ಮೋಸದ ವರ್ಗಾವಣೆಗೆ ಬಲಿಯಾದರೇ ಎಸ್ಪಿ ಲಕ್ಷ್ಮಣ್ ನಿಂಬರಗಿ?

Spread the love

ಮೋಸದ ವರ್ಗಾವಣೆಗೆ ಬಲಿಯಾದರೇ ಎಸ್ಪಿ ಲಕ್ಷ್ಮಣ್ ನಿಂಬರಗಿ?

ಉಡುಪಿ: ಅದು 2018 ಜನವರಿ 1. ಉಡುಪಿ ಜಿಲ್ಲೆಗೆ ನೂತನ ಪೋಲೀಸ್ ವರಿಷ್ಠಾಧಿಕಾರಿಯಾಗಿ ಉತ್ತರ ಕರ್ನಾಟಕದ ಲಕ್ಷ್ಮಣ ಬಿ. ನಿಂಬರಗಿ ಅವರು ಅಧಿಕಾರ ಸ್ವೀಕರಿಸಿದ ದಿನ. ಆ ಬಳಿಕದ್ದು ಎಲ್ಲವೂ ದಾಖಲಾರ್ಹ ಚರಿತ್ರೆ. ಸುಮಾರು 14ತಿಂಗಳ ಅವರ ಅಧಿಕಾರವಧಿಯಲ್ಲಿ ಪ್ರತೀ ತಿಂಗಳು ಒಂದೊಂದು ಪ್ರಕರಣಗಳಿಂದಲೇ ಗುರುತಿಸಬಹುದಾದಷ್ಟು ಪ್ರಕರಣಗಳು. ಒಂದಕ್ಕಿಂತ ಒಂದು ಭಿನ್ನ. ಪ್ರತಿಯೊಂದರಲ್ಲೂ ಇದ್ದ ಸವಾಲನ್ನು ಬೇಧಿಸಿ, ಯಶಸ್ಸನ್ನು ಸಾಧಿಸಿ, ಉಡುಪಿ ನೆನಪಿಡುವಂತಹ ಸೇವೆ ಸಲ್ಲಿಸಿದ ದಕ್ಷ, ಪ್ರಾಮಾಣಿಕ ಅಧಿಕಾರಿಗೆ ಈಗ ಅಕ್ಷರಶಃ ಮೋಸದ ವರ್ಗಾವಣೆಯಾಗಿದೆ ಎನ್ನುವುದು ತಡವಾಗಿ ಬೆಳಕಿಗೆ ಬರುತ್ತಿದೆ.

ಮೊದಲ ಸಲ ಎಸ್ಪಿ ಆಗಿ ಉಡುಪಿ ಜಿಲ್ಲೆಗೆ ಬಂದ ಲಕ್ಷ್ಮಣ ನಿಂಬರಗಿ ಅವರ ಅಲ್ಪಾವಧಿಯಲ್ಲಿಯೇ ಸಹದ್ಯೋಗಿಗಳ ಹೃದಯ ಗೆದ್ದಿದ್ದರು. ಜನರ ಪ್ರೀತಿ ಗಳಿಸಿದ್ದರು. ಅದಕ್ಕೆ ಕಾರಣ ಅವರ ಪ್ರಾಮಾಣಿಕತೆ, ದಕ್ಷತೆ ಮತ್ತು ಸ್ನೇಹಶೀಲತೆ.

