ಮಂಗಳೂರು ವಲಯದ ಸರಕಾರಿ ಪ್ರೌಢಶಾಲೆಗಳಿಗೆ ರಸಾಯನಶಾಸ್ತ್ರ ಕಿಟ್ ವಿತರಣೆ

Spread the love

ಮಂಗಳೂರು ವಲಯದ ಸರಕಾರಿ ಪ್ರೌಢಶಾಲೆಗಳಿಗೆ ರಸಾಯನಶಾಸ್ತ್ರ ಕಿಟ್ ವಿತರಣೆ

ಮಂಗಳೂರು: ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರವು ಬಿ.ಎ.ಎಸ್.ಎಫ್. ಇಂಡಿಯಾ ಮತ್ತು ವಿಜಯಾ ಬ್ಯಾಂಕ್ ಸಹಯೋಗದೊಂದಿಗೆ ಹಾಗೂ ದ. ಕ. ಸಾರ್ವಜನಿಕ ಶಿಕ್ಷಣ ಇಲಾಖೆ ಸಹಕಾರದೊಂದಿಗೆ ಮಂಗಳೂರು ನಗರದ ಉತ್ತರ ಮತ್ತು ದಕ್ಷಿಣ ವಲಯದ ಸರಕಾರಿ ಪ್ರೌಢಶಾಲೆಗಳಿಗೆ ರಸಾಯನಶಾಸ್ತ್ರ ಅಧ್ಯಾಪನಕ್ಕೆ ಸಂಬಂಧಿಸಿದ ಕಿಟ್ ವಿತರಿಸುವ ಕಾರ್ಯಕ್ರಮವನ್ನು ನಗರದ ಸಂತ ಆಗ್ನೇಸ್ ಶಾಲೆಯಲ್ಲಿ ಏರ್ಪಡಿಸಿತ್ತು.

ಕಾರ್ಯಕ್ರಮದ ಆರಂಭದಲ್ಲಿ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ, ಡಾ. ಕೆ. ವಿ. ರಾವ್, ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಸರ್ಕಾರಿ ಪ್ರೌಢ ಶಾಲೆಗಳ ಅಧ್ಯಾಪಕರ ಕೋರಿಕೆಯಂತೆ ವಿಜ್ಞಾನ ಕೇಂದ್ರವು ಹಲವು ಕಾರ್ಯಕ್ರಮಗಳನ್ನು ನಡೆಸಿದ್ದು ಈಗ ವಿಜಯಾ ಬ್ಯಾಂಕ್ ಮತ್ತು ಬಿ.ಎ.ಎಸ್.ಎಫ್. ಇಂಡಿಯಾ ಇವರ ಆರ್ಥಿಕ ನೆರವಿನೊಂದಿಗೆ ಈ ಕಿಟ್‍ಗಳನ್ನು ನೀಡುತ್ತಿದೆ. ಅಧ್ಯಾಪಕರಿಗೆ ಬೇಕಾಗುವ ಇನ್ನಿತರ ಕಾರ್ಯಕ್ರಮಗಳನ್ನು ಮುಂದೆಯು ಹಮ್ಮಿಕೊಳ್ಳುವ ಯೋಜನೆಗಳಿವೆ ಎಂದರು.

ಅತಿಥಿಗಳಾಗಿ ವಿಜಯಾ ಬ್ಯಾಂಕ್‍ನ ಡೆಪ್ಯುಟಿ ಜನರಲ್ ಮ್ಯಾನೆಜರ್ ಎ. ಶ್ರೀಧರಮೂರ್ತಿ ಇವರು ಮಾತನಾಡುತ್ತಾ ವಿಜಯಾ ಬ್ಯಾಂಕ್ ಸಾಮಾಜಿಕ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದು ಇಂತಹ ಸದುದ್ದೇಶದ ಕಾರ್ಯಕ್ರಮಗಳಿಗೆ ಸದಾ ಬೆಂಬಲ ನೀಡುತ್ತಿದೆ ಎಂದರು. ಈ ನೆರವಿನ ಸದುಪಯೋಗವನ್ನು ಅಧ್ಯಾಪಕರು ಮಾಡಿಕೊಂಡು ಉತ್ತಮ ಫಲಿತಾಂಶವನ್ನು ನೀಡಬೇಕೆಂದು ಕರೆಕೊಟ್ಟರು.

ಬಿ.ಎ.ಎಸ್.ಎಫ್. ಇಂಡಿಯಾದ ಮಂಗಳೂರು ಘಟಕದ ಹೆಚ್‍ಆರ್ ವಿಭಾಗದ ಮುಖ್ಯಸ್ಥ ಶ್ರೀ ನಟರಾಜ್ ಸಿ.ಎಂ. ಮಾತನಾಡಿ ತಮ್ಮ ಸಂಸ್ಥೆಯು ರಸಾಯನಶಾಸ್ತ್ರದ ಅಧ್ಯಯನ ಅಧ್ಯಾಪನಕ್ಕೆ ಹಲವು ಯೋಜನೆಗಳನ್ನು ಕೈಗೊಂಡಿದ್ದು ಮುಂದೆಯು ಸಹ ಇಂತಹ ಕಾರ್ಯಕ್ರಮಗಳನ್ನು ಉತ್ತೇಜಿಸುವುದೆಂದರು. ಸರ್ಕಾರಿ ಶಾಲೆಯ ವಿದ್ಯಾರ್ಥಿಯಾಗಿ ತನಗೆ ಅಲ್ಲಿಯ ಸಮಸ್ಯೆಗಳ ಅರಿವಿದೆ. ಅಧ್ಯಾಪಕರಿಗೆ ಬೇಕಾದ ತರಬೇತಿಯನ್ನು ಸಂಸ್ಥೆಯ ವತಿಯಿಂದ ನಡೆಸಬಹುದೆಂದರು.

ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸದಸ್ಯ ಕಾರ್ಯದರ್ಶಿ ಶ್ರೀ ವಿ ಪ್ರಸನ್ನ ಅಧ್ಯಕ್ಷತೆ ವಹಿಸಿ ದೈನಂದಿನ ಜೀವನದಲ್ಲಿ ವಸ್ತುಗಳ ರಸಾಯನಶಾಸ್ತ್ರದ ಪ್ರಭಾವವನ್ನು ಗಮನಿಸಿದ್ದಲ್ಲಿ ಅಧ್ಯಯನ ಸುಲಭವಾಗುವುದೆಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕರಾದ ಶ್ರೀಮತಿ ಶೋಭ ಎನ್. ಮತ್ತು ಕಿಟ್‍ಗಳನ್ನು ತಯಾರಿಸುವ ಉಸ್ತುವಾರಿ ವಹಿಸಿದ್ದ ಡಾ. ಜಯಂತ ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯ, ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಶ್ರೀ ಸ್ಟ್ಯಾನಿ ತಾವ್ರೋ ಧನ್ಯವಾದ ಸಮರ್ಪಣೆ ಮಾಡಿದರು. ಕೇಂದ್ರದ ಕ್ಯುರೇಟರ್ ಶ್ರೀ ಜಗನ್ನಾಥ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.


Spread the love