ರೈಲು ಯೋಜನೆಗಳ ಮಂಜೂರಿಗೆ ಸಂಸದ ನಳಿನ್‌ಕುಮಾರ್‌ ಕಟೀಲ್‌ ಮನವಿ

Spread the love

ರೈಲು ಯೋಜನೆಗಳ ಮಂಜೂರಿಗೆ ಸಂಸದ ನಳಿನ್‌ಕುಮಾರ್‌ ಕಟೀಲ್‌ ಮನವಿ

ಮಂಗಳೂರು:  ನವದೆಹಲಿಯಲ್ಲಿ ಗುರುವಾರ ಕೇಂದ್ರ ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರನ್ನು ಭೇಟಿ ಮಾಡಿದ ದಕ್ಷಿಣ ಕನ್ನಡ ಸಂಸದ ನಳಿನ್‌ಕುಮಾರ್ ಕಟೀಲ್‌, ಹಲವು ರೈಲ್ವೆ ಯೋಜನೆಗಳ ಕುರಿತು ಪ್ರಸ್ತಾಪಿಸಿದರು. ಬಹುದಿನಗಳ ಬೇಡಿಕೆಯಾಗಿರುವ ರೈಲ್ವೆ ಯೋಜನೆಗಳಿಗೆ ಈ ಬಾರಿ ಆದ್ಯತೆ ನೀಡುವಂತೆ ಮನವಿ ಮಾಡಿದರು.

ಮಂಗಳೂರು ಕೇಂದ್ರ ರೈಲು ನಿಲ್ದಾಣವನ್ನು ವಿಶ್ವದರ್ಜೆಗೆ ಏರಿಸುವ ನಿಟ್ಟಿನಲ್ಲಿ ಹೊಸ ಸುಸಜ್ಜಿತ ಕಟ್ಟಡ ನಿರ್ಮಾಣ ಹಾಗೂ ಇತರ ಮೂಲಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಬೇಕು. ನಿಲ್ದಾಣದಲ್ಲಿ 3 ಮತ್ತು 4ನೇ ಪ್ಲಾಟ್ ಫಾರಂ ನಿರ್ಮಾಣ ಕಾಮಗಾರಿ ತ್ವರಿತಗೊಳಿಸಬೇಕು. ಜತೆಗೆ ಸುಬ್ರಹ್ಮಣ್ಯ-ಸಕಲೇಶಪುರ ಹಳಿ ದ್ವಿಪಥ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಲ್ಲಿ ಮೂಲ ಸೌಲಭ್ಯಗಳ ಅಭಿವೃದ್ಧಿಗೆ ಒತ್ತು ನೀಡಬೇಕು. ಮಂಗಳೂರು – ಬೆಂಗಳೂರು ಮಧ್ಯೆ ಸಂಚರಿಸುವ ರೈಲುಗಳ ವೇಗ ಹೆಚ್ಚಿಸುವಂತೆ ಮನವಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ರೈಲುಗಳ ಸಂಚಾರಕ್ಕೆ ಮನವಿ: ಬ್ರಾಡ್‌ಗೇಜ್‌ಗೆ ಪರಿವರ್ತನೆ ಆಗುವ ಮೊದಲು ಓಡಾಡುತ್ತಿದ್ದ ಮಂಗಳೂರು– ಮೀರಜ್ ಮಹಾಲಕ್ಷ್ಮಿ ಎಕ್ಸ್‌ಪ್ರೆಸ್ ರೈಲು ಸಂಚಾರ ಸ್ಥಗಿತಗೊಂಡಿದ್ದು, ಅದನ್ನು ಮತ್ತೆ ಆರಂಭಿಸಬೇಕು, ಈ ರೈಲನ್ನು ಮೀರಜ್‌ನಿಂದ ಮುಂಬೈವರೆಗೆ ವಿಸ್ತರಿಸುವಂತೆ ಕೋರಿದ್ದಾರೆ.

ಮಂಗಳೂರು – ಪುಣೆ ಮಧ್ಯೆ ಹೊಸ ರೈಲನ್ನು ಆರಂಭಿಸಬೇಕು. ಮೂಕಾಂಬಿಕಾ ರೋಡ್ (ಬೈಂದೂರು) – ಕಾಸರಗೋಡು ರೈಲನ್ನು ಪುನರಾರಂಭಿಸಿ, ಗುರುವಾಯೂರುವರೆಗೆ ವಿಸ್ತರಿಸಬೇಕು. ಕಾರವಾರ – (ಮಂಗಳೂರು ಜಂಕ್ಷನ್ ಮೂಲಕ) ಯಶವಂತಪುರ ಮಧ್ಯೆ ಸಂಚರಿಸುವ (16515/16) ಹಗಲು ರೈಲನ್ನು ತಿರುಪತಿವರೆಗೆ ವಿಸ್ತರಿಸಬೇಕು. ಮಂಗಳೂರು – ಪುತ್ತೂರು – ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲು ಹಾಗೂ ಕಾರವಾರ-ಬೆಂಗಳೂರು ರೈಲಿನ ವೇಳೆಯಲ್ಲಿ ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಕೊಯಮತ್ತೂರು–ಮಂಗಳೂರು ಜಂಕ್ಷನ್ – ಜಬಲ್ಪುರ ಎಕ್ಸ್‌ಪ್ರೆಸ್ ವಿಶೇಷ ರೈಲನ್ನು ಕಾಯಂಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಪೂರೈಸುವಂತೆ ಮನವಿ ಮಾಡಿದ್ದಾರೆ.

ಬೇಡಿಕೆಗಳನ್ನು ಪರಿಶೀಲಿಸಿದ ರೈಲ್ವೆ ಸಚಿವ ಪಿಯೂಷ್‌ ಗೋಯಲ್‌, ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು. ಮಂಗಳೂರು – ಬೆಂಗಳೂರು ಮಧ್ಯೆ ಸದ್ಯ ವಾರಕ್ಕೆ ಮೂರು ದಿನ ಸಂಚರಿಸುವ ಮಂಗಳೂರು-ಯಶವಂತಪುರ ಎಕ್ಸ್‌ಪ್ರೆಸ್ (ರೈ.ಸಂ. 16585/86) ರೈಲನ್ನು ನಿತ್ಯ ಓಡಿಸುವ ಕುರಿತು ತಕ್ಷಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.


Spread the love