ಯೋಧರ ಹತ್ಯೆ: ವಿವಿಧ ಮಸೀದಿಗಳಲ್ಲಿ ಖಂಡನಾ ಖುತ್ಬಾ ಮತ್ತು ಪ್ರಾರ್ಥನೆ

Spread the love

ಯೋಧರ ಹತ್ಯೆ: ವಿವಿಧ ಮಸೀದಿಗಳಲ್ಲಿ ಖಂಡನಾ ಖುತ್ಬಾ ಮತ್ತು ಪ್ರಾರ್ಥನೆ

ಕಾಶ್ಮೀರದಲ್ಲಿ ನಡೆದಿರುವ ಯೋಧರ ಹತ್ಯೆಯನ್ನು ಖಂಡಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಅದು ಪೈಶಾಚಿಕ ಕೃತ್ಯ. ಭಾರತೀಯರೆಲ್ಲರೂ ಒಟ್ಟು ಸೇರಿ ಇಂಥ ಕೃತ್ಯವನ್ನು ಎದುರಿಸುವ ಅಗತ್ಯವಿದೆ. ಈ ಕೃತ್ಯವು ರಾಜಕೀಯ ಹಿತಾಸಕ್ತಿಗೆ ಬಲಿಯಾಗದಂತೆ ನೋಡಿಕೊಳ್ಳಬೇಕಾದ ಮತ್ತು ಕೃತ್ಯದ ಹಿಂದಿರುವವರು ಯಾವ ಕಾರಣಕ್ಕೂ ತಪ್ಪಿಸಿಕೊಳ್ಳದಂತೆ ತಡೆಯಬೇಕಾದ ಅಗತ್ಯ ಇದೆ. ಈ ದೇಶ ನಮ್ಮದು ಮತ್ತು ಇದರ ಬಗೆಗಿನ ಕಾಳಜಿಯೂ ನಮ್ಮಲ್ಲಿರಬೇಕು. ಅಲ್ಲಾಹನು ಯೋಧರ ಕುಟುಂಬಕ್ಕೆ ಸಾಂತ್ವನವನ್ನು ನೀಡಲಿ ಎಂದು ಮಸ್ಜಿದುಲ್ ಹುದಾ ತೊಕ್ಕೊಟ್ಟು ಇದರ ಖತೀಬರಾದ ಮುಹಮ್ಮದ್ ಕುಂಞಯವರು ಹೇಳಿದರು. ಅವರು ಶುಕ್ರವಾರದ ಜುಮಾ ಖುತ್ಬಾ ನೀಡುತ್ತಿದ್ದರು.

ಕಚ್ಚೀ ಮೇಮನ್ ಮಸೀದಿಯಲ್ಲಿ ಜುಮಾ ಖುತ್ಬಾ ನೀಡಿದ ಮೌಲಾನ ಶೋಯೆಬ್ ಅವರು, ಅಕ್ರಮವನ್ನು ಅಲ್ಲಾಹನು ನಿಷಿದ್ಧಗೊಳಿಸಿದ್ದಾನೆ. ಅದನ್ನು ತನ್ನ ದಾಸರ ಮೇಲೂ ನಿಷಿದ್ಧಗೊಳಿಸಿದ್ದಾನೆ. ಆದ್ದರಿಂದ ಯೋಧರ ಹತ್ಯೆಯು ಅಲ್ಲಾಹನ ಮೇಲೆ ನಡೆಸಿದ ಅಕ್ರಮವಾಗಿದೆ. ನಾವೆಲ್ಲ ಈ ಸಂದರ್ಭದಲ್ಲಿ ಯೋಧರ ಜತೆ ನಿಂತು ದೇಶಕ್ಕೆ ಬಲ ನೀಡಬೇಕಾಗಿದೆ ಎಂದರು.

ಮಂಗಳೂರಿನ ಮಸ್ಜಿದುನ್ನೂರ್‍ನಲ್ಲಿ ಜುಮಾ ಖುತ್ಬಾ ನೀಡಿದ ಮೌಲಾನ ನಫ್ಸಲ್ ಅವರು, ಒಬ್ಬನ ಹತ್ಯೆಯು ಇಡೀ ಮಾನವ ಕೋಟಿಯ ಹತ್ಯೆಗೆ ಸಮ ಎಂದು ಕುರ್‍ಆನ್ ಹೇಳುತ್ತದೆ. ಯೋಧರ ಹತ್ಯೆಯನ್ನು ಖಂಡಿಸುವುದಕ್ಕೆ ಇದಕ್ಕಿಂತ ಬೇರೆ ಬಲ ಬೇಕಿಲ್ಲ ಎಂದರು.

ಬೋಳಂಗಡಿ ಹವ್ವಾ ಮಸೀದಿಯ ಖತೀಬರಾದ ಯಹ್ಯಾ ತಂಙಳ್ ಮದನಿಯವರು ಖುತ್ಬಾ ಪ್ರವಚನ ನೀಡುತ್ತಾ, ಇದು ಖಂಡನಾರ್ಹ ಕೃತ್ಯ. ಈ ಕೃತ್ಯದ ವಿರುದ್ಧ ಸರ್ವ ಮುಸ್ಲಿಮರು ಒಂದಾಗಿದ್ದಾರೆ ಎಂದರು.

ಕಲ್ಲೇಗ ಜುಮಾ ಮಸೀದಿ ಪುತ್ತೂರು ಇಲ್ಲಿನ ಧರ್ಮ ಗುರುಗಳಾದ ಮೌಲಾನ ಅಬೂಬಕರ್ ಜಲಾಲಿ ಖುತ್ಬಾ ನೀಡುತ್ತಾ, ಯೋಧರ ಹತ್ಯೆ ಕೃತ್ಯವನ್ನು ಹೃದಯದಿಂದಲೂ ಮಾತಿನಿಂದಲೂ ಖಂಡಿಸುತ್ತೇನೆ. ಭಾರತದ ಪ್ರತೀ ಮಸೀದಿಗಳು ಸೈನಿಕರ ಸುರಕ್ಷತೆಗಾಗಿ ಪ್ರಾರ್ಥಿಸಬೇಕು ಎಂದು ಕರೆ ಕೊಟ್ಟರು.


Spread the love