ರಾಜಕೀಯ ತೆವಲಿಗೆ ಕಾಂಗ್ರೆಸ್ ಪಕ್ಷವನ್ನು ಟೀಕಿಸುತ್ತಿರುವ ಶೋಭಾ ಕರಂದ್ಲಾಜೆ – ರಮೇಶ್ ಕಾಂಚನ್

Spread the love

ರಾಜಕೀಯ ತೆವಲಿಗೆ ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ಶೋಭಾ ಕರಂದ್ಲಾಜೆ ಜಿಲ್ಲೆಗೆ ಕೊಡುಗೆ ಏನು? – ರಮೇಶ್ ಕಾಂಚನ್

ಉಡುಪಿ: ಮದುವೆಗೆ ಬರುವವರಂತೆ ಅಮವಾಸ್ಯೆಗೊಮ್ಮೆ, ಹುಣ್ಣಿಮೆಗೊಮ್ಮೆ ಜಿಲ್ಲೆಗೆ ಆಗಮಿಸುವ ಕೇಂದ್ರ ಸಚಿವೆ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಅವರು ತಮ್ಮ ರಾಜಕೀಯ ತೆವಲಿಗಾಗಿ ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ಕೆಲಸ ಮಾಡುತ್ತಿದ್ದಾರೆ. ಎರಡು ಅವಧಿಗೆ ಸಂಸದರಾಗಿ ಆಯ್ಕೆಯಾದರೂ ಕೂಡ ಉಡುಪಿ ಜಿಲ್ಲೆ ಹಾಗೂ ಚಿಕ್ಕಮಂಗಳೂರು ಜಿಲ್ಲೆಯ ಅಭಿವೃದ್ಧಿಗೆ ಅವರ ಕೊಡುಗೆ ಶೂನ್ಯವಾಗಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ಜ್ವಲಂತ ಸಮಸ್ಯೆಗಳಿದ್ದು ಒಂದನ್ನು ಕೂಡ ಪರಿಹಾರ ಮಾಡುವ ಗೋಜಿಗೆ ಕೂಡ ಶೋಭಾ ಕರಂದ್ಲಾಜೆ ಅವರು ಹೋಗಿಲ್ಲ. ಜಿಲ್ಲೆಯ ಪರ್ಕಳ ರಸ್ತೆ, ಸಂತೆಕಟ್ಟೆ ಅಂಡರ್ ಪಾಸ್ ಕಾಮಗಾರಿ, ಇಂದ್ರಾಳಿ ರೈಲ್ವೆ ಸೇತುವೆ ಕಾಮಗಾರಿ ಆರಂಭವಾಗಿ ಹಲವು ವರ್ಷಗಳಾದರೂ ಕೂಡ ಇಂದಿಗೂ ಕೂಡ ಪೂರ್ಣವಾಗಿಲ್ಲ. ಮಲ್ಪೆಯಿಂದ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕನಿಷ್ಠ ಆರಂಭ ಕೂಡ ಮಾಡದೆ ಪ್ರತಿನಿತ್ಯ ವಾಹನ ಸವಾರರು ಟ್ರಾಫಿಕ್ ಜಾಮ್ನಿಂದ ತತ್ತರಿಸಿ ಹೋಗಿದ್ದು ಇದರ ಬಗ್ಗೆ ಕನಿಷ್ಠ ಕಾಳಜಿ ಕೂಡ ಸಂಸದರಿಗೆ ಇರದಿರುವುದು ನಾಚಿಕೇಗೇಡಿನ ಸಂಗತಿಯಾಗಿದೆ. ಕೇಂದ್ರೀಯ ವಿದ್ಯಾಲಯ ಮಂಜೂರಾಗಿದೆ ಎಂದು ಹೇಳಿಕೊಂಡು ಬಂದು ಇಷ್ಟು ವರ್ಷದ ಬಳಿಕ ಇತ್ತೀಚೆಗೆ ಶಿಲನ್ಯಾಸ ಮಾಡಿದ್ದು ಅದರ ಕಟ್ಟಡ ಕಾಮಗಾರಿ ಯಾವ ವರ್ಷಕ್ಕೆ ಮುಗಿಯುತ್ತದೆ ಎನ್ನುವುದು ಕೂಡ ತಿಳಿದಿಲ್ಲ. ಸತತ 10 ವರ್ಷಗಳ ಕಾಲ ಸಂಸದರಾಗಿ ಕೇವಲ ಕಾಂಗ್ರೆಸ್ ಪಕ್ಷದ ವಿರುದ್ದ ಆರೋಪ ಮಾಡುವುದರಲ್ಲೇ ತಮ್ಮ ಕಾಲಹರಣ ಮಾಡಿಕೊಂಡು ಬಂದಿದ್ದು ಬಿಟ್ಟರೆ ಬೇರೆನೂ ಕೂಡ ಅಭಿವೃದ್ದಿ ಕುರಿತು ಚಿಂತನೆ ನಡೆಸದೇ ಇರುವುದು ಬಿಜೆಪಿಗರಿಗೇ ಇರಿಸು ಮುರುಸು ಉಂಟಾಗಿದೆ.

