ಮಾಜಿ ಪತ್ರಕರ್ತನ ‘ಡ್ರೀಮ್ಸ್ ಆನ್ ವೀಲ್ಸ್’ ಎಂಬ ವಿಶಿಷ್ಟ ಯೋಜನೆ

Spread the love

ಮಾಜಿ ಪತ್ರಕರ್ತನ ‘ಡ್ರೀಮ್ಸ್ ಆನ್ ವೀಲ್ಸ್’ ಎಂಬ ವಿಶಿಷ್ಟ ಯೋಜನೆ

ಸರಕಾರಿ ಶಾಲೆಯ ವಿದ್ಯಾರ್ಥಿಗಳು ಭವಿಷ್ಯದ ಸಮಸ್ಯೆಗಳನ್ನು ಎದುರಿಸುವಂತೆ ಸದೃಢರಾಗಿಸುವ ಆಶಯದೊಂದಿಗೆ, ಮಾಜಿ ಪತ್ರಕರ್ತ ಶ್ರೀನಿವಾಸನ್ ನಂದಗೋಪಾಲ್ ರಾಜ್ಯಾದ್ಯಂತ ಸಂಚರಿಸುವ ಯಾನ ಆರಂಭಿಸುತ್ತಿದ್ದಾರೆ. ‘ಡ್ರೀಮ್ಸ್ ಆನ್ ವೀಲ್ಸ್’ ಎಂಬ ವಿಶಿಷ್ಟ ಯೋಜನೆಯೊಂದಿಗೆ ಆರಂಭವಾಗಿರುವ ಈ ಪ್ರಯಾಣದ ವೇಳೆ ಅವರು ಕರ್ನಾಟಕದ ವಿವಿಧ ಸರಕಾರಿ ಶಾಲೆಗಳ 10ನೇ ತರಗತಿಯ ವಿದ್ಯಾರ್ಥಿಗಳೊಂದಿಗೆ ‘ಕೌಶಲ ವೃದ್ಧಿ, ಪರೀಕ್ಷಾ ಸಿದ್ಧತೆ ಮತ್ತು ವೃತ್ತಿಬದುಕಿನ ಅವಕಾಶಗಳು’ ಎಂಬ ವಿಷಯವಾಗಿ ಸಂವಾದ- ಸಂವಹನ ನಡೆಸಲಿದ್ದಾರೆ. ಆಸಕ್ತಿಯ ವಿಷಯವೆಂದರೆ, ರಾಜ್ಯದ ಮೂಲೆಮೂಲೆಗಳಲ್ಲಿ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿರುವ, ಆತ್ಮವಿಶ್ವಾಸದ ಕೊರತೆಯೊಂದಿಗೆ ಪಿಯುಸಿ ಹಂತವನ್ನು ಪ್ರವೇಶಿಸುವ ಅವಕಾಶವಂಚಿತ ವಿದ್ಯಾರ್ಥಿಗಳಲ್ಲಿ ಹೊಸ ಅಭಿಪ್ರೇರಣೆ ತುಂಬುವಲ್ಲಿ ನೆರವಾಗುವ ಈ ವಿನೂತನ ಯೋಜನೆಯನ್ನು ಸಾಕಾರಗೊಳಿಸುವುದಕ್ಕಾಗಿ, ಅವರು ತನ್ನ ಹೋಂಡಾ CB350 ಬೈಕ್ ನಲ್ಲಿ ಸಂಚರಿಸಲಿದ್ದಾರೆ.

“ಮುಂದಿನ 3 ತಿಂಗಳ ಅವಧಿಯಲ್ಲಿ ರಾಜ್ಯದ 31 ಜಿಲ್ಲೆಗಳ ಸರಕಾರಿ ಶಾಲೆಗಳಿಗೆ ಭೇಟಿ ನೀಡಿ ತಲಾ 90 ನಿಮಿಷಗಳ 62 ಸಂವಾದ ಕಾರ್ಯಕ್ರಮವನ್ನು ನಡೆಸುವ ಮೂಲಕ ಸುಮಾರು 30 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತಲುಪುವ ಯೋಜನೆಯಿದೆ” ಎಂದು ನಂದಗೋಪಾಲ್ ಮಾಹಿತಿ ನೀಡಿದ್ದಾರೆ.

