ಮಂಗಳೂರು:  ‘ವಿಶ್ವ ಏಡ್ಸ್ ದಿನಾಚರಣೆ’ 

Spread the love

ಮಂಗಳೂರು: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು, ಮಂಗಳೂರು ವಕೀಲರ ಸಂಘ, ಮಂಗಳೂರು, ಕಾರ್ಮಿಕ ಇಲಾಖೆ, ಮಂಗಳೂರು ವಿಭಾಗ, ಎ.ಜೆ. ವೈದ್ಯಕೀಯ ಮತ್ತು ದಂತ ವಿಜ್ಞಾನ ಕಾಲೇಜುಗಳ ಸಂಸ್ಥೆ, ಮಂಗಳೂರು ಮತ್ತು ಸ್ವೀಕ್ವೆಂಟ್ ಸೈಟಿಫಿಕ್ ಲಿಮಿಟೆಡ್, ಇಂಡಸ್ಟ್ರಿಯಲ್ ಏರಿಯಾ, ಬೈಕಂಪಾಡಿ, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಡಿ. 01 ರಂದು ಸ್ವೀಕ್ವೆಂಟ್ ಸೈಟಿಫಿಕ್ ಲಿಮಿಟೆಡ್‍ನ ಆವರಣದಲ್ಲಿ “ವಿಶ್ವ ಏಡ್ಸ್ ದಿನಾಚರಣೆ”ಯನ್ನು ಹಮ್ಮಿಕೊಳ್ಳಲಾಗಿತ್ತು.

hiv

ಕಾರ್ಯಕ್ರಮದ ಉದ್ಘಾಟನೆಯನ್ನು ಸದಸ್ಯ ಕಾರ್ಯದರ್ಶಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ದ.ಕ ಗಣೇಶ. ಬಿ.,  ನೆರವೇರಿಸಿ ಏಡ್ಸ್ ಖಾಯಿಲೆ ಒಂದು ಸಾಮಾಜಿಕ ಪಿಡುಗಾಗಿದ್ದು, ಅದನ್ನು ಹೋಗಲಾಡಿಸಲು ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಮುಖಾಂತರ ತಡೆಯಬಹುದಾಗಿದ್ದು, ಇದರ ಅರಿವು ಮತ್ತು ಪ್ರತಿಯೊಬ್ಬರ ಸಹಭಾಗಿತ್ವ ಬಹಳ ಮುಖ್ಯವಾಗಿರುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾರ್ಮಿಕ ಅಧಿಕಾರಿಗಳಾದ ಮೈಲಾರಪ್ಪ ಮತ್ತು ಕೆ. ಶ್ರೀಪತಿರಾಜು ರವರು ಸಹಾ ಈ ಬಗ್ಗೆ ಕಾರ್ಮಿಕ ವರ್ಗದಲ್ಲಿ ಬಹಳ ಎಚ್ಚರಿಕೆಯಿಂದ ಮತ್ತು ಅರಿವಿನ ಮುಖಾಂತರ ಮುಂದೆ ಆಗುವ ತೊಂದರೆಯಿಂದ ಮುಕ್ತವಾಗಬಹುದು ಎಂದು ಹೇಳಿದರು.

ಎ.ಜೆ. ವೈದ್ಯಕೀಯ ಮತ್ತು ದಂತ ವಿಜ್ಞಾನ ಕಾಲೇಜಿನ ಡಾ. ರೋಷನ್ ಶೆಟ್ಟಿ ಮತ್ತು ಸರ್ಜನ್ ಮದಪ್ಪಾಡಿ ರವರು ಏಡ್ಸ್ ರೋಗದ ಬಗ್ಗೆ ಚಿತ್ರದ ತುಣುಕುಗಳನ್ನು ತೋರಿಸುವ ಮುಖಾಂತರ ಕಾರ್ಮಿಕರಿಗೆ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ವೀಕ್ವೆಂಟ್ ಸೈಟಿಫಿಕ್ ಲಿಮಿಟೆಡ್ ಸಂಸ್ಥೆಯ ಉಪಾಧ್ಯಕ್ಷರಾದ ಸಂಜಯ್ ಕುಮಾರ್ ಶ್ರೀವಾತ್ಸವ್ ರವರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು  ಎ.ಜೆ. ವೈದ್ಯಕೀಯ ಮತ್ತು ದಂತ ವಿಜ್ಞಾನ ಕಾಲೇಜುಗಳ ಸಂಸ್ಥೆಯವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಎ.ಜೆ. ದಂತ ವಿಜ್ಞಾನ ಕಾಲೇಜಿನ ಕಮ್ಯುನಿಟಿ ಡೆಂಟಿಸ್ಟ್ರಿ ವಿಭಾಗದ ಮುಖ್ಯಸ್ಥರಾದ ಡಾ. ವಿಜಯಾ ಹೆಗಡೆ ಹಾಗೂ ಇತರೆ ವೈದ್ಯರುಗಳು ಭಾಗವಹಿಸಿದ್ದರು ಮತ್ತು ಕಾರ್ಖಾನೆಯ ಕಾರ್ಮಿಕರು ಇದರ ಅರಿವನ್ನು ಪಡೆದುಕೊಂಡರು.


Spread the love