ಮೀನಿನಲ್ಲಿ ಫಾರ್ಮಾಲಿನ್ ಪತ್ತೆ ಆಗಿಲ್ಲ; ಇಲಾಖೆ ಅಧಿಕಾರಿಗಳು

Spread the love

ಮೀನಿನಲ್ಲಿ ಫಾರ್ಮಾಲಿನ್ ಪತ್ತೆ ಆಗಿಲ್ಲ; ಮೀನುಗಾರಿಕಾ ಇಲಾಖೆ ಅಧಿಕಾರಿಗಳು

ಉಡುಪಿ: ಜಿಲ್ಲೆಯ ಮಲ್ಪೆ ಬಂದರು ಮತ್ತು ಉಡುಪಿ ಮಹಿಳಾ ಮೀನು ಮಾರುಕಟ್ಟೆಯಲ್ಲಿ ಮತ್ತು ಕುಂದಾಪುರದ ಮೀನು ಮಾರುಕಟ್ಟೆಯಲ್ಲಿ ಸಂಗ್ರಹಿಸಿದ ಮೀನುಗಳ ಮಾದರಿ (ಸ್ಯಾಂಪಲ್ )ಗಳನ್ನು ಪರಿಶೀಲನೆಗೆ ಒಳಪಡಿಸಿದ್ದು, ಇವುಗಳಲ್ಲಿ ಯಾವುದೇ ಫಾರ್ಮಾಲಿನ್ ಅಂಶ ಪತ್ತೆ ಆಗಿಲ್ಲ ಎಂದು ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿಗಳು ಮತ್ತು ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ , ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಆಹಾರ ಸುರಕ್ಷತಾ ಸಲಹಾ ಸಮಿತಿ ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿಗಳ ಆದೇಶದಂತೆ, ಜಿಲ್ಲೆಯ ಮೀನುಗಳಲ್ಲಿ ರಾಸಾಯನಿಕ ಬಳಕೆ ಮಾಡುವ ಬಗ್ಗೆ ಪರಿಶೀಲಿಸಲು, ಮಲ್ಪೆ ಬಂದರಿನಿಂದ ಹೊರ ಹೋಗುವ ಮೀನು ಲಾರಿಗಳನ್ನು ಮತ್ತು ಮಲ್ಪೆಗೆ ಆಗಮಿಸುವ ಹೊರ ರಾಜ್ಯದ ಮೀನುಗಾರಿಕಾ ಲಾರಿಗಳನ್ನು ಪರಿಶೀಲಿಸಲಾಗಿ, ಅವುಗಳಲ್ಲಿ ಯಾವುದೇ ಫಾರ್ಮಾಲಿನ್ ಪತ್ತೆಯಾಗಿಲ್ಲ ಅಲ್ಲದೇ ಉಡುಪಿಯ ಮಹಿಳಾ ಮೀನು ಮಾರುಕಟ್ಟೆ ಮತ್ತು ಕುಂದಾಪುರದ ಮೀನು ಮಾರುಕಟ್ಟೆಗಳಲ್ಲಿ ಸಹ ಪರೀಕ್ಷೆ ನಡೆಸಿದ್ದು, ಯಾವುದೇ ರಾಸಾಯನಿಕ ಪತ್ತೆಯಾಗಿಲ್ಲ, ಪರಿಶೀಲನೆಗೆ ತೆಗೆದುಕೊಂಡ ಒಟ್ಟು 15 ಮೀನು ಮಾದರಿಗಳನ್ನು, ಮೈಸೂರಿನ ಎನ್.ಎ.ಬಿ.ಎಲ್ (ನ್ಯಾಷನಲ್ ಅಕ್ರಿಡರೇಟೆಡ್ ಬೋರ್ಡ್ ಫಾರ್ ಲ್ಯಾಬೋರೇಟರಿ)ಗೆ ಪರಿಶೀಲನೆಗೆ ಕಳುಹಿಸಿದ್ದು, ಅಲ್ಲಿಂದ ಬಂದ ವರದಿಯಂತೆ, ಜಿಲ್ಲೆಯ ಮೀನುಗಳಲ್ಲಿ ಯಾವುದೇ ರಾಸಾಯನಿಕ ಬಳಕೆ ಆಗಿಲ್ಲ ಆದ್ದರಿಂದ ಮೀನು ಸೇವನೆ ಕುರಿತಂತೆ ಜನತೆ ಆತಂಕ ಪಡುವ ಅವಶ್ಯತೆಯಿಲ್ಲ ಎಂದು ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಕುಡಿಯುವ ನೀರು ತಯಾರಿಕಾ ಘಟಕಗಳಿಗೆ ಮತ್ತು ಆಹಾರ ತಯಾರಿಕಾ ಕೇಂದ್ರಗಳಿಗೆ ನಿಯಮಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೋಹಿಣಿ ಹಾಗೂ ಆರೋಗ್ಯ ಇಲಾಖೆ ಮತ್ತು ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love