ಮೋಟಾರು ವಾಹನ ತಿದ್ದುಪಡಿ ಕಾಯಿದೆಯ ವಿರುದ್ದ ಚಾಲಕರಿಂದ ಸಂಯುಕ್ತ ಪ್ರತಿಭಟನಾ ಪ್ರದರ್ಶನ

Spread the love

ಮೋಟಾರು ವಾಹನ ತಿದ್ದುಪಡಿ ಕಾಯಿದೆಯ ವಿರುದ್ದ ಚಾಲಕರಿಂದ ಸಂಯುಕ್ತ ಪ್ರತಿಭಟನಾ ಪ್ರದರ್ಶನ

ಚಾಲಕ ವರ್ಗಕ್ಕೆ ಮಾರಕವಾದ, ಜನಸಾಮಾನ್ಯರನ್ನು ಸುಲಿಗೆ ಮಾಡುವ ಮೋಟಾರು ವಾಹನ ಕಾಯಿದೆ ತಿದ್ದುಪಡಿ ವಿಧೇಯಕವನ್ನು ವಿರೋಧಿಸಿ ಹಾಗೂ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಇತರ ಪ್ರಮುಖ ರಸ್ತೆಗಳ ಅವ್ಯವಸ್ಥೆ,ಅಕ್ರಮ ಟೋಲ್ ಸಂಗ್ರಹ ಹಾಗೂ ಪಾರ್ಕಿಂಗ್ ಅವ್ಯವಸ್ಥೆಯನ್ನು ವಿರೋಧಿಸಿ ಸಮಾನ ಮನಸ್ಕ ಚಾಲಕರ ಹಾಗೂ ಸಾರ್ವಜನಿಕ ಸಂಘಟನೆಗಳ ಸಹಭಾಗಿತ್ವದಲ್ಲಿ  ದ.ಕ.ಜಿಲ್ಲಾಧಿಕಾರಿಗಳ ಕಚೇರಿಯೆದುರು ಬ್ರಹತ್ ಪ್ರತಿಭಟನಾ ಪ್ರದರ್ಶನ ಜರುಗಿತು.

ನಗರದ ಮಿನಿ ವಿಧಾನಸೌಧದ ಬಳಿಯಿಂದ ಮೆರವಣಿಗೆಯಲ್ಲಿ ಹೊರಟ ನೂರಾರು ಸಂಖ್ಯೆಯ ವಿವಿಧ ವಿಭಾಗದ ಚಾಲಕರು ಹಾಗೂ ಸಾರ್ವಜನಿಕರು, *ಚಾಲಕ ವರ್ಗದ ಬದುಕನ್ನು ನಾಶ ಮಾಡಿದ ಮಾರಕ ಕಾಯಿದೆ ಬೇಡವೇ ಬೇಡ,ಮಾಡದ ತಪ್ಪಿಗೆ ಜೈಲಿಗೆ ಕಳುಹಿಸುವ ಕೇಂದ್ರದ ನೀತಿಗೆ ಧಿಕ್ಕಾರ,ಕಳಪೆ ರಸ್ತೆಗಳನ್ನು ಮುಂದಿಟ್ಟು ಅಕ್ರಮ ಟೋಲ್ ಸಂಗ್ರಹಿಸುವ ದರೋಡೆ ನೀತಿಗೆ ಧಿಕ್ಕಾರ* ಎಂಬಿತ್ಯಾದಿ ಘೋಷಣೆಗಳನ್ನು ಕೂಗುತ್ತಾ ಸಾಗಿದರು.

