ಮೀನುಗಾರರ ಬಸ್ಸುಗಳ ಮೇಲೆ ಕಲ್ಲು ತೂರಾಟ ಹೇಯ ಕೃತ್ಯ: ಯಶ್ ಪಾಲ್ ಸುವರ್ಣ

Spread the love

ಮೀನುಗಾರರ ಬಸ್ಸುಗಳ ಮೇಲೆ ಕಲ್ಲು ತೂರಾಟ ಹೇಯ ಕೃತ್ಯ: ಯಶ್ ಪಾಲ್ ಸುವರ್ಣ

ಮಲ್ಪೆ: ಮಲ್ಪೆ ಕಡಲ ತೀರದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಉಪಸ್ಥಿತಿಯಲ್ಲಿ ನಡೆದ ಮೀನುಗಾರರ ಸಮಾವೇಶ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಈ ಸಮಾವೇಶದ ಯಶಸ್ಸನ್ನು ಸಹಿಸದೆ ಕೆಲವು ಕಿಡಿಗೇಡಿಗಳು ಮಂಗಳೂರಿನಲ್ಲಿ ಸಮಾವೇಶದಿಂದ ಹಿಂದಿರುಗುತ್ತಿದ್ದ ಮೀನುಗಾರರ ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇಂತಹ ಹೇಯ ಕೃತ್ಯ ನಡೆಸಿದವರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮಕೈಗೊಳ್ಳಬೇಕು ತಪ್ಪಿದ್ದಲ್ಲಿ ಮುಂದೆ ಆಗಬಹುದಾದ ಅನಾಹುತಗಳಿಗೆ ರಾಜ್ಯ ಸರಕಾರವೇ ನೇರ ಹೊಣೆಯಾಗಲಿದೆ ಎಂದು ಮೀನುಗಾರರ ಸಮಾವೇಶದ ಸಂಚಾಲಕರಾದ ಯಶ್ ಪಾಲ್ ಸುವರ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರಾವಳಿಯ ಜನರ ಜೀವನಾಧಾರ ವೃತ್ತಿಯಾದ ಮೀನುಗಾರಿಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮಾನ್ಯ ಅಮಿತ್ ಶಾ ಅವರು ಮಲ್ಪೆಯಲ್ಲಿ ಮೀನುಗಾರರ ಸಮಾವೇಶವನ್ನು ನಡೆಸಿ ಮೀನುಗಾರರ ಸಂಕಷ್ಟಗಳನ್ನು ಆಲಿಸಿ ಅವರ ಬದುಕಿಗೆ ಭದ್ರತೆ ನೀಡುವ ಬಗ್ಗೆ ಭರವಸೆ ನೀಡಿದ್ದಾರೆ. ಸಮಾವೇಶಕ್ಕೆ ಮೂರು ಜಿಲ್ಲೆಯ ಮೂಲೆ ಮೂಲೆಗಳಿಂದ ಸಾವಿರಾರು ಮೀನುಗಾರರು ಆಗಮಿಸಿದ್ದು, ಅತ್ಯಂತ ಶಾಂತಿಯುತವಾಗಿ ಕಾರ್ಯಕ್ರಮ ಸಂಪನ್ನಗೊಂಡಿದೆ. ಆದರೆ ಮಂಗಳೂರಿನ ಕಸಬಾ ಬೆಂಗ್ರೆಯಲ್ಲಿ ಮೀನುಗಾರರ ವಾಹನಕ್ಕೆ ಕೆಲವು ಮತಾಂಧರು ಕಲ್ಲು ತೂರಾಟ ಮಾಡಿ ಗಲಭೆ ಸೃಷ್ಟಿಸುವ ಪ್ರಯತ್ನ ನಡೆಸಿದ್ದಾರೆ. ಆದರೆ ಶಾಂತಿಪ್ರಿಯ ಮೀನುಗಾರ ಬಂಧುಗಳು ಈ ಕಿಡಿಗೇಡಿಗಳಿಗೆ ಪ್ರತಿಕ್ರಿಯೆ ನೀಡದೆ ತಾಳ್ಮೆಯಿಂದ ವರ್ತಿಸಿದ್ದಾರೆ. ಕರಾವಳಿಯ ಶಾಂತಿಗೆ ಕೊಳ್ಳಿ ಇಡುತ್ತಿರುವ ಈ ದುಷ್ಕರ್ಮಿಗಳಿಗೆ ರಾಜ್ಯ ಸರಕಾರದ ತುಷ್ಟೀಕರಣ ನೀತಿಗಳು ಇನ್ನಷ್ಟು ಪ್ರೋತ್ಸಾಹ ನೀಡುವಂತಿದೆ. ಹಿಂದೂ ಕಾರ್ಯಕರ್ತರ ಮೇಲೆ ವಿನಾ ಕಾರಣ ಗೂಂಡಾ ಕಾಯ್ದೆ ಹಾಕಿ ಅವರ ಬದುಕನ್ನೇ ಕಸಿದು ಕೊಳ್ಳುವ ರಾಜ್ಯ ಪೊಲೀಸ್ ಇಲಾಖೆ ಇಂಥ ಮತಾಂಧ ಗಲಭೆಕೋರರ ಬಗ್ಗೆ ಯಾಕೆ ಮೌನ ವಹಿಸಿದೆ ಎಂದು ಅವರು ಪ್ರಶ್ನಿಸಿದ್ದಾರೆ.

ಮಲ್ಪೆಯಲ್ಲಿ ನಡೆದ ಮೀನುಗಾರರ ಸಮಾವೇಶ ನಿರೀಕ್ಷೆಗೂ ಮೀರಿ ಯಶಸ್ಸಾಗಿದೆ.ಮುಂದಿನ ಚುನಾವಣೆಗೆ ದಿಕ್ಸೂಚಿಯಾಗಬಲ್ಲ ಒಗ್ಗಟ್ಟನ್ನು ಕರಾವಳಿಯ ಮೀನುಗಾರ ಬಂಧುಗಳು ಪ್ರದರ್ಶಿಸಿದ್ದಾರೆ. ಇದರ ಯಶಸ್ಸಿಗೆ ದುಡಿದ ಬಿಜೆಪಿಯ ಎಲ್ಲಾ ಮುಖಂಡರಿಗೆ, ಕಾರ್ಯಕರ್ತರಿಗೆ,ಮೀನುಗಾರ ಮುಖಂಡರಿಗೆ ಮತ್ತು ಈ ಕಾರ್ಯಕ್ರಮಕ್ಕೆ  ಮೂರೂ ಜಿಲ್ಲೆಯ ಮೂಲೆ ಮೂಲೆಗಳಿಂದ ಆಗಮಿಸಿದ ಪಕ್ಷದ ಅಭಿಮಾನಿಗಳಿಗೆ ಹೃದಯಾಂತರಾಳದ ಧನ್ಯವಾದವನ್ನು ಯಶ್ ಪಾಲ್ ಸುವರ್ಣ ಅವರು ತಿಳಿಸಿದ್ದಾರೆ.


Spread the love