ಲಕ್ಷ್ಮಣ ನಿಂಬರಗಿ ಉಡುಪಿ ಜಿಲ್ಲೆಯಿಂದ ವರ್ಗಾವಣೆಯಾಗುತ್ತಾರೆ ಎನ್ನುವ ಸುದ್ದಿ ತಿಳಿಯುತ್ತಲೇ ಮೊದಲು ದುಃಖಿಸಿದವರು ಉಡುಪಿ ಜಿಲ್ಲೆಯ ಪೊಲೀಸರು. ತಮ್ಮ ತಂಡದ ನಾಯಕನನ್ನು ಜಿಲ್ಲೆಯಲ್ಲಿಯೇ ಮತ್ತಷ್ಟು ದಿನ ಉಳಿಸಿಕೊಳ್ಳಬೇಕು ಎಂದು ಸತತವಾಗಿ ಎಲ್ಲಾ ಹಂತದ ರಾಜಕೀಯ ಸಾಮಾಜಿಕ ನಾಯಕರ ಬಳಿ ಅಂಗಲಾಚಿದರೂ ಕೂಡ ಯಾವುದೇ ರೀತಿಯ ಸಕಾರಾತ್ಮಕ ಫಲಿತಾಂಶ ಸಿಗದೆ ನಿರಾಶೆಗೊಂಡಿದ್ದರು.

ಫೆಬ್ರವರಿ 23 ರಂದು ಶನಿವಾರ ಜಿಲ್ಲೆಗೆ ನೂತನ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಅವರು ಅಧಿಕಾರ ಸ್ವೀಕರಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಆಗಮಿಸುತ್ತಿದ್ದರೆ ಅಲ್ಲಿ ಪೊಲೀಸ್ ಸಿಬಂದಿಗಳ ಮುಖದಲ್ಲಿ ಯಾವುದೇ ರೀತಿಯ ಸಂಭ್ರಮವಿರಲಿಲ್ಲ, ಬದಲಾಗಿ ಬೇಸರದ ಛಾಯೆ ಪ್ರತಿಯೊಬ್ಬರ ಮುಖದ ಮೇಲಿತ್ತು. ತನ್ನ ಕೆಳಗಿನ ಅಧಿಕಾರಿಗಳು ಬೇಸರದಲ್ಲಿದ್ದರೂ ಕೂಡ ಒರ್ವ ನಿಷ್ಟಾವಂತ ಅಧಿಕಾರಿಯಾಗಿ ಹೊಸ ಎಸ್ಪಿಯನ್ನು ನಗುಮೊಗದಿಂದಲೇ ಸ್ವಾಗತಿಸಿದ ನಿಂಬರಗಿ ನಿಶಾ ಜೇಮ್ಸ್ ಅವರಿಗೆ ಅಧಿಕಾರವನ್ನು ಹಸ್ತಾಂತರಿಸಿದರು. ಅಲ್ಲದೆ ಉಡುಪಿಯಲ್ಲಿ ಕಳೆದ ತನ್ನ 14 ತಿಂಗಳುಗಳ ಸದಾ ನೆನಪಿನಲ್ಲಿ ಉಳಿಯಲಿದೆ. ತನ್ನ ಅವಧಿಯಲ್ಲಿ ತಾನೇನಾದರೂ ಹಲವಾರು ಕಷ್ಟದ, ಸವಾಲಿನ ಪ್ರಕರಣಗಳನ್ನು ಭೇಧಿಸಿ ಕೊನೆಗೊಳಿಸಿದ್ದರೆ ಅದಕ್ಕೆ ಪ್ರಮುಖ ಕಾರಣ ನನ್ನ ಸಹ ಅಧಿಕಾರಿಗಳು ಎಂದು ಹೇಳುವ ಮೂಲಕ ತಾನು ಕೇವಲ ನಾಯಕನಾಗಿ ಜಿಲ್ಲೆಯ ಕಾನೂನು ಸುವ್ಯವಸ್ಥೆಯನ್ನು ನೋಡಿದ್ದೇನೆ ಹೊರತು ಈ ಎಲ್ಲಾ ಶ್ರಮದ ಹಿಂದಿರುವುದು ನನ್ನ ಸಹ ಅಧಿಕಾರಿಗಳು ಎಂದು ಸಿಬಂದಿಗಳನ್ನು ಹೊಗಳುವುದನ್ನು ಮರೆಯಲಿಲ್ಲ.

