ಮೀನುಗಾರ ಸಮುದಾಯವನ್ನು ಒಡೆದ ಶಾಪ ಕಾಂಗ್ರೆಸಿಗೆ ತಟ್ಟಿದೆ -ಯಶ್‌ಪಾಲ್ ಸುವರ್ಣ

Spread the love

ಮೀನುಗಾರ ಸಮುದಾಯವನ್ನು ಒಡೆದ ಶಾಪ ಕಾಂಗ್ರೆಸಿಗೆ ತಟ್ಟಿದೆ -ಯಶ್‌ಪಾಲ್ ಸುವರ್ಣ

ಉಡುಪಿ: ಅಧಿಕಾರಕ್ಕೆ ಬಂದ ಬಳಿಕ ದುರಹಂಕಾರದ ಮೇರೆ ಮೀರಿ ವರ್ತಿಸಿದ ಕಾಂಗ್ರೇಸ್ ಪಕ್ಷವನ್ನು ಕರಾವಳಿ ಕರ್ನಾಟಕದ ಜನರು ಮುಂದೆಂದೂ ತಲೆ ಎತ್ತದಂತೆ ಹೊಸಕಿ ಹಾಕಿದ್ದಾರೆ. “ಕಾಂಗ್ರೆಸ್ ಮುಕ್ತ ಭಾರತ” ಎಂಬ ನಮ್ಮ ಕರೆಗೆ ಮತದಾರ ಪ್ರಭು ಓಗೊಟ್ಟು ಐದೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ದೂಳಿಪಟಮಾಡಿದ್ದಾನೆ. ಪ್ರಜಾಪ್ರಭುತ್ವದ ಅಭೂತಪೂರ್ವ ಸಾಧ್ಯತೆಯನ್ನು ಕರಾವಳಿಯ ಮತದಾರ ಪ್ರದರ್ಶಿಸಿದ್ದಾನೆ. ಈ ತೀರ್ಪು ಬಿಜೆಪಿ ಪಕ್ಷದ ಬಗ್ಗೆ ಈ ಭಾಗದ ಜನರು ಇಟ್ಟಿರುವ ಅದಮ್ಯ ವಿಶ್ವಾಸವನ್ನು ದೃಡಪಡಿಸಿದೆ. ಜಿಲ್ಲೆಯ ಎಲ್ಲಾ ಮತದಾರ ಬಂಧುಗಳು ಪಕ್ಷಕ್ಕೆ ನೀಡಿದ ಬೆಂಬಲಕ್ಕೆ ತುಂಬುಹೃದಯದ ಧನ್ಯವಾದಗಳು ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್ ಸುವರ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರು ತನ್ನ ಆಡಳಿತಾವಧಿಯಲ್ಲಿ ಮೀನುಗಾರ ಸಮುದಾಯವನ್ನು ಕಾಡುತ್ತಿದ್ದ ಅವೈಜ್ಞಾನಿಕ ಮೀನುಗಾರಿಕಾ ಪದ್ದತಿಯನ್ನು ಸೌಹಾರ್ದಯುತವಾಗಿ ಬಗೆಹರಿಸುವ ಬದಲು ಒಂದು ವರ್ಗದ ಪರವಾಗಿ ನಿಂತು ಮೀನುಗಾರರ ನಡುವೆ ಬಿಕ್ಕಟ್ಟು ಮೂಡಿಸಿದರು.ಸ್ವತಃ ಮೀನುಗಾರ ಸಮುದಾಯದಿಂದ ಬಂದಿದ್ದ ಇವರ ಬಗ್ಗೆ ಮೀನುಗಾರ ಸಮುದಾಯಕ್ಕೆ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಅದಾವುದನ್ನೂ ಅವರು ಈಡೇರಿಸದೇ ತನ್ನ ಸ್ವಂತ ಹಿತಾಸಕ್ತಿಯ ಬಗ್ಗೆ ಹೆಚ್ಚು ಗಮನ ಹರಿಸಿದರು. ಇವರ ಈ ಸ್ವಾರ್ಥ ರಾಜಕಾರಣಕ್ಕೆ ಕಡಲತಡಿಯ ಮತದಾರಬಂಧುಗಳು ಸೂಕ್ತ ಉತ್ತರ ನೀಡಿದ್ದಾರೆ. ಐವತ್ತು ಸಾವಿರ ಅಂತರದಲ್ಲಿ ಗೆಲ್ಲುತ್ತೇನೆ ಎಂದು ಬೀಗಿದ ಉಸ್ತುವಾರಿಸಚಿವರು ಮತೆಣಿಕೆ ಕೇಂದ್ರಕ್ಕೆ ಬರಲೂ ಮುಜುಗರ ಪಡುವ ಸ್ಥಿತಿಯನ್ನು ಉಡುಪಿಯ ಮತದಾರ ಸೃಷ್ಟಿಸಿದ್ದಾನೆ. ಉಡುಪಿಯ ಜನಪ್ರಿಯ ಶಾಸಕರಾಗಿ ರಘುಪತಿ ಭಟ್ ಅವರು ಆಯ್ಕೆಯಾಗಿದ್ದಾರೆ. ಕೀರ್ತಿಶೇಷ ಡಾ| ವಿ.ಎಸ್ ಆಚಾರ್ಯರ ಅವಧಿಯಲ್ಲಿ ನಡೆದ ಅಭಿವೃದ್ಧಿಯ ಪರ್ವ ಉಡುಪಿಯಲ್ಲಿ ಮತ್ತೆ ಆರಂಭವಾಗಲಿದೆ. ಮತದಾರ ನಮ್ಮ ಪಕ್ಷದ ಮೇಲೆ ಇರಿಸಿರುವ ನಂಬಿಕೆಗೆ ಎಳ್ಳಷ್ಟೂ ಚ್ಯುತಿಯಾಗದಂತೆ ನಮ್ಮ ಪಕ್ಷ ಜನಸೇವೆ ಗೈಯಲಿದೆ. ಕಾಂಗ್ರಸ್ ಕಾಲದಲ್ಲಿ ನೆನೆಗುದಿಗೆ ಬಿದ್ದ ಅನೇಕ ಯೋಜನೆಗಳನ್ನು ಮತ್ತೆ ಕೈಗೆತ್ತಿಕೊಂಡು ಉಡುಪಿ ಕ್ಷೇತ್ರ ರಾಜ್ಯಕ್ಕೆ ಮಾದರಿ ಕ್ಷೇತ್ರವಾಗುವಂತೆ ನಮ್ಮ ಶಾಸಕರು ಶ್ರಮಿಸಲಿದ್ದಾರೆ.

