ಮೈಸೂರು ವ್ಯಾಪ್ತಿಯಲ್ಲಿ ಆತಂಕ ಸೃಷ್ಟಿಸಿದ ಹುಲಿ

Spread the love

ಮೈಸೂರು ವ್ಯಾಪ್ತಿಯಲ್ಲಿ ಆತಂಕ ಸೃಷ್ಟಿಸಿದ ಹುಲಿ

ಮೈಸೂರು: ಜಿಲ್ಲೆಯ ಬಂಡೀಪುರ ಹಾಗೂ ನಗರಹೊಳೆ ಕಾಡಂಚಿನ ಭಾಗದಲ್ಲಿ ಹುಲಿ ಉಪಟಳ ಹೆಚ್ಚಾಗಿರುವ ಬೆನ್ನಲ್ಲೆ ನಗರದ ಸಮೀಪದ ಗ್ರಾಮಗಳಲ್ಲೇ ಹುಲಿ ಕಾಣಿಸಿಕೊಂಡಿದ್ದು, ಸಾರ್ವಜನಿಕರಲ್ಲಿ ಭಯವನ್ನುಂಟು ಮಾಡಿದೆ

ತಾಲೂಕಿನ ಚಿಕ್ಕಕಾನ್ಯ, ದೊಡ್ಡಕಾನ್ಯ, ಬ್ಯಾತಹಳ್ಳಿ, ಸಿಂಧುವಳ್ಳಿ ಭಾಗಗಳಲ್ಲಿ ಸ್ಥಳೀಯರಿಗೆ ಹುಲಿ ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ದೊರೆತಿದ್ದು, ಈ ಸಂಬಂಧ ಅರಣ್ಯ ಇಲಾಖೆ ಹುಲಿ ಸೆರೆ ಕಾರ್ಯಾಚರಣೆ ಆರಂಭಿಸಿದೆ. ಸೋಮವಾರ ಮತ್ತು ಬುಧವಾರದಂದು ಮೈಸೂರು ತಾಲೂಕಿನ ಕೆಲ ಗ್ರಾಮಗಳಲ್ಲಿ ಹುಲಿ ಕಾಣಿಸಿಕೊಂಡಿರುವುದಾಗಿ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ರಸ್ತೆ ಬದಿಯಲ್ಲಿ ಹುಲಿ ತಿರುಗಾಡುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಅರಣ್ಯ ಸಂರಕ್ಷಣಾಧಿಕಾರಿ ಡಾ.ಮಾಲತಿ ಪ್ರಿಯಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎಸ್.ಬಸವರಾಜು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್.ಲಕ್ಷ್ಮಿಕಾಂತ, ವಲಯ ಅರಣ್ಯಾಧಿಕಾರಿ ಕೆ.ಸುರೇಂದ್ರ ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಹುಲಿ ಕಾಣಿಸಿಕೊಂಡಿರುವ ತಾಲೂಕಿನ ಚಿಕ್ಕಕಾನ್ಯ, ದೊಡ್ಡಕಾನ್ಯ, ಬ್ಯಾತಹಳ್ಳಿ, ಸಿಂಧುವಳ್ಳಿ ಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಹುಲಿಯ ಹೆಜ್ಜೆಗುರುತು ಕೂಡ ಪತ್ತೆಯಾಗಿವೆ.

ಸದ್ಯ ಹುಲಿಯನ್ನು ಸುರಕ್ಷಿತವಾಗಿ ಸೆರೆ ಹಿಡಿಯಲು ವಿಶೇಷ ತಂಡ ರಚಿಸಲಾಗಿದ್ದು, ವಿವಿಧ ಬಗೆಯ ಒಟ್ಟು 35ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅಲ್ಲದೆ, ತುಮಕೂರು ಮಾದರಿಯ ಹುಲಿ ಹಿಡಿಯುವ 3 ಬೋನುಗಳನ್ನು ಅಳವಡಿಸಲಾಗಿದೆ. ಹುಲಿಯ ಚಲನ-ವಲನಗಳನ್ನು ಗಮನಿಸಲು ಹುಲಿ ಕಾಣಿಸಿಕೊಂಡಿರುವ ಗ್ರಾಮಗಳ ಸುತ್ತಮುತ್ತ ಡ್ರೋನ್ ಕ್ಯಾಮೆರಾ ಮೂಲಕ ಪರೀಶಿಲನೆಯೂ ನಡೆಯುತ್ತಿದೆ. ಹುಲಿ ಕಾಣಿಸಿಕೊಂಡಿರುವ ಮೈಸೂರು ವಲಯದ ವ್ಯಾಪ್ತಿಯಯಲ್ಲಿ ವನ್ಯಜೀವಿ ಮುಂಜಾಗೃತಾ ಎಚ್ಚರಿಕೆ ಸಂದೇಶ ರವಾನಿಸುವ ವ್ಯವಸ್ಥೆ ಮಾಡಲಾಗಿದೆ.


Spread the love