ಹೌದು ನಿಂಬರಗಿ ಅವರ ವರ್ಗಾವಣೆಯಾಗಿದ್ದು ಸ್ವತಃ ಗೃಹ ಸಚಿವರಿಗೆ ಗೊತ್ತಿಲ್ಲ, ಇಲಾಖಾ ಉನ್ನತಾಧಿಕಾರಿಗಳಿಗೇ ತಿಳಿದಿಲ್ಲ ಎಂದಾದರೆ ಇದು ನ್ಯಾಯಯುತ ವರ್ಗಾವಣೆಯಲ್ಲ, ಜೊತೆಗೆ ರಾಜಕೀಯ ಪ್ರೇರಿತ ವರ್ಗಾವಣೆಯೂ ಅಲ್ಲ ಎಂದು ರಾಜಕೀಯದವರು, ಸಾರ್ವಜನಿಕರು ಮಾತಾಡಿಕೊಳ್ಳುತ್ತಿದ್ದಾರೆ.

ಎಸ್ಪಿಯಾಗಿ ಲಕ್ಷ್ಮಣ ನಿಂಬರಗಿ ಅವರು ಅಧಿಕಾರ ಸ್ವೀಕರಿಸಿದ ಮೂರನೇ ದಿನಕ್ಕೆ ಸೂಕ್ಷ್ಮ ಪ್ರದೇಶವಾಗಿರುವ ಗಂಗೊಳ್ಳಿಯಲ್ಲಿ ಬೈಕ್ ಸುಟ್ಟ ಪ್ರಕರಣ ನಡೆಯಿತು. ಅದಾದ ನಂತರ ಮುಖ್ಯಮಂತ್ರಿ ಅಲ್ಲೇ ಸಮೀಪ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದರು. ಆ ದಿನವೂ ಗಂಗೊಳ್ಳಿಯಲ್ಲಿ ಇನ್ನೊಂದು ಬೈಕ್ ಸುಟ್ಟು ಹಾಕಲಾಯಿತು. ನಂತರ ಮೂರನೇ ಬೈಕ್ಗೆ ಬೆಂಕಿ ಹಚ್ಚುವಾಗ ಆರೋಪಿ ಪೆÇಲೀಸ್ ಕೈಗೆ ಸಿಗುತ್ತಾನೆ. ಬಳಿಕ ಜೂನ್ ತಿಂಗಳಲ್ಲಿ ಜೋಕಟ್ಟೆಯ ಗೋಕಳ್ಳರು ಪೆರ್ಡೂರಿನಲ್ಲಿ ಗೋಕಳ್ಳತನ ಮಾಡಿ ಸಾಗಿಸುವಾಗ ಸ್ಥಳೀಯ ಯುವಕರ ಕೈಗೆ ಸಿಕ್ಕಿ ಅಲ್ಲೊಂದಷ್ಟು ಗಲಾಟೆ ಗದ್ದಲಗಳಾಗಿ ಕೊನೆಗೆ ಪೆÇಲೀಸ್ ಠಾಣೆಗೆ ಕರೆತರಲಾಯಿತು. ಘಟನೆಯಲ್ಲಿ ಹಸನಬ್ಬ ಸಾವನ್ನಪ್ಪುತ್ತಾರೆ. ಅದೇ ರೀತಿ ನವೆಂಬರ್ನಲ್ಲಿ ಮುದ್ರಾಡಿಯಲ್ಲಿ ಮನೆಯೊಂದರ ಕೊಟ್ಟಿಗೆಯಿಂದ ಆರು ದನಗಳ ಕಳ್ಳತನ ಪ್ರಕರಣ, ಮೊನ್ನೆ ಜನವರಿಯಲ್ಲಿ ಶಿರೂರಿನ ಮಸೀದಿಯಲ್ಲಿ ಹಂದಿ ಮಾಂಸ ಎಸೆದ ಪ್ರಕರಣ.. ಇವೆಲ್ಲ ಪ್ರಕರಣಗಳಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ ಜಿಲ್ಲೆಯಲ್ಲಿ ಕೋಮ ಸಂಘರ್ಷ ಉಂಟಾಗುತ್ತಿತ್ತು. ಆದರೆ ಎಲ್ಲ ಪ್ರಕರಣಗಳನ್ನು ಅಧಿಕಾರಿ-ಸಿಬ್ಬಂದಿಯ ಸಹಕಾರದಲ್ಲಿ ನಾಜೂಕಾಗಿ ನಿರ್ವಹಿಸಿದ ಯಶಸ್ಸು ನಿಂಬರಗಿ ಅವರಿಗೆ ಸಲ್ಲುತ್ತದೆ.

