ಲಾಕ್ ಡೌನ್ ನೆಪದಲ್ಲಿ ದಕ ಜಿಲ್ಲೆಯಲ್ಲಿ ತುಘಲಕ್ ಆಡಳಿತ – ವಿನಯ್ ರಾಜ್ ಆರೋಪ

Spread the love

ಲಾಕ್ ಡೌನ್ ನೆಪದಲ್ಲಿ ದಕ ಜಿಲ್ಲೆಯಲ್ಲಿ ತುಘಲಕ್ ಆಡಳಿತ – ವಿನಯ್ ರಾಜ್ ಆರೋಪ

ಮಂಗಳೂರು : ಲಾಕ್ ಡೌನ್ ನೆಪದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುಘಲಕ್ ಮಾದರಿ ಆಡಳಿತ ಇದೆಯೆ ಎಂಬ ಪ್ರಶ್ನೆ ಉದ್ಭವಿಸಿದೆ ಎಂದು ಮನಾಪ ಸದಸ್ಯ ಹಾಗೂ ದಕ ಜಿಲ್ಲಾ ಕಾಂಗ್ರೆಸ್ ವಕ್ತಾರ ಎಸಿ ವಿನಯ್ ರಾಜ್ ಆರೋಪಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು ಜಿಲ್ಲೆಯಲ್ಲಿ ಲಾಕ್ ಡೌನ್ ಶುರುವಾದ ಮೇಲೆ ಜಿಲ್ಲಾಡಳಿತ ದಿನಾಲೂ ಅಗತ್ಯ ವಸ್ತುಗಳ ಅಂಗಡಿ ತೆರೆದಿರುತ್ತದೆ ಎಂದು ಹೇಳಿತು. ಮಾರ್ಚ್ 28 ರಿಂದ 30 ರವರೆಗೆ ಮೂರು ದಿನ ಜನತಾ ಕರ್ಫ್ಯೂ, ಯಾವುದೇ ಮುನ್ಸೂಚನೆ ನೀಡದೆ ಪ್ರತಿಪಕ್ಷದ ಜನಪ್ರತಿನಿಧಿಗಳು ವಿರೋಧ ಮಾಡಿದರು ಲೆಕ್ಕಿಸದೆ ಹೇರಲಾಯಿತು. 31 ರಂದು ಕಿಲೋಮೀಟರು ಉದ್ದದ ಸರದಿಯಲ್ಲಿ ನಿಂತು ದಿನಸಿ ಖರೀದಿಸಲು ಜನ ಕಷ್ಟ ಪಟ್ಟ ವಿಚಾರ ಎಲ್ಲ ಮಾಧ್ಯಮಗಳಲ್ಲಿ ಬಂದ ತಕ್ಷಣ ಏಪ್ರಿಲ್ 1 ರಿಂದ ಎಲ್ಲ ದಿನ ಬೆಳಿಗ್ಗೆ 7 ರಿಂದ ಮಧಾಹ್ನ 12 ರವರೆಗೆ ಅಂಗಡಿ ತೆರೆದಿರುತ್ತದೆ ಎಂದು ಜಿಲ್ಲಾಡಳಿತ ಆದೇಶ ಹೊರಡಿಸಿತು.

