ಉಳಿಯುತ್ತದೆ ಎಂದು ಹೇಳಿದರು, ಕುದ್ರುವಿನ ಒಂದು ಕಿಲೋ ಮೀಟರ್ ವ್ಯಾಪ್ತಿಯೊಳಗಡೆ ಮರಳುಗಾರಿಕೆ ನಡೆದರೆ ಹೋರಾಟ ತೀವ್ರಗೊಳ್ಳುವುದು, ಪಾವೂರಿನಿಂದ ಜಿಲ್ಲಾಧಿಕಾರಿ ಕಚೇರಿಗೆ ಮತ್ತು ಶಾಸಕರ, ಮಂತ್ರಿಗಳ ಮನೆಗೆ ಪಾದಯಾತ್ರೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಡಿವೈಎಫ್‍ಐ ಜಿಲ್ಲಾಧ್ಯಕ್ಷರಾದ ದಯಾನಂದ ಶೆಟ್ಟಿ, ಡಿವೈಎಫ್‍ಐ ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ಇಮ್ತಿಯಾಜ್, ಪಾವೂರು ಗ್ರಾಮದ ಮಾಜಿ ಉಪಾಧ್ಯಕ್ಷರಾದ ದುಗ್ಗಪ್ಪ, ಡಿವೈಎಫ್‍ಐ ಉಳ್ಳಾಲ ವಲಯ ಕಾರ್ಯದರ್ಶಿ ಜೀವನ್‍ರಾಜ್ ಕುತ್ತಾರ್‍ರವರು ಮಾತನಾಡಿದರು. ಪ್ರತಿಭಟನೆಯಲ್ಲಿ ಡಿವೈಎಫ್‍ಐ ಜಿಲ್ಲಾ ಮುಖಂಡರಾದ ರಫೀಕ್ ಹರೇಕಳ, ಪ್ರಮೀಳಾ ಶಕ್ತಿನಗರ, ಸಾದಿಕ್ ಕಣ್ಣೂರು, ಇನ್‍ಫೆಂಟ್ ಜೇಸಸ್ ಚರ್ಚ್‍ನ ಗುರಿಕಾರ್ ಲವಿನಾ ಡಿ’ಸೋಜ, ಕ್ಯಾನಿಟ್ ಡಿ’ಸೋಜ ಇನೋಳಿ, ಗಿಲ್ಬರ್ಟ್ ಡಿ’ಸೋಜ, ಸುನೀಲ್ ತೇವುಲ, ನಿತಿನ್ ಕುತ್ತಾರ್, ಆಶಾ ಬೋಳೂರು, ಸಂತೋಷ್ ನೀತಿನಗರ ಮುಂತಾದವರು ಉಪಸ್ಥಿತರಿದ್ದರು. ಪ್ರತಿಭಟನೆಯ ನಂತರ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾಧಿಕಾರಿ ಆದೇಶ : ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಯವರು, ಡಿವೈಎಫ್‍ಐ ನಾಯಕರುಗಳ ಮತ್ತು ಪಾವೂರು ಕುದ್ರುವಿನ ಜನರ ಜೊತೆ ಸಭೆ ನಡೆಸಿ, ಪಾವೂರು ಕುದ್ರುವಿನ 500 ಮೀಟರ್ ವ್ಯಾಪ್ತಿಯೊಳಗಡೆ ಯಾವುದೇ ಮರಳುಗಾರಿಕೆ ನಡೆಸಬಾರದು ಮತ್ತು ಮರಳು ಶೇಖರಣೆ ಮಾಡುವವರ ವಿರುದ್ಧ ಕಠಿಣ ಕ್ರಮವನ್ನು ಕೂಡಲೇ ಕೈಗೊಳ್ಳುವ ಆದೇಶವನ್ನು ಮಾಡಬೇಕೆಂದು ತಹಶೀಲ್ದಾರರಿಗೆ ಸೂಚಿಸಿದರು.


Spread the love