ಮಂಗಳೂರು: ಶಾಂತಿ ಭಂಗ ಮಾಡಿ ಅಮಾಯಕರ ಸಾವಿಗೆ ಕಾರಣರಾದವರ ಮೇಲೆ ಕ್ರಮ ಜರುಗಿಸಿ: ಕೊಸೌವೇ

Spread the love

ಮಂಗಳೂರು: ನಾಡ ಪ್ರೇಮಿ, ಮೈಸೂರು ಹುಲಿ ಟಿಪ್ಪು ಸುಲ್ತಾನರ ಬಗ್ಗೆ ಸುಳ್ಳು ದಾಖಲೆಗಳನ್ನು ಹರಡುವ ಮೂಲಕ ಸಾರ್ವಜನಿಕರನ್ನು ದ್ವೇಷಕ್ಕೆ ತಳ್ಳುತ್ತಿರುವ ಹಾಗೂ ಸರಕಾರಿ ಪ್ರಾಯೋಜಿತ ಟಿಪ್ಪು ಜಯಂತಿಯ ವೇಳೆ ಶಾಂತಿ ಭಂಗ ಮಾಡಿ, ಅಮಾಯಕ ಎರಡು ಜೀವಗಳ ಸಾವಿಗೆ ಕಾರಣರಾದವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಕೋಮು ಸೌಹಾರ್ದ ವೇದಿಕೆ ಮುಖ್ಯಮಂತ್ರಿಗಳನ್ನು ಆಗ್ರಹಿಸಿದೆಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಂಘಟನೆ  ಮೈಸೂರು ರಾಜನಾಗಿ, ಬ್ರಿಟೀಷರ ವಿರುದ್ಧ ಸಮರ ಸಾರಿ, ನಾಡಿನ ರಕ್ಷಣೆಗೆ ಮುಂದಾದ, ನಾಡಿನ ಶೂದ್ರ ಸಮುದಾಯಕ್ಕೆ ಕ್ರಾಂತಿಕಾರಿ ನಿರ್ಧಾರಗಳ ಮೂಲಕ ಚೈತನ್ಯ ಒದಗಿಸಿ ಸ್ವಾವಲಂಬಿ – ಸ್ವಾಭಿಮಾನದ ಬದುಕು ನೀಡಿದ, ಶೃಂಗೇರಿ, ಶ್ರೀರಂಗಪಟ್ಟಣ, ನಂಜನಗೂಡು, ಕೊಲ್ಲೂರು ಮೊದಲಾದ ದೇಗುಲಗಳಿಗೆ ರಕ್ಷಣೆ ನೀಡಿ ಧತ್ತಿನೀಡಿದ ಮೈಸೂರ ಹುಲಿ, ನಾಡಪ್ರೇಮಿ, ಬ್ರಿಟೀಷರ ವೈರಿ ಟಿಪ್ಪು ಸುಲ್ತಾನರವರ ಜನ್ಮ ದಿನಾಚರಣೆಯನ್ನು ಸಹಿಸಲಾಗದ ಕೆಲವು ಪುರೋಹಿತಶಾಹಿ ಮನಸ್ಸುಗಳ ವ್ಯಕ್ತಿಗಳು ಮತ್ತು ಸಮಾನತೆಯನ್ನು – ಸೌಹಾರ್ದತೆಯನ್ನು ಬಯಸದ ಕೆಲವು ಸಂಘಟನೆಗಳು ಟಿಪ್ಪು ಸುಲ್ತಾನರ ಬಗ್ಗೆ ಸುಳ್ಳು ದಾಖಲೆಗಳ ಮೂಲಕ ಅವಮಾನಿಸುವುದು ಮಾತ್ರವಲ್ಲದೇ, ತಮ್ಮ ಸುಳ್ಳುಗಳನ್ನು ಸತ್ಯವೆಂದು ನೂರಾರು ಬಾರಿ ಹೇಳುವ ಮೂಲಕ ಜನ ಸಾಮಾನ್ಯರನ್ನು ಪ್ರಚೋದಿಸಿ, ನಾಡಿನ ಸೌಹಾರ್ದತೆಗೆ ಭಂಗ ಉಂಟು ಮಾಡಿದ್ದಾರೆ. ಇದನ್ನು ಮುಂಚಿತವಾಗಿ ಗ್ರಹಿಸಿ ಸರಕಾರ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಿತ್ತು. ಈ ವರೆಗೆ ಅದನ್ನು ತಮ್ಮ ಸರಕಾರ ಮಾಡಿಲ್ಲ. ಕೂಡಲೇ ಅದನ್ನು ಮಾಡಬೇಕಾಗಿ ನಾವು ಒತ್ತಾಯಿಸುತ್ತೇವೆ.