ಜಿಲ್ಲೆಯಲ್ಲಿ ದೀರ್ಘಕಾಲ ತಲೆದೋರಿದ್ದ ಮರಳು, ಟೋಲ್ ಸಮಸ್ಯೆಯ ವಿರುದ್ಧ ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿ, ನಿರಂತರ ಪ್ರತಿಭಟನೆಗಳನ್ನು ನಡೆಸುತ್ತಿದ್ದರು. ಜಿಲ್ಲಾಧಿಕಾರಿ ಕಚೇರಿ, ಹೆಜಮಾಡಿ ಮತ್ತು ಸಾಸ್ತಾನ ಟೋಲ್ ಗೇಟ್ಗಳಲ್ಲಿ ಆಗಾಗ ಮುತ್ತಿಗೆ ಪ್ರತಿಭಟನೆಗಳು ನಡೆದಾಗಲೂ ಸೇರಿದ್ದ ಅಷ್ಟೂ ಜನರನ್ನು ಸಮಾಧಾನ ಪಡಿಸಿ, ಶಾಂತಿ ಭಂಗವಾಗದಂತೆ ನೋಡಿಕೊಂಡದ್ದು ಇದೇ ಲಕ್ಷ್ಮಣ ನಿಂಬರಗಿ ಅವರ ತಂಡ. ಎರಡು ರಾಷ್ಟ್ರೀಯ ಹೆದ್ದಾರಿಗಳು 30ಸಾವಿರಕ್ಕೂ ಅಧಿಕ ಸಂಖ್ಯೆಯ ಮೀನುಗಾರರು 3-4 ತಾಸು ಸಂಪೂರ್ಣ ಬಂದ್ ಮಾಡಿದಾಗಲೂ ಯಾವ ಗದ್ದಲ, ಗೊಂದಲಗಳಾಗದೇ ಪೆÇಲೀಸ್ ಇಲಾಖೆಯ ಕಡೆ ಬೆಟ್ಟು ತೋರಿಸದಂತೆ ಮಾಡಿದ್ದು ನಿಂಬರಗಿ ಅವರ ಜಾಣ್ಮೆ. ಅಷ್ಟಮಠಗಳಲ್ಲಿ ಒಂದಾದ ಶ್ರೀರೂರು ಮಠದ ಶ್ರೀಲಕ್ಷ್ಮೀವರತೀರ್ಥ ಸ್ವಾಮೀಜಿ ಸಾವಿನ ಬಗ್ಗೆ ಎದ್ದಿದ್ದ ಅನುಮಾನಗಳು, ವಿವಾದದ ತನಿಖೆಯನ್ನು ಜಾಣ್ಮೆಯಿಂದ ಪೂರ್ಣಗೊಳಿಸಿದ್ದು ಎಸ್ಪಿ ಲಕ್ಷ್ಮಣ ನಿಂಬರಗಿ. ಶೀರೂರು ಶ್ರೀಗಳ ಸಾವು ಇಡೀ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. ಪೊಲೀಸ್ ಇಲಾಖೆಯ ಮೇಲೆ ತೀವ್ರ ಒತ್ತಡವೂ ಇತ್ತು. ಈ ಪ್ರಕರಣದಲ್ಲಿಯೂ ಶಾಂತಿ ಭಂಗವಾಗುವ ಎಲ್ಲ ಸಾಧ್ಯತೆಗಳಿದ್ದವು. ಸುಮಾರು ಎರಡು ತಿಂಗಳ ಕಾಲ ತಾಳ್ಮೆಯಿಂದ ತಮ್ಮ ಅಧಿಕಾರಿ-ಸಿಬ್ಬಂದಿ ಒತ್ತಡ ರಹಿತವಾಗಿ ವಿವಿಧ ಆಯಾಮಗಳಿಂದ ಪ್ರಕರಣ ತನಿಖೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದರು. ಅಂತಿಮವಾಗಿ ಸ್ವಾಮೀಜಿ ಅವರದ್ದು ಸಹಜ ಸಾವು ಎಂದು ದೃಢಪಟ್ಟಿತ್ತು.