ಕಾಂಗ್ರೆಸ್ ಪಕ್ಷವು ನೀಡಿದ ಗ್ಯಾರಂಟಿಗಳನ್ನು ಬಿಟ್ಟಿ ಭಾಗ್ಯ ಎಂದು ಪ್ರಚಾರ ಮಾಡುವ ಬಿಜೆಪಿಗರಿಗೆ ಹೊಟ್ಟೆ ತುಂಬಿದ್ದು ಬಡವರ ನೋವು, ಕಷ್ಟ-ನಷ್ಟ ಏನು ಎನ್ನುವುದು ತಿಳಿಯದೆ ಅಪಪ್ರಚಾರ ಮಾಡುತ್ತಿದ್ದಾರೆ. ಶಕ್ತಿ ಯೋಜನೆಯ ಮೂಲಕ ಉಚಿತ ಪ್ರಯಾಣ ವ್ಯವಸ್ಥೆಯಿಂದ, ಗೃಹಲಕ್ಷ್ಮೀ ಯೋಜನೆ, ಭಾಗ್ಯ ಲಕ್ಷ್ಮೀ ಯೋಜನೆ ಇವುಗಳ ಮೂಲಕ ರಾಜ್ಯದ ಕೋಟ್ಯಾಂತರ ಜನರಿಗೆ ಲಾಭವಾಗಿದ್ದು ಯಾವುದೇ ಧರ್ಮ, ಜಾತಿಲ ಪಕ್ಷ ಎಂಬ ಭೇಧಭಾವವಿಲ್ಲದೆ ಸರ್ವರಿಗೂ ಸಮಾನವಾಗಿ ನೀಡಲಾಗಿದೆ.

ಮೋದಿಯವರು ಕೃಷಿ ಸಮ್ಮಾನ್ ಯೋಜನೆ ನೀಡಿದಾಗ ಅದನ್ನು ಕಾಂಗ್ರೆಸ್ ಪಕ್ಷ ಕೂಡ ಸ್ವಾಗತಿಸಿ ಉದಾರತೆ ಮೆರೆದರೆ ಬಿಜೆಪಿಗರು ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳನ್ನು ಟೀಕೆ ಮಾಡುವುದರಲ್ಲೇ ಕಾಲಹರಣ ಮಾಡಿಕೊಂಡಿದೆ. ಬಿಜೆಪಿಗರಿಗೆ ಹೊಟ್ಟೆ ತುಂಬಿದ್ದು ಬಡವರ ಹಸಿವು ತಿಳಿಯುವುದಿಲ್ಲ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೆ?

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿರುವುದನ್ನು ನೋಡಿ ಬಿಜೆಪಿ ಕೂಡ ಇತ್ತೀಚಿನ ಪಂಚರಾಜ್ಯಗಳ ಚುನಾವಣೆಯಲ್ಲಿ ಕೂಡ ಇದೇ ರೀತಿಯ ಯೋಜನೆಗಳನ್ನು ಘೋಷಿಸಿದ್ದು ಅದೂ ಕೂಡ ಬಿಟ್ಟಿ ಭಾಗ್ಯಗಳೇ ? ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳು ಯಾವ ರೀತಿಯಲ್ಲಿ ಪಂಚ ರಾಜ್ಯದ ಚುನಾಣೆಯಲ್ಲಿ ಪ್ರಭಾವ ಬೀರಲಿವೆ ಎನ್ನುವುದು ಚುನಾವಣಾ ಫಲಿತಾಂಶವೇ ಉತ್ತರ ನೀಡಲಿದೆ.