ಈ ಯೋಜನೆಯ ಉದ್ದೇಶವು ಸಂವಾದ ಕಾರ್ಯಕ್ರಮದ ಪರಿಧಿಯ ಆಚೆಗೆ ವಿಸ್ತರಿಸಿಕೊಂಡಿರುವಂಥದ್ದು. ರಾಜ್ಯದಲ್ಲಿರುವ ಸರಕಾರಿ ಶಾಲೆಗಳ ಪ್ರಸಕ್ತ ಸನ್ನಿವೇಶ, ಶೈಕ್ಷಣಿಕ ಸಂರಚನೆ ಹಾಗೂ ಅಧ್ಯಾಪಕರ ಸಾಮರ್ಥ್ಯಗಳ ವಿಮರ್ಶಾತ್ಮಕ ಅಧ್ಯಯನ ಮತ್ತು ಮೌಲ್ಯಮಾಪನದ ಉದ್ದೇಶವೂ ಇದೆ ಎಂದವರು ತಿಳಿಸಿದರು.

16 ವರ್ಷಗಳ ಹಿಂದೆ, ನಂದಗೋಪಾಲ್ ಮತ್ತು ಅವರ ಪತ್ನಿ ಸಚಿತಾ ದಂಪತಿ ತಮ್ಮ ಉದ್ಯೋಗವನ್ನು ತೊರೆದು, ಮಕ್ಕಳ ಸಹಜ ಕಲಿಕೆಯನ್ನು ಉತ್ತೇಜಿಸುವ ‘ಸೆಂಟರ್ ಫಾರ್ ಇಂಟಗ್ರೇಟೆಡ್ ಲರ್ನಿಂಗ್’ ಎಂಬ ಲಾಭರಹಿತ ಸಂಸ್ಥೆಯೊಂದನ್ನು ಮುನ್ನಡೆಸುತ್ತಿದ್ದು, ಪ್ರಸಕ್ತ ಶಿಕ್ಷಣ ವ್ಯವಸ್ಥೆಯನ್ನು ಮೌಲಿಕವಾಗಿಸುವ ತರಬೇತಿ ಮಾಡ್ಯೂಲ್ ಗಳು, ಅಭಿಯಾನಗಳು, ಶೈಕ್ಷಣಿಕ ಕಾರ್ಯಕ್ರಮಗಳು ಮತ್ತಿತರ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ.

ಸರಕಾರಿ ಶಾಲಾ ಶಿಕ್ಷಣದ ಕುರಿತಾದ ಕಾಳಜಿ, ಪತ್ರಿಕೋದ್ಯಮ ರಂಗದ ಅನುಭವಗಳು ಹಾಗೂ ತನ್ನ ಸಾಹಸಪ್ರಿಯತೆಗಳ ಹಿನ್ನೆಲೆಯು ಈ ಯಾನದ ಯೋಜನೆಗೆ ಪ್ರೇರಣೆಯಾಗಿವೆ. ಸುಮಾರು 4000 ಕಿ.ಮೀ. ದೂರವನ್ನು ಕ್ರಮಿಸುವ ಮೂಲಕ ಸಮಸ್ಯೆಯನ್ನು ತಲಸ್ಪರ್ಶಿಯಾಗಿ ಅರಿತುಕೊಳ್ಳುವ ಇಚ್ಛೆಯಿದೆ ಎಂದು‌ ನಂದಗೋಪಾಲ್ ತಿಳಿಸಿದರು.


Spread the love
Subscribe
Notify of

0 Comments
Inline Feedbacks
View all comments