ಕಳೆದ ವರ್ಷ ಸೆ. 10ರಂದು ಭಾರತ ಬಂದ್ ವೇಳೆ ನಿಷ್ಪಕ್ಷಪಾತವಾಗಿ ಲಕ್ಷ್ಮಣ ನಿಂಬರಗಿ ಲಾಠಿ ಬೀಸಿದ್ದರು. ಜಿಲ್ಲಾ ಪೊಲೀಸ್ ಕಚೇರಿ ಮತ್ತು ಎಸ್ಪಿ ನಿವಾಸದ ಸಮೀಪದಲ್ಲೇ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಹೊಡೆದಾಟ ನಡೆದಿತ್ತು. ಗುಂಪನ್ನು ಚದುರಿಸಿದ್ದರೂ ಎರಡು ಕಡೆಯಿಂದ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸುತ್ತಲೇ ಇದ್ದರು. ಎರಡೂ ತಂಡದವರು ಮೈಮೇಲೇರಿ ಬರುತ್ತಾರೆ ಎನ್ನುವ ಸೂಚನೆ ಸಿಕ್ಕಿದ ಎಸ್ಪಿ ನಿಂಬರಗಿ ತಮ್ಮ ತಂಡಕ್ಕೆ ಲಾಠಿ ಚಾರ್ಜ್ಗೆ ಆದೇಶ ನೀಡಿ ಸ್ವತಃ ತಾವೇ ಕೈಯಲ್ಲಿ ಲಾಠಿ ಹಿಡಿದು ಬೀಸಿದರು. ಕಾಂಗ್ರೆಸ್, ಬಿಜೆಪಿ ಎಂದು ಪಕ್ಷ ನೋಡದೇ ಎರಡೂ ಪಕ್ಷದವರಿಗೂ ಲಾಠಿ ರುಚಿ ತೋರಿಸಿದ್ದರು. ಪರಿಸ್ಥಿತಿಯನ್ನು ಕಾನೂನು ಪರಿಧಿಯಲ್ಲೇ ನಿಯಂತ್ರಣಕ್ಕೆ ತಂದಿದ್ದರು.