ಆದರೆ ಮಾರ್ಚ್ 3 ರಿಂದ ರಸ್ತಗೆ ಯಾವುದೇ ವಾಹನಗಳು ಬರಬಾರದು, ಜನ ಹತ್ತಿರದ ಅಂಗಡಿಯಿಂದ ದಿನಸಿ ಸಾಮಾನು ಖರೀದಿಸಬೇಕು ಎಂದು ಜಿಲ್ಲಾಡಳಿತ ಜಿಲ್ಲಾಧಿಕಾರಿಗಳಿಗೆ ಒತ್ತಡ ಹಾಕುವುದರ ಮೂಲಕ ಆದೇಶ ಹೊರಡಿಸುವಲ್ಲಿ ಯಶಸ್ಸನ್ನು ಕಂಡಿದೆ. ಅಂದರೆ ನಡೆದುಕೊಂಡು ಹೋಗಿ ಖರೀದಿ ಮಾಡಬೇಕು. ಇದರಿಂದ ಜನ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಆಡಳಿತ ಪಕ್ಷದ ಸಂಸದರು, ಶಾಸಕರುಗಳು ಹಾಗು ಉಸ್ತುವಾರಿ ಸಚಿವರು ಯಾಕೆ ಈ ರೀತಿ ಜನರನ್ನು ಸಂಕಷ್ಟಕ್ಕೆ ಹಾಕುತ್ತಿದ್ದಾರೆ?. ಅಂಗಡಿ ಮನೆಯ ಅಂಗಳದಲ್ಲಿ ಇರುತ್ತದೆಯೇ. ಗ್ರಾಮಾಂತರ ಪ್ರದೇಶಗಳಲ್ಲಿ ಕಿಲೋಮೀಟರು ಲೆಕ್ಕದಲ್ಲಿ ನಡೆದು ಹೋಗುವ ಪರಿಸ್ಥಿತಿ ಇದೆ. ಪಟ್ಟಣ, ನಗರಗಳಲ್ಲಿ ಕೂಡ ಅಂಗಡಿಗಳು ಹತ್ತಿರ ಇರುವುದಿಲ್ಲ. ಕಡಿಮೆ ಅಂದರೂ ಅರ್ಧ ಕಿ.ಮೀ.ದೂರವಿರುತ್ತದೆ. ಅಂಗಡಿಯಲ್ಲಿ ಎಲ್ಲ ಸಾಮಾನುಗಳು, ತರಕಾರಿ, ಕೋಳಿ ಮಾಂಸ, ಹಾಲು ಹಾಗು ಇತರ ಅಗತ್ಯ ವಸ್ತುಗಳು ಲಭ್ಯವಿರುತ್ತದೆಯೇ?. ಇಲ್ಲದೆ ಇದ್ದಲ್ಲಿ ಜನ ಏನು ಮಾಡಬೇಕು?,ಇನ್ನೊಂದು ಅಂಗಡಿಗೆ ಹೇಗೆ ಹೋಗಬೇಕು. ಅಕ್ಕಿ ಮೂಟೆ ಮುಂತಾದ ಹೆಚ್ಚು ತೂಕವಿರುವ ಸಾಮಾನುಗಳನ್ನು ವಾಹನವಿಲ್ಲದೆ ಅಂಗಡಿಯಿಂದ ತರಲು ಸಾಧ್ಯವೇ? ಸಾಮಾನುಗಳನ್ನು ಮನೆಗೆ ಹೇಗೆ ಕೊಂಡೊಯ್ಯಬೇಕು? ತಲೆ ಹೊರೆಯಲ್ಲಿಯೇ? ಮಹಿಳೆಯರು ಮಧ್ಯ ವಯಸ್ಕರು,ಹಿರಿಯ ನಾಗರಿಕರು, ಅಶಕ್ತರು, ಮಕ್ಕಳು ಮುಂತಾದವರು ಏನು ಮಾಡಬೇಕು?. ನಡೆದು ಹೋಗಿ ಸಾಮಾನು ತರಲು ಸಾಧ್ಯವೇ. ಜನರ ಹಿತ ಕಾಪಾಡಲು ಆಡಳಿತ ಇರಬೇಕೆ ಹೊರತು ಜನರನ್ನು ಸಂಕಷ್ಟಕ್ಕೆ ಸಿಲುಕಿಸಲು ಅಲ್ಲ. ಈ ಆದೇಶ ಬಂದ ನಂತರ ಪೊಲೀಸರು ನೊಣವನ್ನೂ ಅಲುಗಾಡಲು ಬಿಡುತ್ತಿಲ್ಲ. ಅಗತ್ಯ್ ವಸ್ತುಗಳನ್ನು ಮನೆಗೆ ತಲುಪಿಸಲು ಕೊಟ್ಟ ಪಾಸಿಗು ಕಿಂಚಿತ್ತೂ ಬೆಲೆ ಕಲ್ಪಿಸುತ್ತಿಲ್ಲ. ಆದೇಶ ಆ ರೀತಿ ಇದೆ ಎಂದು ಪೊಲೀಸರು ಹೇಳುತ್ತಾರೆ.

ಕೋರೋಣ ಭೀತಿಗಿಂತ ಜಿಲ್ಲಾಡಳಿತ ಒಂದೊಂದು ದಿನ ಹೊರಡಿಸುವ ವಿಚಿತ್ರ ಆದೇಶದ ಭೀತಿಯಲ್ಲಿ ಜನ ಬದುಕುವ ಸ್ಥಿತಿ ನಮ್ಮ ಜಿಲ್ಲೆಯಲ್ಲಿದೆ. ನಾಳೆ ಏನು ಆಗುತ್ತದೊ ಎಂಬ ಆತಂಕ. ಆಡಳಿತ ಪಕ್ಷ ಯಾಕೆ ಇದರ ಬಗ್ಗೆ ಸರ್ವ ಪಕ್ಷ ಸಭೆಯನ್ನು ಇನ್ನು ಕರೆದಿಲ್ಲ. ಜಿಲ್ಲೆಯಲ್ಲಿ ಯಾವುದೇ ತುರ್ತು ಸಂಧರ್ಭಗಳಲ್ಲಿ ಸರ್ವ ಪಕ್ಷಗಳ ಸಭೆ ಕರೆದು ಸೂಕ್ತ ತೀರ್ಮಾನ ತೆದುಕೊಳ್ಳುವ ವಾಡಿಕೆಯಿತ್ತು. ಆದರೆ ಈಗಿನ ಆಡಳಿತ ಪಕ್ಷದವರಿಗೆ ನಾವೆಲ್ಲ ತಿಳಿದವರು ಪ್ರತಿಪಕ್ಷದ ಸಲಹೆ ಬೇಕಿಲ್ಲ ಎಂಬ ನಡೆಯಿಂದ ಈ ರೀತಿಯ ಸ್ಥಿತಿ ಜಿಲ್ಲೆಯಲ್ಲಿ ಇದೆ. ಕೂಡಲೇ ಈ ಆದೇಶವನ್ನು ಮರುಪರಿಶೀಲನೆ ಮಾಡಲು ಕಾಂಗ್ರೆಸ್ ಪಕ್ಷ ಆಗ್ರಹಿಸುತ್ತದೆ ಇಲ್ಲದೆ ಇದ್ದಲ್ಲಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪೊನ್ನುರಾಜ್ ಭೇಟಿ ಮಾಡಿ ಮನವಿ ಸಲ್ಲಿಸಲಿದೆ ಎಂದು ಅವರು ತಿಳಿಸಿದ್ದಾರೆ.


Spread the love