ಬಳಿಕ ಜಿಲ್ಲಾಧಿಕಾರಿಗಳ ಕಚೇರಿಯೆದುರು ಜಮಾವಣೆಗೊಂಡ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ದ.ಕ.ಜಿಲ್ಲಾ ಟ್ಯಾಕ್ಸಿಮೆನ್ ಎಸೋಶಿಯೇಷನ್ ನ ಜಿಲ್ಲಾಧ್ಯಕ್ಷರಾದ ದಿನೇಶ್ ಕುಂಪಲರವರು, *ಕೇಂದ್ರ ಸರಕಾರವು ಸೆಪ್ಟೆಂಬರ್ 1 ರಿಂದ ಜಾರಿಗೆ ತಂದಿರುವ ಮೋಟಾರು ವಾಹನ ತಿದ್ದುಪಡಿ ಕಾಯಿದೆ ಯಿಂದಾಗಿ ದೇಶಾದ್ಯಂತ ಚಾಲಕರು ತೀವ್ರ ಆಕ್ರೋಶಿತರಾಗಿದ್ದು,ದುಬಾರಿ ದಂಡವನ್ನು ಸಹಿಸಲು ಅಸಾಧ್ಯವಾಗಿದೆ.ವಿಪರೀತ ದಂಡದಿಂದಾಗಿ ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಎಲ್ಲವನ್ನು ಸರಿಪಡಿಸಲು ಹೊರಟಿರುವುದು ತೀರಾ ಭ್ರಮೆಯಾಗಿದೆ.ಪ್ರಸ್ತುತ ಎಲ್ಲಾ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು ಅದನ್ನು ಸರಿಪಡಿಸಲು ಸರಕಾರವಾಗಲೀ,ಜನಪ್ರತಿನಿಧಿಗಳಾಗಲೀ ತಯಾರಿಲ್ಲ, ಬದಲಾಗಿ ದುಬಾರಿ ದಂಡವನ್ನು ಮುಂದಿಟ್ಟು ಬಡಪಾಯಿ ಚಾಲಕರನ್ನು ಹಗಲು ದರೋಡೆ ನಡೆಸುತ್ತಿರುವುದು ತೀರಾ ಖಂಡನೀಯವಾಗಿದೆ* ಎಂದು ಹೇಳಿದರು.

ಕಾರ್ಮಿಕ ಪರಿಷತ್ ನ ಜಿಲ್ಲಾಧ್ಯಕ್ಷರೂ,ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜರವರು ಮಾತನಾಡುತ್ತಾ, *ಚಾಲಕರನ್ನು ದಮನಿಸಲು ಹೊರಟ ಕೇಂದ್ರ ಸರಕಾರವು ಜಾರಿಗೆ ತಂದಿರುವ ಮಾರಕ ಕಾಯಿದೆಯು ದೇಶದ ದುಡಿಯುವ ವರ್ಗದ ಮೇಲೆ ನಡೆಸಿರುವ ತೀವ್ರ ಧಾಳಿಯಾಗಿದೆ.ಯಾವುದೇ ಕಾರಣಕ್ಕೂ ಇಂತಹ ಅಮಾನವೀಯ,ಕ್ರೂರ ಕಾಯಿದೆಗಳನ್ನು ಒಪ್ಪಲು ಸಾದ್ಯವಿಲ್ಲ.ಸಂಘಟಿತ ಹೋರಾಟವೊಂದೇ ಇದಕ್ಕೆ ಉತ್ತರವಾಗಬೇಕು* ಎಂದು ಹೇಳಿದರು.

  ಮುನಿರ್ ಕಾಟಿಪಳ್ಳ ರವರು ಮಾತನಾಡುತ್ತಾ, *ಜಿಲ್ಲೆಯನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಗಳು ಸಂಪೂರ್ಣವಾಗಿ ಹದಗೆಟ್ಟಿದೆ.ಕನಿಷ್ಠ ಹೊಂಡಗುಂಡಿಗಳನ್ನು ಮುಚ್ಚಲು ಕೂಡ ಹಣ ಬಿಡುಗಡೆಯಾಗದೆ, ರಸ್ತೆಗಳೆಲ್ಲ ಗುಂಡಿಗಳಿಂದಲೇ ತುಂಬಿದೆ‌.ಪಂಪುವೆಲ್ ಮೇಲ್ಸೇತುವೆಯ ಕಾಮಗಾರಿಯನ್ನು ಮುಗಿಸಲು ನೀಡಿದ ಅಂತಿಮ ಗಡುವು ಹೊಸ ಇತಿಹಾಸವನ್ನೇ ಸ್ರಷ್ಟಿಸಿದೆ.ಜಿಲ್ಲೆಯ ಕೆಲವು ರಸ್ತೆಗಳನ್ನು ಮೇಲ್ದರ್ಜೆಗೇರಿಸುವುದಾಗಿ ವಾಗ್ದಾನ ನೀಡಿದ ಸಂಸದ ನಳೀನ್ ಕುಮಾರ್ ಕಟೀಲ್ ರವರು, ಸ್ವತಃ ತಾನು ಮೇಲ್ದರ್ಜೆಗೇರಿದರೆ ಹೊರತು ರಸ್ತೆಗಳನ್ನು ಮೇಲ್ದರ್ಜೆಗೇರಿಸಿಲ್ಲ* ಎಂದು ಕಟುವಾಗಿ ಟೀಕಿಸಿದರು.