2018 ರ ಡಿಸೆಂಬರ್ನಲ್ಲಿ ಮಲ್ಪೆಯ ಸುವರ್ಣ ತ್ರಿಭುಜ ದೋಣಿ ಸಮುದ್ರದ ಮಧ್ಯೆ ನಾಪತ್ತೆಯಾದಾಗ ಅದರ ಹುಡುಕಾಟಕ್ಕೆ ಶ್ರಮಪಟ್ಟಿದ್ದರು. ಪ್ರಕರಣ ಬೆಳಕಿಗೆ ಬರುತ್ತಲೇ ಆರು ತಂಡಗಳನ್ನು ರಚಿಸಿ ಉತ್ತರ ಕನ್ನಡ, ಗೋವಾ, ಮಹಾರಾಷ್ಟ್ರ, ಕೇರಳ ಎಂದು ಎಲ್ಲ ಕಡೆಗಳಲ್ಲಿ ತನಿಖೆ ನಡೆಸಿದರು. ಮೀನುಗಾರರನ್ನೂ ತನಿಖಾ ತಂಡದಲ್ಲಿ ಸೇರಿಸಿಕೊಂಡರು. ಕಾರ್ಯಾಚರಣೆ ನಡೆಸುತ್ತಿದ್ದ ಕೋಸ್ಟಲ್ ಗಾರ್ಡ್, ನೌಕಾಪಡೆ, ಕರಾವಳಿ ಪೆÇಲೀಸ್, ಗೋವಾ, ಮಹಾರಾಷ್ಟ್ರ ಸರಕಾರ, ಕೇಂದ್ರ ಸರಕಾರ ಹೀಗೆ ಎಲ್ಲರೊಂದಿಗೆ ಕೊಂಡಿಯಾದರು. ಅಣ್ಣನಂತೆ ಆ ದುಃಖಿತ ಮೀನುಗಾರರ ಜೊತೆ ನಿಂತು ಧೈರ್ಯ ಹೇಳಿದರು. ಇಲ್ಲೂ ಬಹು ಆಯಾಮಗಳಲ್ಲಿ ಪ್ರಕರಣದ ತನಿಖೆ ನಡೆಸಿ, ಅದರ ಆಧಾರದಲ್ಲಿ ಮೀನುಗಾರರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದರು. ಅಂತಿಮವಾಗಿ ದೋಣಿ ಸಮುದ್ರ ಮಧ್ಯೆ ಅವಘಡಕ್ಕೀಡಾಗಿರಬಹುದು ಎಂದು ಮೀನುಗಾರರು ಒಪ್ಪುವ ಹಂತಕ್ಕೆ ಬಂದರೂ ಪ್ರಬಲ ಸಾಕ್ಷ್ಯವಿಲ್ಲದೆ, ಇಡೀ ಪ್ರಕರಣ ಇತ್ಯರ್ಥವಾಗದೇ ಉಳಿದಿರುವ ಬಗ್ಗೆ ಎಸ್ಪಿ ಲಕ್ಷ್ಮಣ ನಿಂಬರಗಿ ಅವರು ತೀವ್ರ ಬೇಸರ ವ್ಯಕ್ತಪಡಿಸುತ್ತಾರೆ.

ಕೋಟದಲ್ಲಿ ಜನವರಿ ತಿಂಗಳಲ್ಲಿ ಅಮಾಯಕ ಯುವಕರಿಬ್ಬರನ್ನು ರಾಕ್ಷಸೀ ಪ್ರವೃತ್ತಿಯಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಯಿತು. ಇತ್ತೀಚಿನ ವರ್ಷಗಳಲ್ಲಿ ಉಡುಪಿ ಜಿಲ್ಲೆ ಇಂತಹ ಭಯಾನಕ ಅವಳಿ ಹತ್ಯೆಯನ್ನು ಕಂಡಿಲ್ಲ. ಆರಂಭಿಕ 10 ದಿನ ಪ್ರಕರಣದ ಆರೋಪಿಗಳ ಪತ್ತೆ ಆಗದೇ ಇದ್ದಾಗ ಪ್ರತಿಭಟನೆಗಳಾದವು. ಆದರೆ ಅಂತಿಮವಾಗಿ ಪ್ರಕರಣದಲ್ಲಿ 17ಮಂದಿಯನ್ನು ಬಂಧಿಸಲಾಗಿದೆ. ಜಿಲ್ಲಾ ಪಂಚಾಯತ್ ಸದಸ್ಯನನ್ನೂ ಬಿಡದೇ ಎಲ್ಲರನ್ನು ಬಂಧಿಸಿ ಜೈಲಿಗಟ್ಟಲಾಗಿದೆ. ಜಿಲ್ಲೆಯಲ್ಲಿ ರೌಡಿಸಂ ಮತ್ತೆ ಚಿಗುರದಂತೆ ದಿಟ್ಟ ಕ್ರಮಕೈಗೊಳ್ಳಲಾಗಿದೆ.

