ರಾಜ್ಯ ಸರಕಾರದ ಜನಹಿತ ಯೋಜನೆಗಳ ಕಲಾಜಾಥಾ ಪ್ರಚಾರಾಂದೋಲನಕ್ಕೆ ಚಾಲನೆ

Spread the love

ರಾಜ್ಯ ಸರಕಾರದ ಜನಹಿತ ಯೋಜನೆಗಳ ಕಲಾಜಾಥಾ ಪ್ರಚಾರಾಂದೋಲನಕ್ಕೆ ಚಾಲನೆ

ಮ0ಗಳೂರು: ರಾಜ್ಯ ಸರಕಾರದ ಜನಹಿತ ಯೋಜನೆಗಳ ಸಾದನೆ ಕುರಿತು ಸಾರ್ವಜನಿಕರಿಗೆ ಮಾಹಿತಿ ಹಾಗೂ ಜಾಗೃತಿ ಮೂಡಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ರಾಜ್ಯಾದ್ಯಂತ ಆಯೋಜಿಸಿರುವ ‘ನಾಲ್ಕನೇ ವರ್ಷದೆಡೆಗೆ ಭರವಸೆಯ ನಡಿಗೆ- ಕಲಾಜಾಥಾ ಪ್ರಚಾರಾಂದೋಲನ’ ಕಾರ್ಯಕ್ರಮಕ್ಕೆ ಮಂಗಳೂರಿನಲ್ಲಿ ಇಂದು ಚಾಲನೆ ನೀಡಲಾಯಿತು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ರಾಜ್ಯ ಸರಕಾರ ಜನರ ಹಿತಕ್ಕಾಗಿ ಪ್ರತಿಯೊಂದು ವರ್ಗದ ಜನರಿಗೆ ಒಂದಿಲ್ಲೊಂದು ಸೌಲಭ್ಯ ಒದಗಿಸುವ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಜನಸಾಮಾನ್ಯರ ಶ್ರೇಯೋಭಿವೃದ್ಧಿ ಉದ್ದೇಶವನ್ನಿಟ್ಟುಕೊಂಡು ಜಾರಿಗೆ ತಂದಿರುವ ಈ ಯೋಜನೆಗಳು ಕಟ್ಟಕಡೆಯ ವ್ಯಕ್ತಿಯವರೆಗೂ ತಲುಪಬೇಕು. ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿಭಾಗ್ಯ, ವಿದ್ಯಾಸಿರಿ ಸೇರಿದಂತೆ ಹಲವು ಯೋಜನೆಗಳು ಜನರಲ್ಲಿ ತೃಪ್ತಿ ಮೂಡಿಸಿದೆ. ಈ ಯೋಜನೆಗಳನ್ನು ಇನ್ನಷ್ಟು ಫಲಾನುಭವಿಗಳಿಗೆ ವಿಸ್ತರಿಸಲು ಸಾರ್ವಜನಿಕರಲ್ಲಿ ಇನ್ನಷ್ಟು ಅರಿವು ಮೂಡಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ವಾರ್ತಾ ಇಲಾಖೆಯು ಹಮ್ಮಿಕೊಂಡಿರುವ ಈ ಕಲಾಜಾಥಾವು ಶ್ಲಾಘನೀಯವಾಗಿದೆ ಎಂದು ಅವರು ಹೇಳಿದರು.

image002krishibhagya-20160719-002 image001krishibhagya-20160719-001 image004krishibhagya-20160719-004 image003krishibhagya-20160719-003 image005krishibhagya-20160719-005 image006krishibhagya-20160719-006 image007krishibhagya-20160719-007 image008krishibhagya-20160719-008

ಕೆಲವು ಸರಕಾರಿ ಯೋಜನೆಗಳ ಪ್ರಯೋಜನ ಪಡೆಯಲು ಫಲಾನುಭವಿಗಳೇ ಮುಂದೆ ಬರುತ್ತಿಲ್ಲ. ಈ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಹೆಚ್ಚು ಅರಿವು ಮೂಡಿಸಿದರೆ, ಯೋಜನೆಯ ಉದ್ದೇಶ ಸಾರ್ಥಕವಾಗುತ್ತದೆ. ಹೀಗಾಗಿ, ಈ ಪ್ರಚಾರಾಂದೋಲನದಲ್ಲಿ ಇದಕ್ಕೆ ಹೆಚ್ಚು ಒತ್ತು ನೀಡಲು ಅವರು ಕರೆ ನೀಡಿದರು.
ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ ಮಾತನಾಡಿ, ಈ ಕಲಾಜಾಥವು 20 ದಿನಗಳ ಕಾಲ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಸಂಚರಿಸಲಿದೆ. ಕಲಾವಿದರ ಬೀದಿ ನಾಟಕ ತಂಡಗಳ ಪ್ರದರ್ಶನ ಮೂಲಕ ರಾಜ್ಯ ಸರಕಾರದ ಜನಪರ ಯೋಜನೆಗಳ ಕುರಿತು ಮಾಹಿತಿ ನೀಡಲಾಗುವುದು. ಅಲ್ಲದೇ, ಈ ವಿಶೇಷ ಪ್ರಚಾರಾಂದೋಲನದಲ್ಲಿ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್, ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಮುಹಮ್ಮದ್ ನಝೀರ್, ಉಪ ಪೊಲೀಸ್ ಆಯಕ್ತ ಶಾಂತರಾಜು, ಆರ್.ಟಿ.ಓ. ಅಧಿಕಾರಿ ಜಿ.ಎಸ್. ಹೆಗಡೆ ಮ್ತತಿತರರು ಇದ್ದರು.


Spread the love