ಮೋಟಾರು ವಾಹನ ತಿದ್ದುಪಡಿ ಕಾಯಿದೆ ವಿರೋಧಿ ಹೋರಾಟ ಸಮಿತಿಯ ಪ್ರಧಾನ ಸಂಚಾಲಕರಾದ ಸುನಿಲ್ ಕುಮಾರ್ ಬಜಾಲ್ ರವರು ಕಾಯಿದೆಯ ಹಿಂದಿರುವ ಗುಪ್ತ ಅಜೆಂಡಾವನ್ನು ಎಳೆಎಳೆಯಾಗಿ ವಿವರಿಸುತ್ತಾ, *ಕೇವಲ ದಂಡವನ್ನೇ ಪ್ರಧಾನವಾಗಿಟ್ಟುಕೊಂಡು ಒಂದು ಕಡೆ ಜನರಲ್ಲಿ ಗೊಂದಲವನ್ನು ಸ್ರಷ್ಠಿಸಿ,ಮತ್ತೊಂದು ಕಡೆ ಸಮರ್ಥನೆ ಮಾಡುವ ಕೇಂದ್ರ ಸರಕಾರವು ಅಂತಿಮವಾಗಿ ಇಡೀ ದೇಶದ ಸಾರಿಗೆ ರಂಗವನ್ನೇ ಕಾರ್ಪೊರೇಟೀಕರಣಗೊಳಿಸುವ ಮೂಲಕ ಚಾಲಕ ಸಮುದಾಯದ ಬದುಕನ್ನೇ ನಿರ್ನಾಮ ಮಾಡಲು ಹೊರಟಿದೆ* ಎಂದು ಆತಂಕ ವ್ಯಕ್ತಪಡಿಸಿದರು.

ಕರಾವಳಿ ಶ್ರಮಿಕ ಸಂಘದ ಗೌರವಾಧ್ಯಕ್ಷರಾದ ಎಂ.ಜಿ.ಹೆಗ್ಡೆ ಯವರು ಚಾಲಕ ಸಮುದಾಯದ ಸಂಕಷ್ಟವನ್ನು ವಿವರಿಸುತ್ತಾ , *ಅಕ್ಷರಾಭ್ಯಾಸ ಇಲ್ಲದವರು ಈ ದೇಶದ ಜನಪ್ರತಿನಿದಿಗಳಾಗಬಹುದು,ಮಂತ್ರಿ ಮಾಗಧರಾಗಬಹುದು ಆದರೆ ಬಡಪಾಯಿ ಚಾಲಕ ತನ್ನ ಚಾಲಕ ವ್ರತ್ತಿ ಮಾಡಬೇಕಾದರೆ ಶಿಕ್ಷಣ ಕಡ್ಡಾಯಗೊಳಿಸಿರುವುದು ಯಾವ ನ್ಯಾಯ ?* ಎಂದು ಹೇಳಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ದ.ಕ‌.ಜಿಲ್ಲಾ ಆನ್ ಲೈನ್ ಟ್ಯಾಕ್ಸಿ ಚಾಲಕರ ಸಂಘದ ಗೌರವಾಧ್ಯಕ್ಷರಾದ ಬಿ.ಕೆ.ಇಮ್ತಿಯಾಜ್,INTUC ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿತ್ತರಂಜನ್ ಶೆಟ್ಟಿ,AITUC ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ವಿ.ರಾವ್,ಸಾಮಾಜಿಕ ಹೋರಾಟಗಾರರಾದ ಆಲಿ ಹಸನ್ ರವರು ಮಾತನಾಡುತ್ತಾ, *ಕಾಯಿದೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಹಾಗೂ ಜಿಲ್ಲೆಯ ರಸ್ತೆಗಳ,ಅಕ್ರಮ ಟೋಲ್,ಪಾರ್ಕಿಂಗ್ ಅವ್ಯವಸ್ಥೆಗಳ ವಿರುದ್ದ ಮುಂದಿನ ದಿನಗಳಲ್ಲಿ ಬಲಿಷ್ಠವಾದ ಜನಾಂದೋಲನವನ್ನು ರೂಪಿಸಿ ಐಕ್ಯ ಹೋರಾಟವನ್ನು ರೂಪಿಸಬೇಕೆಂದು* ಕರೆ ನೀಡಿದರು.