ಪೆರ್ಡೂರು ಹಸನಬ್ಬ ಪ್ರಕರಣ ಮತ್ತು ಕೋಟ ಅವಳಿ ಹತ್ಯೆ ಪ್ರಕರಣದಲ್ಲಿ ಖಾಕಿ ಶಾಮೀಲಾಗಿರುವ ವಾಸನೆ ಬಡಿದಿತ್ತು. ತಕ್ಷಣ ಎಚ್ಚೆತ್ತ ಎಸ್ಪಿ ನಿಂಬರಗಿ ಎರಡು ಪ್ರಕರಣದಲ್ಲಿ ಮೂವರು ಪೊಲೀಸರನ್ನು ಬಂಧಿಸಿ, ಜೈಲಿಗಟ್ಟಿದರು. ಇಂಥ ಸಂದರ್ಭದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ತುಂಬ ಕಠಿಣ. ಪೊಲೀಸ್ ಇಲಾಖೆ ಎಂದರೆ ಅಲ್ಲಿ ಶಿಸ್ತು, ನಿಯಮಗಳ ಪಾಲನೆ. ಆದರೆ ಕಾನೂನು ರಕ್ಷಕರೇ ಕಾನೂನು ಭಕ್ಷಕರಾದರೆ ಜನಸಾಮಾನ್ಯರ ಪಾಡೇನು? ಎಂದು ಪ್ರಶ್ನಿಸುವ ಲಕ್ಷ್ಮಣ ನಿಂಬರಗಿ, ಇದು ಉಡುಪಿ ಜಿಲ್ಲೆ ಮಾತ್ರವಲ್ಲ, ಇಡೀ ರಾಜ್ಯದಲ್ಲಿ ಅಪರಾಧಿ ಕೃತ್ಯಗಳಲ್ಲಿ ತೊಡಗುವ ಪೊಲೀಸರಿಗೆ ಒಂದು ಎಚ್ಚರಿಕೆ ಗಂಟೆ ಎನ್ನುತ್ತಾರೆ.

ವಿಧಾನಸಭಾ ಚುನಾವಣೆ, ನಗರಸ್ಥಳೀಯಾಡಳಿತ ಚುನಾವಣೆ, ಪರ್ಯಾಯೋತ್ಸವ, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ, ರಾಷ್ಟ್ರಪತಿ ರಾಮನಾಥ ಕೋವಿಂದ್ ಭೇಟಿ.. ಹೀಗೆ ಬಂದೋಬಸ್ತ್, ಭದ್ರತಾ ಕಾರ್ಯದಲ್ಲಿ ಎಳ್ಳಷ್ಟೂ ಲೋಪವಾಗದಂತೆ ಎಸ್ಪಿ ನಿಂಬರಗಿ ಕರ್ತವ್ಯ ನಿರ್ವಹಿಸಿದ್ದರು. ಎರಡು ತಿಂಗಳ ಕಾಲ ಮಾದಕ ದ್ರವ್ಯ ವ್ಯಸನ ವಿರೋಧಿ ಮಾಸಾಚರಣೆ ಮಾಡಿ, ಇಡೀ ಉಡುಪಿಯನ್ನು ಒಂದಾಗಿಸಿದ್ದರು. ಜನರ ಭಾವನೆಗಳಿಗೆ ಬೆಲೆ ನೀಡಿ ಕೆಲಸ ಮಾಡುತ್ತಿದ್ದ ಇಂತಹ ಐಪಿಎಸ್ ಅಧಿಕಾರಿಯ ಮೇಲೆ ಕೆಲವೊಂದು ಐಎಎಸ್ ಅಧಿಕಾರಿಗಳು ಅಪವಾದ ಹೊರಿಸಿ ಕಳುಹಿಸಿರುವುದು ಉಡುಪಿ ಜಿಲ್ಲೆಗೇ ಅಪಮಾನ ಎನ್ನಬಹುದು.

ಅಂದ ಹಾಗೆ ತಮ್ಮ ಲೋಪವನ್ನು ಇನ್ನೊಬ್ಬರ ತಲೆ ಕಟ್ಟುವುದು ಉತ್ತಮ ನಡೆ ಅಲ್ಲ. ಈ ಸಂಚಿಗೆ ದಕ್ಷ ಅಧಿಕಾರಿ ಲಕ್ಷ್ಮಣ ನಿಂಬರಗಿ ಬಲಿ ಆಗದಿರಲಿ. ಇಂತಹ ಮೋಸದ ವರ್ಗಾವಣೆ ಸರಕಾರದ ಅರಿವಿಗೆ ಬರದೆ ಇರುವುದು ಕೂಡ ವಿಪರ್ಯಾಸವೇ ಸರಿ.


Spread the love