ಕೇವಲ ಹಿಂದುಗಳ ಹೆಣ ಬಿದ್ದಾಗ ಅದಕ್ಕೆ ಧರ್ಮದ ಬಣ್ಣವ ಕಟ್ಟಿ ಬೊಬ್ಬೆ ಹೊಡೆಯುವ ಸಂಸದರಿಗೆ ಜಿಲ್ಲೆಯಲ್ಲಿ ಇತ್ತೀಚೆಗೆ ನೇಜಾರಿನಲ್ಲಿ ನಡೆದ ಒಂದೇ ಕುಟುಂಬದ ನಾಲ್ಕು ಮಂದಿಯ ಬರ್ಬರ ಕೊಲೆ ನೆನಪೇ ಆಗಿಲ್ಲ. ಕನಿಷ್ಠ ಸೌಜನ್ಯಕ್ಕಾದರೂ ಜಿಲ್ಲೆಗೆ ಭೇಟಿ ನೀಡಿದಾಗ ಕೃತ್ಯ ನಡೆದ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳು ಕೆಲಸವನ್ನು ಮಾಡಲೂ ಕೂಡ ಇವರಿಗೆ ಆಗದಿರುವುದು ಇವರ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ಕೇವಲ ಚುನಾವಣೇ ಬಂದಾಗ ಅಲ್ಪಸಂಖ್ಯಾತ ಮಹಿಳೆಯೊಂದಿಗೆ ನಿಂತು ಫೋಟೊ ತೆಗೆದುಕೊಂಡು ನಮ್ಮದು ಎಲ್ಲರನ್ನೂ ಪ್ರೀತಿಸುವ ಪಕ್ಷ ಎಂಬ ಮೊಸಳೆ ಕಣ್ಣಿರು ಹಾಕಿದ್ದು ಬಿಟ್ಟರೆ ಬೇರೆ ಏನೂ ಇಲ್ಲ.

ಒರ್ವ ಜವಾಬ್ದಾರಿಯುತ ಸಂಸದೆ ಹಾಗೂ ಕೇಂದ್ರ ಸಚಿವೆಯಾಗಿ ರಾಜ್ಯ ಕಾಂಗ್ರೆಸ್ ಸರಕಾರ ಕಳ್ಳರ ಕ್ಯಾಬಿನೆಟ್ ಎಂಬ ಅಸಂವಿಧಾನಿಕ ಪದ ಬಳಸುವಾಗ ಕನಿಷ್ಟ ಅರಿವು ಇಲ್ಲದಿರುವುದು ಶೋಭಾ ಕರಂದ್ಲಾಜೆ ಅವರ ರಾಜಕೀಯ ಅಧಃಪತನವನ್ನು ತೋರಿಸುತ್ತದೆ.

ರಾಜ್ಯದಲ್ಲಿ ಬಿಜೆಪಿ ಪಕ್ಷ ತನ್ನ ಒಳಜಗಳಗಳಿಂದ ಮನೆಯೊಂದು ಮೂರು ಬಾಗಿಲು ಎಂಬಂತಾಗಿದ್ದು ಅದನ್ನು ಮೊದಲು ಸರಿಪಡಿಸಿಕೊಳ್ಳಲಿ. ಅಧಿಕಾರದಲ್ಲಿ ಇದ್ದಾಗಲೇ ರಾಜ್ಯದ ಓರ್ವ ಮುಖ್ಯಮಂತ್ರಿಗಳು ಜೈಲು ಸೇರಿ ದಾಖಲೆ ಮಾಡಿದ್ದರೆ ಅದು ಬಿಜೆಪಿಗರು ಎನ್ನುವುದನ್ನು ಸಂಸದೆಯವರು ಅರಿತು ಮಾತನಾಡಬೇಕಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love