ಪ್ರತಿಭಟನಾ ಪ್ರದರ್ಶನದಲ್ಲಿ *CITU ಜಿಲ್ಲಾ ನಾಯಕರಾದ ಯೋಗೀಶ್ ಜಪ್ಪಿನಮೊಗರು, ಜಯಂತ ನಾಯಕ್,ಪದ್ಮಾವತಿ ಶೆಟ್ಟಿ, ದಿನೇಶ್ ಶೆಟ್ಟಿ,ಯುವ ಜಾತ್ಯಾತೀತ ಜನತಾದಳದ ಜಿಲ್ಲಾಧ್ಯಕ್ಷರಾದ ಅಕ್ಷಿತ್ ಸುವರ್ಣ,DYFI ನಾಯಕರಾದ ನವೀನ್ ಕೊಂಚಾಡಿ,ನಿತಿನ್ ಬಂಗೇರ,ರಫೀಕ್ ಹರೇಕಳ, INTUC ನಾಯಕರಾದ ವಾಲ್ಟರ್ ಪಿಂಟೋ,ಉಮೇಶ್ ಕೋಟ್ಯಾನ್,ಮಲ್ಲಣ್ಣ, ಮೊಯಿದಿನ್ ಭಾವ,ಸ್ಟೀವನ್ ಡಿಸೋಜ, ಉಮೇಶ್ ದೇವಾಡಿಗ,ಕರಾವಳಿ ಶ್ರಮಿಕ ಸಂಘದ ಅಧ್ಯಕ್ಷರಾದ ರೋಹಿತ್ ಕೋಟ್ಯಾನ್,AITUC ನಾಯಕರಾದ ವಿ.ಕುಕ್ಯಾನ್, ಕರುಣಾಕರ್, ಪ್ರವೀಣ್ ಕುಮಾರ್,ಟ್ಯಾಕ್ಸಿ ಚಾಲಕರ ಸಂಘಟನೆಯ ನಾಯಕರಾದ ಆನಂದ ಕೆ,ಪ್ರಮೋದ್ ಉಳ್ಳಾಲ,ಕ್ಯಾನಿ ಡಿಸೋಜ, ಆನ್ ಲೈನ್ ಟ್ಯಾಕ್ಸಿ ಚಾಲಕರ ಸಂಘದ ಸತ್ಯೇಂದ್ರ ಶೆಟ್ಟಿ, ಮುನಾವರ್ ಕುತ್ತಾರ್, ಅಟೋರಿಕ್ಷಾ ಚಾಲಕರ ಸಂಘಟನೆಯ ನಾಯಕರಾದ ಕ್ರಷ್ಣಪ್ಪ ಗೌಡ,ಸ್ಟ್ಯಾನ್ಲಿ ನೊರೋನ್ಹಾ,ಅನ್ಸಾರ್,ಶೇಖರ್ ದೇರಳಕಟ್ಟೆ,ವಿಶ್ವನಾಥ, ಶಾಲಾ ಮಕ್ಕಳ ವಾಹನ ಚಾಲಕರಾದ ರೆಹಮಾನ್ ಖಾನ್, ಸತೀಶ್ ಅಡಪ,ನರೇಂದ್ರ, ಮುನ್ನಾ ಪದವಿನಂಗಡಿ,ಸಂಕಪ್ಪ, ಮಾನವ ಸಮಾನತಾ ಮಂಚ್ ನ ಮುಖಂಡರಾದ ವಸಂತ ಟೈಲರ್,ರೋಶನ್ ಪತ್ರಾವೋ, ರೈತ ಸಂಘದ ನಾಯಕರಾದ ಕ್ರಷ್ಣಪ್ಪ ಸಾಲಿಯಾನ್,ಗೂಡ್ಸ್ ಟೆಂಪೋ ಚಾಲಕರ ಸಂಘದ ನಾಯಕರಾದ ಜೋನ್ ಡಿಸೋಜ, ಪ್ರಕಾಶ್ ಡಿಸೋಜ, ನೀಲಯ್ಯ,ರಾಕೇಶ್,ರಫೀಕ್, ಸಾಮಾಜಿಕ ಹೋರಾಟಗಾರರಾದ ಜೆರಾಲ್ಡ್ ಟವರ್,ಸಿಪ್ರಿಯನ್,ಅಶ್ರಫ್,ಖಾಲಿದ್ ಉಜಿರೆ,ಹುಸೇನ್ ಕಾಟಿಪಳ್ಳ, ಟಿ.ಎನ್, ರಮೇಶ್* ಮುಂತಾದವರು ಭಾಗವಹಿಸಿದ್ದರು.


Spread the love