ಪಕ್ಷ ಇಡೀ ಜಿಲ್ಲೆಯಾದ್ಯಂತ ಇಷ್ಟೊಂದು ಪ್ರಚಂಡ ಮತಗಳೊಂದಿಗೆ ಜಯಗಳಿಸಿರುವುದು ನಮ್ಮ ಪಕ್ಷದ ಬೆನ್ನೆಲುಬಾಗಿರುವ ದೇವತುಲ್ಯ ಕಾರ್ಯಕರ್ತರ ಶ್ರಮದಿಂದಾಗಿ. ಭಾರತೀಯ ಜನತಾಪಕ್ಷ “ಅಧಿಕಾರವಿರುವುದು ಅನುಭವಿಸಲು ಅಲ್ಲ ಅದಿರುವುದು ಸಾಮಾಜಿಕ ಬದಲಾವಣೆಗಾಗಿ” ಎಂಬ ದ್ಯೇಯದಡಿಯಲ್ಲಿ ಕಾರ್ಯ ನಿರ್ವಹಿಸುತ್ತಾ ಬಂದಿರುವ ಪಕ್ಷ. ಪಕ್ಷದ ಕಾರ್ಯಕರ್ತರ ಒಂದೊಂದು ಹನಿ ಬೆವರಿಗೂ ನ್ಯಾಯ ಒದಗಿಸುವ ಕಾರ್ಯವನ್ನು ಬಿಜೆಪಿ ಪಕ್ಷ ನಡೆಸಲಿದೆ ಎಂಬ ವಿಶ್ವಾಸದೊಂದಿಗೆ ಎಲ್ಲಾ ಕಾರ್ಯಕರ್ತರ ಅಮೂಲ್ಯ ಶ್ರಮಕ್ಕೂ ನನ್ನ ವೈಯುಕ್ತಿಕ ಧನ್ಯವಾದಗಳು

ಕರಾವಳಿಯಲ್ಲಿ ಹಿಂದೂ ಕಾರ್ಯಕರ್ತರು ಪ್ರಾಣಭಯದಿಂದ ಬದುಕುವ ವಾತಾವರಣವನ್ನು ಸಿದ್ದರಾಮಯ್ಯ ಸರಕಾರ ನಿರ್ಮಿಸಿತ್ತು. ಹಿಂದೂ ವಿರೋಧಿ ಸಮಾಜಘಾತುಕ ಶಕ್ತಿಗಳಿಗೆ ಬೆಂಬಲ ನೀಡಿ ಈ ಸರಕಾರ ಸಂಘಪರಿವಾರದ ಹಲವಾರು ಕಾರ್ಯಕರ್ತರ ಸಾವಿಗೆ ನೇರ ಕಾರಣವಾಗಿತ್ತು. ನಮ್ಮ ನೂರಾರು ಕಾರ್ಯಕರ್ತರನ್ನು ಸಿದ್ದರಾಮಯ್ಯ ಸರಕಾರ ವಿನಾ ಕಾರಣ ಕೇಸು ಜಡಿದು ಜೈಲಿಗಟ್ಟಿತು. ಹಿಂದೂಪರವಾಗಿ ಮಾತನಾಡುವುದೇ ಅಪರಾಧ ಎಂಬಂತೆ ಈ ದುಷ್ಟ ಸರಕಾರ ವರ್ತಿಸಿತ್ತು. ಆದರೆ ಕೊನೆಗೂ ಆ ಕರಾಳ ಅದ್ಯಾಯ ಕೊನೆಗೊಂಡಿದೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದ ಗದ್ದುಗೆ ಏರಲಿದ್ದು,ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಲಿದ್ದಾರೆ. ಹಿಂದೂ ಕಾರ್ಯಕರ್ತರ ಮೇಲೆ ನಡೆದ ದೌರ್ಜನ್ಯ ದಬ್ಬಾಳಿಕೆಗಳಿಗೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ತಕ್ಕ ಬೆಲೆ ತೆರಲಿದೆ. ಈ ಅಭೂತಪೂರ್ವ ಗೆಲುವು ಕೋಮುದ್ವೇಷ ಮತ್ತು ಓಲೈಕೆಯ ರಾಜಕಾರಣಕ್ಕೆ ಬಲಿಯಾದ ಹಿಂದೂ ಕಾರ್ಯಕರ್ತರಿಗೆ ಅರ್ಪಣೆಯಾಗಬೇಕು ಎಂದು ಅವರು ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


Spread the love