ನವೆಂಬರ್ 10, 2016ರ ಸೋಮವಾರ ನಡೆದ ಟಿಪ್ಪು ಜಯಂತಿ ಕಾರ್ಯಕ್ರಮವು ಕೆಲವೆಡೆ ಹಿಂಸಾತ್ಮಕ ವಿರೋಧಗಳನ್ನು ಎದುರಿಸಿ ಮುಜುಗುರ ಉಂಟಾಗಲು ಇಂತಹ ವ್ಯಕ್ತಿ ಮತ್ತು ಸಂಘಟನೆಗಳೇ ಕಾರಣ ಎನ್ನುವುದನ್ನು ಸರಕಾರ ಗಮನಿಸಬೇಕು. ಇದನ್ನು ಸರಕಾರದ ಸಮಾನತೆಯ ಆಶಯವನ್ನು ಮೂಲೆಗೆ ತಳ್ಳುವ ವಿಚ್ಛಿದ್ರಕಾರಿ ಶಕ್ತಿಗಳ ಷಡ್ಯಂತ್ರ ಎಂಬುದಾಗಿ ಪರಿಗಣಿಸಬೇಕು. ಈ ರೀತಿಯ ಪ್ರಚೋದನಾತ್ಮಕ ಹೇಳಿಕೆಗಳು ಮತ್ತು ಭಾಷಣಗಳಿಂದ ಸಮಾಜ ಉದ್ರೇಕಗೊಂಡು ಪ್ರತಿಭಟನೆಯ ಹಿಂಸೆಯಲ್ಲಿ ಕುಟ್ಟಪ್ಪ ಮತ್ತು ರಾಜು ಎಂಬ  ಎರಡು ಅಮೂಲ್ಯ ಜೀವಗಳು ಬಲಿಯಾಗುವಂತಹದ್ದು ದೊಡ್ಡ ದುರಂತ. ಸರಕಾರ ಮತ್ತು ಕೆಲವು ಸ್ಥಳೀಯ ಆಡಳಿತಗಳು ಇದನ್ನು ಮೊದಲೇ ಗ್ರಹಿಸಿ ಸಾಕಷ್ಟು ಮಟ್ಟಿನ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳದೆ ಇದ್ದುದು ನಿಜಕ್ಕೂ ಶೋಚನೀಯ. ಈ ಎರಡು ಬಲಿಗಳಿಗೆ ಕರಾವಳಿ ಮತ್ತು ಮಲೆನಾಡಲ್ಲಿ ಕಾರ್ಯನಿರತವಾಗಿ ಜನಾಂಗೀಯ ದ್ವೇಷವನ್ನು ಹಬ್ಬಿಸುತ್ತಿರುವ ಸಂಘ ಪರಿವಾರವೇ ನೇರ ಹೊಣೆಯೆಂದು ನಾವು ಸರಕಾರಕ್ಕೆ ತಿಳಿಸಬಯಸುತ್ತೇವೆ ಮತ್ತು ಅಮಾಯಕರ ಬಲಿ ಪಡೆದ ಸಂಘಟನೆಗಳು ಮತ್ತು ಅದರ ಹಿಂದಿರುವ ನಾಯಕರುಗಳನ್ನು ಸೂಕ್ತ ಕಾನೂನು ಕ್ರಮಕ್ಕೆ ಒಳಪಡಿಸಬೇಕು ಎಂದು ನಾವು ಆಗ್ರಹಿಸುತ್ತೇವೆ.

ಬಿಹಾರದ ಚುನಾವಣಾ ಫಲಿತಾಂಶದಿಂದ ಮಾನಸಿಕ ಸ್ವಾಸ್ಥ್ಯವನ್ನು ಕಳೆದುಕೊಂಡ ಸಂಘಪರಿವಾರ ಮತ್ತು ಬಿಜೆಪಿಯ ಜನ ಪ್ರತಿನಿಧಿಗಳು ತೆರೆಯ ಮರೆಯಲ್ಲಿ ನಿಂತು ಮಾನವ ಜೀವದ ಜೊತೆ ಚೆಲ್ಲಾಟವಾಡುತ್ತಿವೆ. ಸಮಾಜದಲ್ಲಿ ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ಸಾರ್ವಜನಿಕರಲ್ಲಿ ಗೊಂದಲ ಉಂಟುಮಾಡುತ್ತಿವೆ. ಇನ್ನೊಂದೆಡೆ ಕರಾವಳಿ ಭಾಗದ ಪೊಲೀಸ್ ಇಲಾಖೆಯಲ್ಲಿ ಶೇ.60ರಷ್ಟು ಮಂದಿ ಸಂಘಪರಿವಾರಕ್ಕೆ ಸೇರಿದ ಸಂಘಟನೆಗಳ ಅನಧಿಕೃತ ಸದಸ್ಯತ್ವವನ್ನು ಹೊಂದಿರುವವರು ಇದ್ದಾರೆ ಎನ್ನುವುದನ್ನು ಕೋಬ್ರಾ ಪೋಸ್ಟ್ ರಹಸ್ಯ ಕಾರ್ಯಾಚರಣೆಯ ಮೂಲಕ ಆ ನಾಯಕರುಗಳ ಬಾಯಿಂದಲೇ ಹೊರಗೆಡವಿದೆ.

ಕರಾವಳಿಯಲ್ಲಿ ಕೋಮು ದ್ವೇಷದ ಘಟನೆಗಳು ಹೆಚ್ಚುತ್ತಿರುವುದಕ್ಕೆ ಇಂತಹ ಮನಸ್ಥಿತಿಯ ಪೊಲೀಸರೆ ಕಾರಣವೆಂಬುದು ಇದರಿಂದ ಸ್ಪಷ್ಟವಾಗುತ್ತದೆ. ಕರಾವಳಿ ಭಾಗದಲ್ಲಿ ಹೆಚ್ಚುತ್ತಿರುವ ಗ್ಯಾಂಗ್ ಕಲಹಗಳಿಗೂ ಕೋಮು ಹಿನ್ನೆಲೆ ಇರುವಂತೆ ಕಾಣುತ್ತಿದ್ದು ಅಂತಿಮವಾಗಿ ಇವೆಲ್ಲವೂ ದೊಡ್ಡ ಮಟ್ಟಿನ ಕೋಮು ಗಲಭೆಗಳಿಗೆ ಕಾರಣವಾಗಲೂಬಹುದು ಎಂಬುದು ನಮ್ಮ ಅನಿಸಿಕೆಯಾಗಿದೆ. ಆದುದರಿಂದ ಇದೆಲ್ಲವನ್ನು ಈಗಿಂದೀಗಲೆ ಮಟ್ಟ ಹಾಕಲು ತಕ್ಷಣ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಆಗ್ರಹಿದೆ.


Spread the love