ರಾಷ್ಟ್ರೀಯವಾದಿ ಬರಹಗಾರರನ್ನು ದಮನಿಸಲು ಪಣತೊಟ್ಟ ರಾಜ್ಯ ಸರಕಾರ : ಯಶ್‍ ಪಾಲ್ ಸುವರ್ಣ

Spread the love

ರಾಷ್ಟ್ರೀಯವಾದಿ ಬರಹಗಾರರನ್ನು ದಮನಿಸಲು ಪಣತೊಟ್ಟ ರಾಜ್ಯ ಸರಕಾರ : ಯಶ್‍ ಪಾಲ್ ಸುವರ್ಣ

ಉಡುಪಿ: ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೇ ರಾಷ್ಟ್ರೀಯವಾದಿ ಚಿಂತನೆಯ ಬರಹಗಾರರನ್ನು ಧಮನಿಸಲು ಪಣತೊಟ್ಟಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ ಆರೋಪಿಸಿದ್ದಾರೆ.

ರಾಜ್ಯ ಸರಕಾರದ ವೈಫಲ್ಯವನ್ನು ನಿರಂತರವಾಗಿ ಜನತೆಯ ಮುಂದಿಡುತ್ತಿರುವ ಮಹೇಶ್ ವಿಕ್ರಮ್ ಹೆಗ್ಡೆ, ಅಜಿತ್ ಶೆಟ್ಟಿ ಹೆರಂಜೆ, ಸಂತೋಷ್ ತಮ್ಮಯ್ಯ, ಹೇಮಂತ್ ಕುಮಾರ್ ಮುಂತಾದ ರಾಷ್ಟೀಯವಾದಿ ಚಿಂತನೆಯ ಬರಹಗಾರರ ಮೇಲೆ ಹತಾಶೆಗೊಂಡು ಸುಳ್ಳು ಕೇಸುಗಳನ್ನು ದಾಖಲಿಸಿ ಅವರ ಧ್ವನಿಯಡಗಿಸುವ ವ್ಯರ್ಥ ಪ್ರಯತ್ನದಲ್ಲಿ ಸರಕಾರ ತೊಡಗಿಸಿಕೊಂಡಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಭಾಷಣ ಬಿಗಿಯುವ ಸಚಿವರುಗಳೇ ಇದೀಗ ತಮ್ಮ ಹುಳುಕುಗಳನ್ನು ಮುಚ್ಚಿಡಲು ಇಂತಹ ಹೀನಕೃತ್ಯದಲ್ಲಿ ತೊಡಗಿರುವುದು ದುರದೃಷ್ಟಕರ.

ರಾಜಕೀಯ ಲಾಭಕ್ಕಾಗಿ ಧರ್ಮ ವಿಭಜನೆಗೆ ಮುಂದಾಗಿರುವವರ ಬಣ್ಣ ಬಯಲು ಮಾಡಿದ ಏಕೈಕ ಕಾರಣಕ್ಕಾಗಿ ಸುಳ್ಳು ಕೇಸು ದಾಖಲು ಮಾಡಿರುವ ರಾಜ್ಯ ಸರಕಾರ, ಇದೀಗ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮವನ್ನು ಕೂಡಾ ನಿಯಂತ್ರಿಸಲು ಹೊರಟಿದೆ. ರಾಜ್ಯ ಸರಕಾರದ ಈ ಧೋರಣೆಯಿಂದ ಮಾಧ್ಯಮಗಳ ಮೇಲೆ ಅಘೋಷಿತ ತುರ್ತು ಪರಿಸ್ಥಿತಿ ವಾತಾವರಣ ನಿರ್ಮಾಣಗೊಂಡಿದೆ.

ಇನ್ನಾದರೂ ಮುಖ್ಯಮಂತ್ರಿಗಳು ತಮ್ಮ ಸರಕಾರದ ವೈಫಲ್ಯವನ್ನು ಮುಚ್ಚಿಡುವ ಭರದಲ್ಲಿ ತಮ್ಮ ಈ ಪ್ರಜಾಪ್ರಭುತ್ವ ವಿರೋಧಿ ಧೋರಣೆಯನ್ನು ಬದಲಿಸಿ ತಪ್ಪಿದಲ್ಲಿ ಮುಂಬರುವ ದಿನಗಳಲ್ಲಿ ರಾಜ್ಯ ಸರಕಾರದ ಆಡಳಿತ ವೈಖರಿಯಿಂದ ಭ್ರಮನಿರಸನಗೊಂಡಿರುವ ಜನತೆ ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಪ್ರಕಟಣೆ ಮೂಲಕ ಎಚ್ಚರಿಸಿದ್ದಾರೆ.


Spread the love